More

    ತೇಜಸ್ವಿನಿ ಅನಂತಕುಮಾರ್​ ಅಂಕಣ| ಕಸ ಕಡಿಮೆ ಮಾಡಿಯೂ ವಾರಿಯರ್​ ಆಗಬಹುದು!

    ಲಾಕ್​ಡೌನ್​ ಅವಧಿಯಲ್ಲಿ ಕಸದ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿರುವುದು ವಿಷಾದಕರ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ, ಕಸದ ಪ್ರಮಾಣವನ್ನು ಕಡಿಮೆಗೊಳಿಸುವ, ವಸ್ತುಗಳ ಮರುಬಳಕೆಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿದೆ.

    ತೇಜಸ್ವಿನಿ ಅನಂತಕುಮಾರ್​ ಅಂಕಣ| ಕಸ ಕಡಿಮೆ ಮಾಡಿಯೂ ವಾರಿಯರ್​ ಆಗಬಹುದು!ಕರೊನಾ ಸೋಂಕು ಮತ್ತು ಅದರ ತೀವ್ರತೆಯ ಪರಿಣಾಮ ಜೀವನವಿಧಾನ ತೀವ್ರ ಸ್ವರೂಪದಲ್ಲಿ ಬದಲಾವಣೆ ಆಗಿದೆ. ಕಳೆದೊಂದು ವರ್ಷದಲ್ಲಿ ಹಲವು ಹೊಸ ಶಬ್ದಗಳನ್ನು ಕೇಳಿದ್ದೇವೆ. ಕರೊನಾ, ವೈರಸ್​, ಸ್ಯಾನಿಟೈಜೇಶನ್​, ಮುಖಗವಸು, ಕೈಗವಸು, ಶಿಲೀಂಧ್ರ (ಫಂಗಸ್​) ಹೀಗೆ ಹಲವು ಶಬ್ದಗಳನ್ನು ವ್ಯಾಪಕವಾಗಿ ಬಳಸುತ್ತಿದ್ದೇವೆ. ಇದೇ ರೀತಿ ತುಂಬ ಚರ್ಚೆಯಲ್ಲಿರುವ ಪದ “ಕೋವಿಡ್​ ವಾರಿಯರ್​’&ಕರೊನಾ ಸೇನಾನಿ. ಕರೊನಾದ ಮೊದಲ ಅಲೆಯ ಸಂದರ್ಭದಲ್ಲೂ ಅದಮ್ಯ ಚೇತನ ಸಂಸ್ಥೆ ಆಹಾರ ತಯಾರಿಕೆ, ಊಟ ವಿತರಣೆಗೆ ವಿಶೇಷ ಶ್ರಮ ಹಾಕಿತ್ತು. ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ ಆಗ ಊಟ ನೀಡಲಾಗಿತ್ತು. ಆಹಾರ ಪ್ಯಾಕಿಂಗ್​, ಸರಬರಾಜು ಮಾಡುವ, ದಿನಸಿ ಕಿಟ್​ ತಯಾರಿಸುವ 300 ಸ್ವಯಂಸೇವಾಕರ್ತರಿಗೆ “ಕೋವಿಡ್​ ವಾರಿಯರ್​’ ಪಾಸ್​ ನೀಡಿದ್ದೆವು. ಸೋಂಕು ನಿಯಂತ್ರಣಕ್ಕೆ ಬಂದ ನಂತರ ನಾಲ್ಕು ಪ್ರತ್ಯೇಕ ಕಾರ್ಯಕ್ರಮಗಳನ್ನು ಮಾಡಿ, ಸುರತ ಅಂತರ ಕಾಯ್ದುಕೊಂಡು ಆ ಸೇವಾಕರ್ತರಿಗೆ ಕೋವಿಡ್​ ಸೇನಾನಿ ಎಂಬ ಪ್ರಮಾಣಪತ್ರ ನೀಡಿ, ಕೃತಜ್ಞತೆ ವ್ಯಕ್ತಪಡಿಸಿದ್ದೆವು.

    ಕೋವಿಡ್​ ವಾರಿಯರ್​ ಎಂದರೆ ಈ ಕರೊನಾ ಸೋಂಕು ಮತ್ತು ಅದು ಸೃಷ್ಟಿಸಿರುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವವರು. ಇದರಲ್ಲಿ ವೈದ್ಯರು, ನರ್ಸ್​, ಇತರ ವೈದ್ಯಕಿಯ ಸಿಬ್ಬಂದಿ ಮುಂಚೂಣಿಯಲ್ಲಿ ಇರುವುದರಿಂದ ಅವರು ಫ್ರಂಟ್​ಲೈನ್​ ವಾರಿಯರ್ಸ್​ (ಗಡಿಯಲ್ಲಿ ಸೈನಿಕರು ಶತ್ರುಗಳನ್ನು ಮುಖಾಮುಖಿ ಯಾಗಿ ಎದುರಿಸುವಂತೆ). ಆದರೆ, ಎಲ್ಲರಿಗೂ ಫ್ರಂಟ್​ಲೈನ್​ ವಾರಿಯರ್​ ಆಗಲು ಸಾಧ್ಯವಿಲ್ಲ. ಅದಕ್ಕೆ ವಿಶೇಷವಾದ ಪರಿಣಿತಿ, ತರಬೇತಿ ಬೇಕಾಗುತ್ತದೆ.

    ಸೋಂಕು ಪ್ರಸರಣದ ತಡೆ ಮತ್ತು ಸೋಂಕು ಸೃಷ್ಟಿಸಿರುವ ಇತರ ಸಮಸ್ಯೆಗಳ ವಿರುದ್ಧ ಎರಡನೇ ಹಂತದ ಕೋವಿಡ್​ ಸೇನಾನಿಗಳು ಕೂಡ ಅಷ್ಟೇ ಪ್ರಬಲವಾಗಿ ದುಡಿಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿಯ ಸ್ವಚ್ಛತಾ ಸಿಬ್ಬಂದಿ, ಔಷಧ ಮತ್ತು ಲಸಿಕೆ ತಯಾರಿಸುವ, ಅದನ್ನು ವಿತರಿಸುವ ಸಿಬ್ಬಂದಿ, ಮುಂಚೂಣಿಯಲ್ಲಿರುವ ಕರೊನಾ ಸೇನಾನಿಗಳಿಗೆ ಊಟವನ್ನು ತಯಾರು ಮಾಡಿ ಕಳುಹಿಸುತ್ತಿರುವವರು& ಇವರೆಲ್ಲ ಮತ್ತೊಂದು ಹಂತದ ಕರೊನಾ ಸೇನಾನಿಗಳೇ. ಈ ಬಾರಿ ಅದಮ್ಯ ಚೇತನ ಸಂಸ್ಥೆ ಬೆಂಗಳೂರಿನ 55 ಆಸ್ಪತ್ರೆಗಳ, 6500 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಇವರಿಗೆಲ್ಲ ಸರಿಯಾದ ಆಹಾರ ಸಿಗುವುದಿಲ್ಲ ಎಂಬ ವಾಸ್ತವವನ್ನು ಅರಿತು ರುಚಿ&ಶುಚಿಯಾದ ಪೌಷ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ.

    ನಿಯಮಗಳ ಪಾಲನೆ ಅಗತ್ಯ: ಜನರ ಅನಗತ್ಯ ಓಡಾಟ ನಿಯಂತ್ರಿಸುವುದು, ಕಳ್ಳಸಂತೆಯಲ್ಲಿ ಔಷಧ ಮಾರಾಟ ಆಗದಂತೆ ನಿಗಾ ವಹಿಸುವುದು, ಜನರು ಸುರಾ ನಿಯಮಗಳನ್ನು ಪಾಲಿಸುವಂತೆ ಮಾಡುವುದು& ಹೀಗೆ ಹಲವು ಮಹತ್ವದ ಜವಾಬ್ದಾರಿಗಳನ್ನು ಪೊಲೀಸರು ನಿರ್ವಹಿಸುತ್ತ, ಕರೊನಾ ಸೇನಾನಿಗಳಾಗಿ ಬದಲಾಗಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ನಿಯಮಗಳನ್ನು ಮಾಡಿದ ಮೇಲೆ ಸರಿಯಾದ ಪಾಲನೆ ಜನರಿಂದ ಆಗಬೇಕು. ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದರೆ ಪೊಲೀಸರ ಅವಶ್ಯಕತೆಯೇ ಇರುವುದಿಲ್ಲ. ವಿದ್ಯಾವಂತ ಸಮಾಜದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿರುವುದು ಖಂಡಿತವಾಗಿಯೂ ಅಭಿವೃದ್ಧಿಯ ಲಕ್ಷಣವಲ್ಲ. ಇಂಥ ಕಠಿಣ ಸನ್ನಿವೇಶದಲ್ಲಿ ಜನರು ಸುರಕ್ಷತಾ ಕ್ರಮಗಳನ್ನು, ನಿಯಮಗಳನ್ನು ರ್ನಿಲಸುವುದು, ಮಾಸ್ಕ್​ ಹಾಕಿಕೊಳ್ಳದೆ ಓಡಾಡುವುದು, ಕಾರ್ಯಕ್ರಮಗಳಲ್ಲಿ ಅನವಶ್ಯಕವಾಗಿ ಜನರನ್ನು ಜಮಾಯಿಸುವುದು ಸೇರಿದಂತೆ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿರುವುದು ಖೇದಕರ ಬೆಳವಣಿಗೆ. ಮತ್ತೊಂದೆಡೆ, ಇಂಥ ಮಾನವೀಯ ಸಂಕಷ್ಟವನ್ನು ಅರ್ಥಮಾಡಿಕೊಳ್ಳದೆ ಕಾಳಸಂತೆಯಲ್ಲಿ ವೈದ್ಯಕಿಯ ಆಮ್ಲಜನಕ, ರೆಮ್​ಡೆಸಿವರ್​ ಸೇರಿ ಇತರ ಅಗತ್ಯ ಔಷಧ ಮಾರಾಟ ಮಾಡುತ್ತಿರುವ ವ್ಯಕ್ತಿ ಮತ್ತು ಜಾಲಗಳನ್ನು ಕಂಡಾಗ ಮನುಷ್ಯತ್ವ ಎಲ್ಲಿ ಹೋಯಿತು ಎಂದು ಬೇಸರವಾಗುತ್ತದೆ.

    ಪೌರಕಾರ್ಮಿಕರ ಶ್ರಮ: ಇನ್ನೊಂದು ಹಂತದ ಕರೊನಾ ಸೇನಾನಿಗಳು ಲಾಕ್​ಡೌನ್​ ಸಮಯದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಬೆಳಗಾಗೆದ್ದು ಕರ್ತವ್ಯಕ್ಕೆ ಹಾಜರಾಗುವ, ಅಪಾಯವನ್ನು ಲೆಕ್ಕಿಸದೆ ತುಂಬ ನಿಷ್ಠೆ, ಶ್ರದ್ಧೆ ಯಿಂದ ಕಾರ್ಯನಿರ್ವಹಿಸುತ್ತಿರುವವರು ನಮ್ಮ ಪೌರಕಾರ್ಮಿಕರು. ನಗರಪ್ರದೇಶಗಳಲ್ಲಂತೂ ಇವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಬೆಂಗಳೂರಿನಲ್ಲೇ 18,500 ಪೌರಕಾರ್ಮಿಕರಿದ್ದು, ಈ ಪೈಕಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಕರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಅರಿವಿದ್ದರೂ, ಒಂದೂ ದಿನ ರಜೆ ಹಾಕದೆ ಬೆಂಗಳೂರಿನ ಲಾಂತರ ಮನೆಗಳ ಮುಂದೆ ಬಂದು, ಕಸ ಸಂಗ್ರಹಿಸುತ್ತಾರೆ. ಕಸಸಂಗ್ರಹ ವಾಹನದ ಚಾಲಕರು, ಕಸವನ್ನು ವಿಲೇವಾರಿ ಮಾಡುವ ಸಿಬ್ಬಂದಿ ಸೇರಿ 25&30 ಸಾವಿರ ಜನರು ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇವರನ್ನೆಲ್ಲ ಕರೊನಾ ವಾರಿಯರ್ಸ್​ ಆಗಿಸಿದ್ದು ಯಾರು ಎಂಬ ಪ್ರಶ್ನೆ ಪದೇಪದೆ ಉದ್ಭವವಾಗುತ್ತದೆ. ಏಕೆಂದರೆ, ನಗರಪ್ರದೇಶದಲ್ಲಿ ವಾಸಿಸುವ, ಬಹುತೇಕರು ವಿದ್ಯಾವಂತರೇ ಆಗಿರುವ ನಾವು ದಿನದಿಂದ ದಿನಕ್ಕೆ ಕಸದ ಪ್ರಮಾಣವನ್ನು ಹೆಚ್ಚಿಸುತ್ತಿದ್ದೇವೆ ಎಂಬುದು ಶೋಚನೀಯ.

    ಬೆಂಗಳೂರು ಕಸದ ಸಮಸ್ಯೆ ಜಾಗತಿಕ ಸುದ್ದಿಯಾಗಿದ್ದು, ಕಸ ನಿರ್ವಹಣೆಯ ಸಮಸ್ಯೆಗಳು, ಸರ್ಕಾರ ಅದಕ್ಕಾಗಿ ಮಾಡುತ್ತಿರುವ ಖರ್ಚುವೆಚ್ಚ, ಒಟ್ಟಾರೆ ಈ ಸಮಸ್ಯೆ ಬಗ್ಗೆ ನಡೆದಿರುವ ಚರ್ಚೆ, ಪರಿಹಾರದ ಹಾದಿ& ಇವುಗಳೆಲ್ಲದರ ಬಗ್ಗೆ ಅರಿವಿದ್ದರೂ ಕಸ ಉತ್ಪತ್ತಿ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಕಸನಿರ್ವಹಣೆ ಮಾಡುವ ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ದಶಕಗಳಿಂದ “ಹಸಿರು ದಳ’ ಎಂಬ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಈ “ಹಸಿರು ದಳ’ವನ್ನು ಆರಂಭಿಸಿದ ನನ್ನ ಸ್ನೇಹಿತೆ ನಳಿನಿ ಶೇಖರ್​ ಜತೆಗೆ ಇತ್ತೀಚೆಗೆ ಕಸದ ಸಮಸ್ಯೆಯ ಕುರಿತು ಚರ್ಚಿಸುತ್ತಿದ್ದಾಗ, ಹಲವು ಮಹತ್ವದ ವಿಷಯಗಳು ಮುನ್ನೆಲೆಗೆ ಬಂದವು. ನಾನು ಕುತೂಹಲದಿಂದ, “ಈಗ ಜನರೆಲ್ಲ ಮನೆಯಲ್ಲಿದ್ದಾರೆ. ಲಾಕ್​ಡೌನ್​ನಿಂದ ಕಸದ ಪ್ರಮಾಣ ಕಡಿಮೆ ಆಗಿರಬೇಕಲ್ವ?’ ಎಂದು ಪ್ರಶ್ನಿಸಿದೆ. ಅದಕ್ಕೆ ನಳಿನಿಯವರು ವಾಸ್ತವ ಚಿತ್ರಣವನ್ನು ತೆರೆದಿಟ್ಟರು. “ಮೊದಲಿಗಿಂತ ಕಸದ ಪ್ರಮಾಣ ಕನಿಷ್ಟವೆಂದರೂ ಶೇಕಡ 20&30 ಜಾಸ್ತಿಯಾಗಿದೆ. ಮನೆಯಲ್ಲಿರುವ ಜನ ಆನ್​ಲೈನ್​ ಮೂಲಕ ಊಟ, ತಿಂಡಿ, ಇತರ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಪಿಜ್ಜಾ ಬಾಕ್ಸ್​ಗಳು, ಅದರ ಜತೆಗಿನ ವಿವಿಧ ಪೊಟ್ಟಣಗಳು, ಪ್ಲಾಸ್ಟಿಕ್​ ಸ್ಯಾಷೆಗಳು, ಚಿಪ್ಸ್​ನ ಪ್ಯಾಕೆಟ್​ಗಳು ಕಸದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಬಳಸಿ ಬಿಸಾಕುವ ಮಾಸ್ಕ್​ಗಳ ಬಳಕೆಯೂ ಹೆಚ್ಚಿದ್ದು, ಕಸದಲ್ಲಿ ಇವುಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ’.

    ಮತ್ತೊಂದೆಡೆ, ಅಗತ್ಯ ಇರುವವರಿಗೆ ಊಟದ ಪೊಟ್ಟಣ ವಿತರಿಸಲಾಗುತ್ತಿದ್ದು, ಇದು ಸೃಷ್ಟಿಸುತ್ತಿರುವ ತ್ಯಾಜ್ಯವೇನು ಕಡಿಮೆಯಲ್ಲ. ಇಂದಿರಾ ಕ್ಯಾಂಟಿನ್​ನಿಂದಲೇ 3 ಲಕ್ಷ ಊಟದ ಖಾಲಿ ಪೊಟ್ಟಣಗಳು ಕಸದ ಒಡಲು ಸೇರುತ್ತವೆ. ಹೀಗಿರು ವಾಗ ಇತರೆಡೆಯ ಊಟದ ಖಾಲಿ ಪೊಟ್ಟಣಗಳು, ಹೋಟೆಲ್​ ಪಾರ್ಸೆಲಿನ ತ್ಯಾಜ್ಯವನ್ನೆಲ್ಲ ಸೇರಿಸಿದರೆ ಕಸದ ಪ್ರಮಾಣ ಎಷ್ಟಾಗಬಹುದು ಎಂದು ಊಹಿಸಿದರೆ ಭಯವಾಗುತ್ತದೆ. ಅದಮ್ಯ ಚೇತನದಿಂದ ಕೋವಿಡ್​ ಆಸ್ಪತ್ರೆಗಳಿಗೆ ಊಟವನ್ನು ಸ್ಟೀಲ್​ ಡಬ್ಬಗಳಲ್ಲಿ ಕೊಡಲು ಯತ್ನಿಸಿದೆವು. ಆದರೆ, ಈಗಿನ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ ಎಂಬುದು ಗೊತ್ತಾಗಿ, ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್​ ಡಬ್ಬಗಳಲ್ಲಿ ನೀಡುತ್ತಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಸಾವಿರಾರು ಪೌರಕಾರ್ಮಿಕರು ಜೀವವನ್ನು ಪಣಕ್ಕಿಟ್ಟು ಬೀದಿಗೆ ಬರುವ ಅಗತ್ಯವಿದೆಯಾ? ಈ ಬಗ್ಗೆ ನಾವು ಕೊಂಚ ಯೋಚಿಸಬೇಕು. ಅದಮ್ಯ ಚೇತನ ಸಂಸ್ಥೆ ಕಸರಹಿತ, ಹಸಿರು ಇಂಧನ ಅಡುಗೆಮನೆ ರೂಪಿಸಿರುವಂತೆಯೇ ಅನೇಕ ಸಮಾಜಸೇವೆ ಸಂಸ್ಥೆಗಳು, ಸಮೂಹಗಳು ಮತ್ತು ಪರಿಸರಪ್ರೇಮಿಗಳು ಈ ಮಾರ್ಗದಲ್ಲಿ ಸಾಗಿ, ಕಸದ ಪ್ರಮಾಣವನ್ನು ಶೂನ್ಯವಾಗಿಸಿದ್ದಾರೆ ಇಲ್ಲವೆ ಕಡಿಮೆಗೊಳಿಸಿದ್ದಾರೆ. ಇದನ್ನು ಸರಳ ವಿಧಾನದ ಮೂಲಕ ಪ್ರತಿ ಮನೆಯಲ್ಲಿಯೂ ಅಳವಡಿಸಿಕೊಳ್ಳಲು ಸಾಧ್ಯವಿದೆ. ಶೂನ್ಯಕಸ ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಕಸದ ಪ್ರಮಾಣವನ್ನು ಕಡಿಮೆಗೊಳಿಸಲಾದರೂ ಯತ್ನಿಸಬಹುದಲ್ಲ? ವಸ್ತುಗಳನ್ನು ಕೊಂಡುಕೊಳ್ಳುವಾಗ, ಬಳಸುವಾಗ, ಬಿಸಾಡುವಾಗ ಸ್ವಲ್ಪ ಯೋಚನೆ ಮಾಡಿದರೆ ಖಂಡಿತ ಕಸವನ್ನು ತಗ್ಗಿಸಬಹುದು.

    ಹಲವು ದಾರಿಗಳು: ನಮ್ಮ ಮನೆಗಳಲ್ಲೇ ಹಸಿಕಸದಿಂದ ಗೊಬ್ಬರ ತಯಾರಿಸಿ ಕೊಳ್ಳುವುದು ಕಷ್ಟವೇನಲ್ಲ. ಈ ಸಣ್ಣ ಹೆಜ್ಜೆಯಿಂದ ಹಸಿಕಸದ ಉತ್ಪಾದನೆಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಿದೆ. ಒಣಕಸವನ್ನು ಕಡಿಮೆ ಮಾಡಲೂ ದಾರಿಗಳಿವೆ. ವಸ್ತುಗಳನ್ನು ಕೊಳ್ಳುವಾಗಲೇ ಬಟ್ಟೆ ಚೀಲದಲ್ಲಿ ತಂದರೆ ಪ್ಲಾಸ್ಟಿಕ್​ ಸಂಗ್ರಹ ಕಡಿಮೆಯಾಗುತ್ತದೆ. ಅನಿವಾರ್ಯವಾಗಿ ಸಂಗ್ರಹವಾದ ಪ್ಲಾಸ್ಟಿಕ್​ನ್ನು ತೊಳೆದು, ಬಿಸಿಲಲ್ಲಿ ಒಣಗಿಸಿ ಮರುಬಳಕೆ ಮಾಡಬಹುದು. ಅಲ್ಲದೆ, ಪ್ಲಾಸ್ಟಿಕ್​ನ್ನು ಉಪಯೋಗಿಸಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ತಯಾರಿಸಿ, ನಾವು ಬಳಸಬಹುದು, ಇತರರಿಗೆ ನೀಡಬಹುದು. ಕಾಗದ ಮತ್ತು ರಟ್ಟಿನ ತುಂಡುಗಳನ್ನು ಮನೆಯಲ್ಲೇ ತಯಾರಿಸಬಹುದಾದ ಗೊಬ್ಬರದಲ್ಲಿ ಉಪಯೋಗಿಸಬಹುದು. ಮನೆ ಮುಂದಿನ ಬೀದಿಯ ಎಲೆಗಳನ್ನು ಗೊಬ್ಬರಕ್ಕೆ ಬಳಸಬಹುದು. ಹೀಗೆ ನಮ್ಮ ಮನೆಯ ಕಸದ ಪ್ರಮಾಣ ಕಡಿಮೆ ಮಾಡಿ, ಮನೆ ಮುಂದಿನ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕೋವಿಡ್​ ಸೇನಾನಿಗಳಿಗೆ ಸನ್ಮಾನವನ್ನೇನೋ ಮಾಡುತ್ತಿದ್ದೇವೆ. ಆದರೆ, ಅವರ ಕೆಲಸದ ಭಾರವನ್ನು ತಗ್ಗಿಸುವುದೇ ಅವರಿಗೆ ತೋರುವ ನಿಜವಾದ ಗೌರವ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜತೆಗೆ ವೈದ್ಯಕಿಯ ತ್ಯಾಜ್ಯ ಅಂದರೆ ಆಜಿಟಜಚ್ಢಚ್ಟಛ ಡಿಚಠಠಿಛಿನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಅಗತ್ಯ.

    ಈಗಿನ ಸನ್ನಿವೇಶದಲ್ಲಿ ನಾವೇನು ಮಾಡಬಹುದು?:

    • ಬಟ್ಟೆ, ಪಾತ್ರೆ, ಸ್ವಚ್ಛತೆ ಸೇರಿ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು.
    •  ನಮ್ಮ ಆಹಾರ ನಾವೇ ತಯಾರಿಸಿಕೊಳ್ಳುವುದರಿಂದಲೂ ಕಸ ತಗ್ಗುತ್ತದೆ.
    •  ಬೇರೆಯವರಿಗೆ ನೆರವಾಗುವುದು & ಮಾಸ್ಕ್​ಗಳನ್ನು ಹೊಲೆದು ಕೊಡುವುದು, ತೀರಾ ಅಗತ್ಯ ಇದ್ದವರಿಗೆ ಅಡುಗೆ ಮಾಡಿಕೊಡುವುದು, ಉಳ್ಳವರು ಆರ್ಥಿಕ ಸಹಾಯ ಮಾಡುವುದು,
    •  ಮನೆಯಲ್ಲೇ ಕಸದಿಂದ ಗೊಬ್ಬರ ತಯಾರಿಸುವುದು.
    •  ಮಳೆಗಾಲ ಅಡಿಯಿಟ್ಟಿರುವುದರಿಂದ ಸಸಿಗಳನ್ನು ತಯಾರಿಸುವುದು.
    •  ನಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಟೆರೆಸ್​ನಲ್ಲೇ ಬೆಳೆದುಕೊಳ್ಳುವುದು.
    •  ಹಣ್ಣಿನ ಸಸಿಗಳನ್ನು ತಯಾರಿಸಿ, ವಿತರಿಸುವುದು.
    •  ಕಷಾಯ ಪುಡಿ ತಯಾರಿಸಿ ನಾವು ಬಳಸಿ, ಇತರರಿಗೂ ನೀಡುವುದು.
    •  ಫೋನ್​​ ಅಥವಾ ಝೂಮ್​ನಂಥ ಆಧುನಿಕ ಸಂವಹನ ಮಾಧ್ಯಮ ಬಳಸಿ ಪಾಠ, ಇತರ ಕೌಶಲಗಳನ್ನು ಹೇಳಿಕೊಡುವುದು.
    •  ಕರೊನಾ ಸೋಂಕಿಗೆ ಒಳಗಾದ ಸ್ನೇಹಿತರು, ಆತ್ಮೀಯರಿಗೆ ೋನ್​ ಮೂಲಕ ಮಾತನಾಡಿ, ಸ್ಥೈರ್ಯ ತುಂಬುವುದು.

    ಇಂಥ ಸರಳ ಆದರೆ ಪರಿಣಾಮಕಾರಿಯಾದ ಕ್ರಮಗಳ ಮೂಲಕ ನಾವೆಲ್ಲರೂ ಕರೊನಾ ಸೇನಾನಿಗಳಾಗೋಣ. ಈ ಮಹಾಮಾರಿ ವಿರುದ್ಧ ಪ್ರಬಲವಾಗಿ ಹೋರಾಡೋಣ.
    (ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts