More

    ನೈಋತ್ಯ ರೈಲ್ವೆಯಿಂದ ದಾಖಲೆ

    ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಅಕ್ಟೋಬರ್​ನಲ್ಲಿ ದಾಖಲೆಯ 3.22 ಮಿಲಿಯನ್ ಟನ್ ಸರಕು ಸಾಗಿಸಿದೆ.

    ಸರಳ ಮತ್ತು ತ್ವರಿತ ಸರಕು ಸಾಗಣೆಗೆ ರೈಲ್ವೆ ವಿಶ್ವಾಸಾರ್ಹವಾಗಿದೆ. ಲಾಕ್​ಡೌನ್​ನಿಂದಾಗಿ ತಗ್ಗಿದ ಸರಕು ಸಾಗಣೆ, ಏಪ್ರಿಲ್​ನಿಂದ ನಿಧಾನವಾಗಿ ಮೊದಲಿನ ಸ್ಥಿತಿ ತಲುಪುತ್ತಿದೆ. ಅಂದಿನಿಂದ ನೈಋತ್ಯ ರೈಲ್ವೆ ಪ್ರತಿ ತಿಂಗಳು 3 ಮಿಲಿಯನ್ ಟನ್​ನಷ್ಟು ಸರಕು ಸಾಗಿಸುತ್ತಿದೆ.

    ಬಿಜಿನೆಸ್ ಡೆವಲಪ್ಮೆಂಟ್ ಯೂನಿಟ್ ಪ್ರಾರಂಭಿಸಿದ ನಂತರ ಏಪ್ರಿಲ್​ನಿಂದ ನೈಋತ್ಯ ವಲಯ ಮತ್ತು ವಿಭಾಗಗಳಲ್ಲಿ ಸರಕು ಸಾಗಣೆ ಮೊದಲಿನಂತಾಗಿದೆ.

    ವ್ಯಾಪಾರಸ್ಥರು ಹಾಗೂ ಉದ್ಯಮಿಗಳಿಗೆ ಹಲವಾರು ರಿಯಾಯಿತಿ ನೀಡಿರುವುದು ಸಹ ಸರಕು ಸಾಗಣೆ ಹೆಚ್ಚಲು ಕಾರಣ. ಈ ಆರ್ಥಿಕ ವರ್ಷದ ಅಕ್ಟೋಬರ್​ವರೆಗೆ ನೈಋತ್ಯ ರೈಲ್ವೆ 19.51 ಮಿಲಿಯನ್ ಟನ್ ಸರಕು ಸಾಗಿಸಿದೆ.

    ಕರ್ನಾಟಕದ ವಿದ್ಯುತ್ ಸ್ಥಾವರಗಳಿಗೆ 5.035 ಮಿಲಿಯನ್ ಟನ್ ಕಲ್ಲಿದ್ದಿಲು ಹಾಗೂ ಸ್ಟೀಲ್ ಸ್ಥಾವರಗಳಿಗೆ 4.768 ಮಿಲಿಯನ್ ಟನ್ ಸ್ಟೀಲ್ ಸುರುಳಿಯನ್ನು ಅಕ್ಟೋಬರ್​ವರೆಗೆ ಸಾಗಿಸಿದ ನೈಋತ್ಯ ರೈಲ್ವೆ, ಲಾಕ್​ಡೌನ್ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಟನ್​ಗಳಷ್ಟು ಆಹಾರ ಧಾನ್ಯಗಳನ್ನು ರಾಜ್ಯದ ವಿವಿಧೆಡೆ ತಲುಪಿಸಿದೆ.

    ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ಸರಕು ಸಾಗಣೆಗೆ ರೈಲ್ವೆ ಮಂಡಳಿ ನೀಡಿದ್ದ ಗುರಿಯನ್ನು ಮೀರಿದೆ. ಈ ಬಾರಿ 3.03 ಮಿಲಿಯನ್​ನಷ್ಟು ಸರಕು ಸಾಗಿಸಿದ್ದು, ಕಳೆದ ಅವಧಿಗೆ ಹೋಲಿಸಿದರೆ ಶೇ. 4.48ರಷ್ಟು ಹೆಚ್ಚು ಸರಕು ಸಾಗಾಟವಾಗಿದೆ.

    ಅಕ್ಟೋಬರ್​ಗೆ ಹೋಲಿಸಿದರೆ ಕಳೆದ ಬಾರಿಗಿಂತ ಈ ಬಾರಿ ಶೇ. 8.61ರಷ್ಟು ಸರಕು ಸಾಗಿಸಲಾಗಿದೆ. ದೊಡ್ಡಬಳ್ಳಾಪುರ, ಪೆನುಕೊಂಡ, ಕಡಕೋಳ, ಹೊಸೂರು ಇತರೆಡೆ ವಾಹನಗಳನ್ನು ಹೆಚ್ಚು ಸಾಗಿಸಲಾಗಿದೆ.

    ಈ ವರ್ಷದ ತ್ರೖೆಮಾಸಿಕ ಅವಧಿಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸರಕು ಸಾಗಿಸಲಾಗಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts