More

    ಕೆಂಪುಕೋಟೆ ಹಿಂಸಾಚಾರ ಆರೋಪಿ ಸುಖದೇವ್ ಸಿಂಗ್ ಪೊಲೀಸ್ ವಶಕ್ಕೆ

    ನವದೆಹಲಿ: ಜನವರಿ 26 ರಂದು ದೆಹಲಿಯ ಕೆಂಪುಕೋಟೆಯಲ್ಲಿ ಹಿಂಸಾಚಾರ ನಡೆಸಿದ ಪ್ರತಿಭಟನಾಕಾರರ ದಂಡಿನ ನೇತೃತ್ವ ವಹಿಸಿದ್ದ ಎನ್ನಲಾದ ಸುಖದೇವ್ ಸಿಂಗ್ ಎಂಬುವವನನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಚಂಡೀಗಡದಲ್ಲಿ ತಲೆ ಮರೆಸಿಕೊಂಡಿದ್ದ ಹರಿಯಾಣದ ಕರ್ಣಾಲ್ ನಿವಾಸಿಯಾದ 61 ವರ್ಷ ವಯಸ್ಸಿನ ಸಿಂಗ್​ನನ್ನು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡವು ಪತ್ತೆ ಹಚ್ಚಿದೆ.

    ಗಣರಾಜ್ಯೋತ್ಸವದ ದಿನ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಯೋಜಿಸಲಾಗಿದ್ದ ರೈತರ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ನೂರಾರು ಪ್ರತಿಭಟನಾಕಾರರು ಒಪ್ಪಿಕೊಂಡಿದ್ದ ರೂಟ್ ಬದಲಾಯಿಸಿ, ದೆಹಲಿ ನಗರದೊಳಕ್ಕೆ ನುಗ್ಗಿದ್ದರು. ಹಿಂಸಾಚಾರಕ್ಕೆ ತೊಡಗಿ ಪೊಲೀಸರ ಮೇಲೆ ಆಕ್ರಮಣ ನಡೆಸುವುದರೊಂದಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು. ಈ ಗಲಭೆಗಳ ಸಂಬಂಧವಾಗಿ ದಾಖಲಿಸಲಾಗಿರುವ ಪ್ರಕರಣಗಳ ಪ್ರಮುಖ ಆರೋಪಿಗಳಲ್ಲಿ ಸುಖದೇವ್ ಸಿಂಗ್​ ಕೂಡ ಒಬ್ಬರು.

    ಇದನ್ನೂ ಓದಿ: ದೀಪ್ ಸಿಧು ಫೇಸ್​ಬುಕ್ ಖಾತೆ ನಡೆಸುತ್ತಿದ್ದಾಳೆ ಒಬ್ಬ ವಿದೇಶೀ ಸ್ನೇಹಿತೆ !

    ಕಳೆದ ಹತ್ತು ದಿನಗಳಿಂದ ಸಿಂಗ್​ನನ್ನು ಹುಡುಕುತ್ತಿದ್ದ ದೆಹಲಿ ಪೊಲೀಸರು, ಸುಳಿವು ನೀಡಿದವರಿಗೆ 50,000 ರೂಪಾಯಿ ನಗದು ಬಹುಮಾನವನ್ನು ಕೂಡ ಘೋಷಿಸಿದ್ದರು. ಭಾನುವಾರ ಸಿಕ್ಕ ಖಚಿತ ಮಾಹಿತಿಯ ಮೇಲೆ ಚಂಡೀಗಡಕ್ಕೆ ತೆರಳಿದ್ದು, ಅಲ್ಲಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಚ್ಚಿಟ್ಟುಕೊಂಡಿದ್ದ ಸಿಂಗ್​ನನ್ನು ಬಂಧಿಸಿದ್ದಾರೆ.

    ಸುಖದೇವ್ ಸಿಂಗ್​ನೊಂದಿಗೆ ಜಗ್ಬೀರ್ ಸಿಂಗ್, ಬೂಟಾ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಎಂಬುವರ ಬಗ್ಗೆ ಸುಳಿವು ನೀಡಿದವರಿಗೆ ಕೂಡ 50 ಸಾವಿರ ರೂಪಾಯಿ ಬಹುಮಾನವನ್ನು ನಿಗದಿಪಡಿಸಲಾಗಿದೆ. ಬಾವುಟ ಹಾರಿಸಿದ ಕೃತ್ಯ ನಡೆಸಿದ ದೀಪ್ ಸಿಧು, ಜುಗ್​ರಾಜ್ ಸಿಂಗ್, ಗುರ್​ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಎಂಬುವರ ಮೇಲೆ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ.

    ಈ ಬಂಧನದೊಂದಿಗೆ ಗಣರಾಜ್ಯೋತ್ಸವ ದಿನದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವವರ ಸಂಖ್ಯೆಯು 127 ಕ್ಕೆ ತಲುಪಿದೆ. ಇದಕ್ಕೂ ಮುಂಚೆ ಭಾನುವಾರ ಬೆಳಿಗ್ಗೆ ದೆಹಲಿ ನಿವಾಸಿಗಳಾದ ಹರಪ್ರೀತ್ ಸಿಂಗ್ (32), ಹರಜೀತ್ ಸಿಂಗ್ (48) ಮತ್ತು ಧರ್ಮೇಂದರ್ ಸಿಂಗ್ (55) ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್)

    ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಕೆಂಪುಕೋಟೆಗೆ ಮುತ್ತಿಗೆ, ಅನ್ಯ ಧ್ವಜಾರೋಹಣ

    ಹಿಮಸ್ಫೋಟ: ರಕ್ಷಣಾ ಸಿಬ್ಬಂದಿಯೂ ನಾಪತ್ತೆ- ಸಿಗುತ್ತಲೇ ಇವೆ ಮೃತದೇಹ; ಉತ್ತರ ಪ್ರದೇಶದಲ್ಲಿ ಹೈ ‌ಅಲರ್ಟ್‌

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts