More

    ಆದಿವಾಸಿಗಳ ಜನತಾ ಪ್ರಣಾಳಿಕೆ ಬಿಡುಗಡೆ

    ಹುಣಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ‌್ಸುವವರಿಗೆ ಆದಿವಾಸಿಗಳ ಅಭಿಲಾಷೆ ಹಾಗೂ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ಆದಿವಾಸಿಗಳ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ತಿಳಿಸಿದರು.

    ನಗರದ ಡೀಡ್ ಸಂಸ್ಥೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ದಶಕಗಳ ಹೋರಾಟದ ನಂತರವೂ ಆದಿವಾಸಿಗಳ ಸಮಸ್ಯೆ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಸರ‌್ಸುತ್ತಿರುವವರು ಆದಿವಾಸಿಗಳ ಬಹುಮುಖ್ಯ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದಲ್ಲಿ ಮಾತ್ರ ಮತ ಹಾಕುವ ನಿರ್ಧಾರವನ್ನು ಒಮ್ಮತದಿಂದ ನಿರ್ಧರಿಸಲಾಗಿದೆ ಎಂದರು.

    ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ 2024ರ ಜ.26ರಂದು ಕೈಗೊಂಡ 18 ನಿರ್ಣಯಗಳನ್ನು ಜಾರಿಯಾಗಬೇಕು. 2009ರ ಏ.3ರಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರೊ.ಅಸ್ಸಾದಿ ವರದಿಯ ಶಿಾರಸ್ಸಿನನ್ವಯ 3418 ಆದಿವಾಸಿ ಕುಟುಂಬಕ್ಕೆ ತಲಾ 5 ಎಕರೆ ಭೂಮಿ ಹಾಗೂ ಯೋಗ್ಯ ಪುರ್ನವಸತಿ ನೀಡಬೇಕು. ಅರಣ್ಯವಾಸಿ ಹಾಗೂ ಮೂಲನಿವಾಸಿ ಬುಡಕಟ್ಟುಗಳ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆದಿವಾಸಿ ಅಭಿವೃದ್ಧಿ ಮಂಡಳಿ ರಚನೆಯಾಗಬೇಕು. ಆದಿವಾಸಿ ಹಾಡಿಗಳ ಯಜಮಾನರು ಹಾಗೂ ದೇವರಗುಡ್ಡರಿಗೆ ಗೌರವಧನ, ಆದಿವಾಸಿಗಳ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಯಾಗಬೇಕು ಎಂದು ಒತ್ತಾಯಿಸಿದರು.

    ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಸರ್ಕಾರ ಆದಿವಾಸಿಗಳಿಗೆ ನೀಡಿರುವ ಕೃಷಿ ಭೂಮಿಯನ್ನು ಪಕ್ಕಾ ಪೋಡು ಮಾಡಿ ಅಂತಿಮ ದಾಖಲೆ ನೀಡಿ ಪೋಡಿ ಮುಕ್ತ ಹಾಡಿಗಳನ್ನಾಗಿ ಘೋಷಿಸುವ ಕಾರ್ಯ ಮಾಡಬೇಕು. ಮೀಸಲಾತಿ ಉಪಯೋಗ ಆದಿವಾಸಿಗಳಿಗೆ ದೊರಕಲು ಒಳಮೀಸಲಾತಿಯನ್ನು ಜಾರಿಗೆ ತರಬೇಕು. ಯುವಜನರಿಗೆ ವಿವಿಧ ಕೌಶಲಗಳ ತರಬೇತಿ ನೀಡಿ ಸಂಪಾದನೆಯ ಹೊಸ ಮಾರ್ಗಗಳನ್ನು ದೊರಕಿಸಿಕೊಡಬೇಕು. ಜತೆಗೆ ಪೇಸಾ ಕಾಯ್ದೆ 1996 (ಆದಿವಾಸಿ ಪಂಚಾಯಿತಿ/ ಸ್ವಯಂ ಆಡಳಿತ ಕಾಯ್ದೆ)ಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

    ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ಅರಣ್ಯಗಳು ಆದಿವಾಸಿಗಳ ಪಾರಂಪರಿಕ ಜೀವನ ನಿರ್ವಹಣೆಯ ತಾಣಗಳಾಗಿವೆ. ಹಾಗಾಗಿ ವನ್ಯಜೀವಿ ಸಂರಕ್ಷಣೆಯ ಹೆಸರಿನಲ್ಲಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಬಾರದು. ಬದಲಾಗಿ ಆದಿವಾಸಿಗಳನ್ನು ಅರಣ್ಯ ರಕ್ಷಕರೆಂದು ಘೋಷಿಸಿ ಅವರಿಗೆ ಮಾರ್ಗದರ್ಶನ ನೀಡಬೇಕು. ಹಾಡಿ ಯೋಜನೆಯನ್ನು ಜಾರಿಗೆ ತಂದು ಆದಿವಾಸಿಗಳಿಗೆ ನಗರದಲ್ಲಿ ಕನಿಷ್ಠ 100 ಕುಟುಂಬಗಳಾದರೂ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

    ಸಭೆಯಲ್ಲಿ ಡೀಡ್ ಸಂಸ್ಥೆಯ ಪ್ರಕಾಶ್, ಹರ್ಷ, ಜಯಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts