More

    ಸಮರಕ್ಕೆ ಮುನ್ನ ಸಾಮದಾನ: ರಣಾಂಗಣಕ್ಕೆ ಇಳಿಯುವ ಮೊದಲು ಸಂಧಾನ, ಅಸ್ತ್ರಕ್ಕೆ ಸಾಣೆ

    ಬೆಂಗಳೂರು:

    ಲೋಕಸಭೆ ಟಿಕೆಟ್ ಟೆನ್ಶನ್ ಬಹುತೇಕ ಮುಗಿಯುತ್ತಿದ್ದಂತೆ ಮೂರೂ ಪಕ್ಷಗಳೀಗ ಬಂಡಾಯಕ್ಕೆ ಮದ್ದರೆಯುವ ಹಾಗೂ ಮತಾಸ್ತ್ರಗಳಿಗೆ ಸಾಣೆ ಹಿಡಿಯುವ ಕಾರ್ಯಕ್ಕೆ ಕೈಹಾಕಿವೆ. ಮೈತ್ರಿ ಪಕ್ಷಗಳ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ ಅಖಾಡಕ್ಕೆ ಧುಮುಕಿದರೆ ಕಾಂಗ್ರೆಸ್​ನಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ರಣವ್ಯೂಹಕ್ಕೆ ಎಂಟ್ರಿಕೊಟ್ಟಿದ್ದಾರೆ. ಟಿಕೆಟ್ ವಂಚಿತ ದಾವಣಗೆರೆ ನಾಯಕರನ್ನು ಸಮಾಧಾನ ಪಡಿಸುವಲ್ಲಿ ಯಡಿಯೂರಪ್ಪ ಸಕ್ಸಸ್ ಆಗಿದ್ದರೆ ವಿಜಯೇಂದ್ರ ಹಳೇ ಮೈಸೂರು ಭಾಗದಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ.

    ತವರಲ್ಲಿ ಸಿಎಂ ರಣತಂತ್ರ: ಮೂರು ದಿನದಿಂದ ಮೈಸೂರು ಸಮೀಪದ ರೆಸಾರ್ಟ್​ನಲ್ಲಿ ಬಿಡಾರ ಹೂಡಿರುವ ಸಿಎಂ ಸಿದ್ದರಾಮಯ್ಯ ಆಪ್ತರ ಜತೆಗೆ ನಿರಂತರ ಸಭೆ, ಆಪರೇಷನ್ ಹಸ್ತ ಕಾರ್ಯಾಚರಣೆಗೆ ಇಳಿದಿ ದ್ದಾರೆ. ತವರು ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸು ವುದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಬಿಜೆಪಿಯು ಹಾಲಿ ಸಂಸದ ಪ್ರತಾಪಸಿಂಹರನ್ನು ಕೈಬಿಟ್ಟು, ಯದುವೀರ ಒಡೆಯರ್ ಅವರನ್ನು ಅಖಾಡಕ್ಕೆ ಇಳಿಸಿರುವುದು ಸವಾಲಾಗಿದೆ. ಮೈಸೂರು ಪ್ರಾಂತದಲ್ಲಿ ಒಡೆಯರ್ ರಾಜಮನೆತನದ ಬಗ್ಗೆ ಅಪಾರ ಗೌರವವಿದೆ. ಹಾಗಾಗಿ ಬಿಜೆಪಿಯನ್ನಷ್ಟೇ ಟೀಕಿಸಿ, ಯದುವೀರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಸಿಎಂ ಸ್ಪಷ್ಟವಾಗಿ ಸೂಚಿಸುವ ಮೂಲಕ ರಕ್ಷಣಾತ್ಮಕ ತಂತ್ರೋಪಾಯ ಹೂಡಿದ್ದಾರೆ. ಅಹಿಂದ ಜತೆಗೆ ವೀರಶೈವ-ಲಿಂಗಾಯತ, ಬ್ರಾಹ್ಮಣ ಸಮುದಾಯಗಳ ಓಲೈಕೆಗೆ ಆಪರೇಷನ್ ಹಸ್ತಕ್ಕೆ ಬಲೆ ಬೀಸಿದ್ದು, ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ವೀರಶೈವ-ಲಿಂಗಾಯತ ಮುಖಂಡ ಸದಾನಂದರನ್ನು ಸೆಳೆದಿದ್ದಾರೆ.

    ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಎಚ್.ವಿ. ರಾಜೇಶ್, ಬ್ರಾಹ್ಮಣ ಸಮುದಾಯದ ಪ್ರಭಾವಿ, ಮುಡಾ ಮಾಜಿ ಅಧ್ಯಕ್ಷ ರಾಜೀವ್​ರನ್ನು ಕೈವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ದೇವಾಲಯಗಳ ಸುತ್ತಾಟದಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ ಮೈಸೂರಿಗೆ ತೆರಳಲಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸಾಥ್ ನೀಡಿ, ದೋಸ್ತಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಯೋಚಿಸಿದ್ದಾರೆ.

    ಬಿಜೆಪಿ ಸಂಧಾನ ಪರ್ವ : ಚಿತ್ರದುರ್ಗ ಹೊರತುಪಡಿಸಿ 24 ಕ್ಷೇತ್ರಗಳಿಗೆ ಹುರಿಯಾಳುಗಳ ಹೆಸರು ಘೋಷಿಸಿರುವ ಬಿಜೆಪಿಯಲ್ಲೀಗ ಸಂಧಾನ ಪರ್ವ ಶುರುವಾಗಿದೆ. 28 ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಪೈಪೋಟಿ, ಲಾಬಿ ನಡೆಸಿದ್ದ ಕಾರಣದಿಂದ ಸ್ವಲ್ಪ ಹೆಚ್ಚೇ ಬಂಡಾಯ ಭುಗಿಲೆದ್ದಿದೆ. ಮಿತ್ರಪಕ್ಷ ಜೆಡಿಎಸ್​ಗೆ ಮೂರು ಕ್ಷೇತ್ರಗಳ ಹಂಚಿಕೆ, ಹಾಲಿ ಸಂಸದರಿಗೆ ಕೊಕ್, ಹೊಸಮುಖ, ಅಚ್ಚರಿ ಆಯ್ಕೆ ಪರಿಣಾಮ ಅಂದಾಜಿಗಿಂತ ಅಸಮಾಧಾನ ನಿಗಿನಿಗಿ ಕೆಂಡವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಬಿಟ್ಟು ಉಳಿದೆಡೆ ತಲೆ ಎತ್ತಿರುವ ಬಂಡಾಯ, ಅಸಮಾಧಾನ ಒಂದೆರಡು ದಿನಗಳಲ್ಲಿ ತಣಿಸುವ ಟಾಸ್ಕ್ ಫಿಕ್ಸ್ ಮಾಡಿಕೊಂಡಿದ್ದಾರೆ.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಲೋಕಸಭೆ ಚುನಾವಣೆ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಕಾರ್ಯಾಚರಣೆಗೆ ಇಳಿದಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಅಭ್ಯರ್ಥಿ ಭಗವಂತ ಖೂಬಾ ಜತೆಗೆ ಅಂತರದಲ್ಲಿದ್ದ ಪಕ್ಷದ ಶಾಸಕರು ಮತ್ತು ಮುಖಂಡರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಒಗ್ಗೂಡಿಸಿದ್ದಾರೆ. ಕೊಪ್ಪಳ ಸಂಸದ ಕರಡಿ ಸಂಗಣ್ಣ ಸಿಟ್ಟನ್ನು ಸ್ವಲ್ಪಮಟ್ಟಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಡಿಮೆ ಮಾಡಿದ್ದಾರೆ. ಬಿಎಸ್​ವೈ ಸಮಕ್ಷಮ ನಡೆದ ಮತ್ತೊಂದು ಸುತ್ತಿನ ಚರ್ಚೆಯಲ್ಲಿ ಕರಡಿ ಸಂಗಣ್ಣ ವರಿಷ್ಠರ ತೀರ್ವನಕ್ಕೆ ಬದ್ಧ, ಪಕ್ಷದಲ್ಲೇ ಉಳಿಯುತ್ತೇನೆಂದು ಒಪ್ಪಿದ್ದಾರೆ.

    ದೇವೇಗೌಡರ ‘ಜಂಟಿ’ ಉಪಕ್ರಮ: ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಜಂಟಿ ಸಭೆಗಳಾಗಿಲ್ಲ. ಒಂದೇ ವೇದಿಕೆಯನ್ನು ಉಭಯ ಪಕ್ಷಗಳ ಮುಖಂಡರು ಹಂಚಿಕೊಂಡಿಲ್ಲವೆಂಬ ಕೊರಗು ಮಂಗಳವಾರ ನಿವಾರಣೆಯಾಗಿದೆ! ಮಾಜಿ ಎಚ್.ಡಿ.ದೇವೇಗೌಡರು ಖುದ್ದಾಗಿ ‘ಜಂಟಿ’ ಉಪಕ್ರಮ ಕೈಗೊಂಡಿದ್ದಾರೆ. ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಮಕ್ಷಮ ಉಭಯ ಪಕ್ಷಗಳ ಎಸ್​ಸಿ,ಎಸ್​ಟಿ ಕಾರ್ಯಕರ್ತರ ಜಿಲ್ಲಾಮಟ್ಟದ ಸಭೆ ನಡೆಸಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಜಂಟಿ ಸಭೆಗೆ ಜೆಡಿಎಸ್ ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಪಿ.ಸ್ವರೂಪ ಪ್ರಕಾಶ್, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಎರಡೂ ಸಮುದಾಯಗಳ ಹಿರಿಯರು ಸಾಕ್ಷಿಯಾದರು.

    ಮಂಡ್ಯದಲ್ಲಿ ಸರ್ಕಸ್ : ‘ಮನದಲ್ಲೇ ಮಂಡಿಗೆ ತಿಂದರೆ ಗೋಧಿಗೆ ರೊಕ್ಕ ಕೊಡುವವರು ಯಾರು’ ಎಂಬ ಸ್ಥಿತಿಯನ್ನು ಬಿಜೆಪಿ ನಾಯಕರು ಮಂಡ್ಯ ಕ್ಷೇತ್ರದ ವಿಷಯದಲ್ಲಿ ಎದುರಿಸುತ್ತಿದ್ದಾರೆ. ಬಿ.ವೈ.ವಿಜಯೇಂದ್ರ ಅವರು ಮಂಡ್ಯದಲ್ಲಿ ಮಂಗಳವಾರ ಗೊತ್ತುಪಡಿಸಿದ್ದ ಸಭೆಗೆ ತೆರಳುವ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮಂಡ್ಯ ಜಿಲ್ಲೆ ನಾಯಕರ ಜತೆಗೆ ರ್ಚಚಿಸಿದರು. ಸಂಸದೆ ಸುಮಲತಾ ಅಂಬರೀಷ್ ಹೊರತುಪಡಿಸಿ ಬಹುತೇಕರು ಬಂದಿದ್ದರು. ಪಕ್ಷದ ನಿರ್ಧಾರಕ್ಕೆ ಬದ್ಧ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇವೆ. ಆದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ನಂತರ ಕಡೆಗಣನೆ, ತಾತ್ಸಾರ ಮಾಡುವ ಗುಣಸ್ವಭಾದವರು. ಈ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದು, ಮಂಡ್ಯ ಜಿಲ್ಲೆಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹಿತರಕ್ಷಣೆ ಜವಾಬ್ದಾರಿ ನಿಮ್ಮದು ಎಂದು ಹೇಳಿದಾಗ ವಿಜಯೇಂದ್ರ ಸೂಕ್ತ ಭರವಸೆ ನೀಡಿದರು ಎನ್ನಲಾಗಿದೆ. ಮಾಜಿ ಸಚಿವ ನಾರಾಯಣಗೌಡ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಜಿ.ಮುನಿರಾಜು, ಇಂದ್ರೇಶ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು.

    ದಾವಣಗೆರೆ ಸಮಸ್ಯೆ ಶಮನ

    ಬಿಎಸ್​ವೈ ನೇತೃತ್ವದಲ್ಲಿ ನಾಯಕರು ದಾವಣಗೆರೆ ಬಳಿಯ ರೆಸಾರ್ಟ್​ನಲ್ಲಿ ಮಂಗಳವಾರ ಸಭೆ ನಡೆಸಿ, ಹಾಲಿ ಸಂಸದರ ಜತೆಗೆ ವಿರಸ ಸಾಧಿಸಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ ಸಿಟ್ಟುಸೆಡವು ತೋಡಿಕೊಳ್ಳಲು ಮೊದಲಿಗೆ ಅವಕಾಶ ಕೊಟ್ಟರು. ಅಸಮಾಧಾನಿತರ ಎಲ್ಲ ಮಾತುಗಳನ್ನು ಆಲಿಸಿ, ಒಟ್ಟಿಗೆ ಕರೆದೊಯ್ಯಬೇಕು ಎಂದು ತಾಕೀತು ಮಾಡಿದರು. ಮೇಲ್ನೋಟಕ್ಕೆ ಷರತ್ತುಗಳಿಲ್ಲದ ಸಂಧಾನ ಎಂದು ಹೇಳುತ್ತಿದ್ದರೂ ಕೆಲವು ಭರವಸೆಗಳನ್ನು ಬಂಡೆದ್ದವರಿಗೆ ಒಪ್ಪಿಸಿ ಶಾಂತಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಪ್ಪಳ, ದಾವಣಗೆರೆ ಮಾತುಕತೆ ಫಲಪ್ರದಗೊಳಿಸಿದ ನಾಯಕರು ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ರಾತ್ರಿಯೇ ರಾಜಿ ಸಂಧಾನದ ಮಾತುಕತೆ ಗೊತ್ತುಪಡಿಸಿದ್ದಾರೆ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ, ಈರಣ್ಣ ಕಡಾಡಿ, ಅಭಯ್ ಪಾಟೀಲ್, ಸಂಜಯ ಪಾಟೀಲ್, ಅನಿಲ್ ಬೆನಕೆ, ರಮೇಶ್ ಕತ್ತಿ ಮತ್ತಿತರ ಮುಖಂಡರಿಗೆ ಬುಲಾವ್ ನೀಡಲಾಗಿದೆ. ಬೆಳಗಾವಿ ಹುರಿಯಾಳು ಜಗದೀಶ ಶೆಟ್ಟರ್, ಚಿಕ್ಕೋಡಿ ಸಂಸದ, ನಿಯೋಜಿತ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆಗೆ ಅಡ್ಡಿ-ಆತಂಕ ನಿವಾರಿಸುವ ಕಸರತ್ತಿಗೆ ಕೈಹಾಕಿದೆ.

    ಇಂದು ಜಂಟಿ ಸಭೆ: ಮೈತ್ರಿ ಪಕ್ಷಗಳಲ್ಲಿ ಕಾರ್ಯಕರ್ತರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡುವ ಉದ್ದೇಶದಿಂದ ಜಂಟಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಮೊದಲ ಸಭೆ ಬುಧವಾರ ಮೈಸೂರಿನಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಇತರರು ಭಾಗವಹಿಸಲಿದ್ದಾರೆ.

    ದೇವೇಗೌಡರ ದೂರಿನ ಮೇಲೆ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts