More

    4,400 ಸ್ವಯಂ ಸೇವಕರ ನೇಮಕ!

    ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಅಂಗವಿಕಲರು ಮತದಾನದಿಂದ ವಂಚಿತರಾಗುವುದನ್ನು ತಡೆಗಟ್ಟಲು ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯು 4,400 ಸ್ವಯಂ ಸೇವಕರನ್ನು ನಿಯೋಜನೆಗೆ ಮುಂದಾಗಿದೆ.

    ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಅಂಗವಿಕಲ ಮತದಾರರು ಇದ್ದಾರೆ. ಆದರೆ, ಇವರಲ್ಲಿ ಬಹುತೇಕ ಅಂಗವಿಕಲರು ಪ್ರತಿ ಚುನಾವಣೆಯಲ್ಲಿ ಸಾರಿಗೆ ಸೌಲಭ್ಯ, ಜಾಗೃತಿ ಕೊರತೆ ವಿವಿಧ ಕಾರಣಗಳಿಂದಾಗಿ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಕೈ, ಕಾಲು ವೈಕಲ್ಯ ಹೊಂದಿದ್ದರೆ ರ‌್ಯಾಂಪ್ ವ್ಯವಸ್ಥೆ, ವ್ಹೀಲ್‌ಚೇರ್, ಅಂಧರಿದ್ದರೆ ಬ್ರೈಲ್ ಲೀಪಿ ಹಾಗೂ ಇನ್ನಿತರ ವೈಕಲ್ಯ ಹೊಂದಿದ್ದರೆ ಅವರಿಗೆಲ್ಲಾ ಮತಗಟ್ಟೆಗಳಲ್ಲಿ ಸೌಲಭ್ಯ ಕಲ್ಪಿಸಿಕೊಡುತ್ತಿದೆ. ಅಲ್ಲದೆ, ಅಂಧ ಮತದಾರರನ್ನು ಕರೆತರಲು ಸಾರಿಗೆ ಜತೆಗೆ ಸಹಾಯಕರನ್ನು ನೇಮಿಸಲಾಗುತ್ತಿದೆ.

    ಗೋಕಾಕ, ಚಿಕ್ಕೋಡಿ, ಯಮಕನಮರಡಿ, ಅರಬಾವಿ,ಹುಕ್ಕೇರಿ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರಗಳಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಅಂಗವಿಕಲರ ಮತದಾರರಿದ್ದಾರೆ. ಈ ಹಿನ್ನೆಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 4,434 ಮತಗಟ್ಟೆಗಳಲ್ಲಿ ತಲಾ ಒಬ್ಬರಂತೆ ಅಂಗವಿಕಲರ ಮತದಾರರಿಗಾಗಿಯೇ ಸುಮಾರು 4,400 ಜನ ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಅವಶ್ಯಬಿದ್ದ ಕಡೆಯಲ್ಲಾ ಸಾರಿಗೆ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಅಂಗವಿಕಲ ಮತದಾರರನ್ನು ಗುರುತಿಸುವ ಕೆಲಸ ನಡೆದಿದೆ.

    ಈಗಾಗಲೇ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ ಅಂಧರು, ಕೈ, ಕಾಲು ಇತರ ದೈಹಿಕ ಅಂಗವೈಕಲ್ಯ ಹೊಂದಿರುವವರನ್ನು ಗುರುತಿಸುವ ಕೆಲಸವನ್ನು ಆಯಾ ಗ್ರಾಪಂಗಳ ಮೂಲಕ ಮಾಡಲಾಗುತ್ತಿದೆ. ಅಲ್ಲದೆ, ಆಯಾ ಅಂಗವಿಕಲರ ಸಂಘಟನೆಗಳ ಮೂಲಕವೇ ಮತದಾನ ಕುರಿತು ತಿಳಿವಳಿಕೆ ಜತೆಗೆ ಜಾಗೃತಿ ಕಾರ್ಯಕ್ರಮಗಳಲ್ಲಿ ಅವರನ್ನು ಭಾಗಿಯನ್ನಾಗಿಸಲಾಗುತ್ತಿದೆ ಎಂದು ಸ್ವೀಪ್ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.

    ಅಂಗವಿಕಲರು ಮತದಾನದಿಂದ ವಂಚಿತರಾಗದಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನ ಸೌಲಭ್ಯ ಕಲ್ಪಿಸಲಾಗಿದೆ.
    | ಹರ್ಷಲ್ ಭೋಯರ್, ಸ್ವೀಪ್ ಸಮಿತಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts