More

    ಬಿಜೆಪಿಯಲ್ಲಿ ಬಂಡಾಯದ ಬೆಂಕಿ

    ಹುಬ್ಬಳ್ಳಿ/ಧಾರವಾಡ: ಮೊದಲ ಪಟ್ಟಿ ಪ್ರಕಟವಾಗುತ್ತಿದ್ದಂತೆ ಮಂಗಳವಾರವೇ ಬಿಜೆಪಿಯಲ್ಲಿ ಸ್ಫೋಟಗೊಂಡ ಅಸಮಾಧಾನದ ‘ಹೊಗೆ’ ಬುಧವಾರ ಉತ್ತರ ಕರ್ನಾಟಕದ ವಿವಿಧೆಡೆ ಬಂಡಾಯ ‘ಬೆಂಕಿ’ಯಾಗಿ ಪರಿವರ್ತನೆಗೊಂಡಿದೆ.

    ಅಲ್ಲಲ್ಲಿ ಇದನ್ನು ಶಮನಗೊಳಿಸುವ ಯತ್ನಗಳು ನಡೆಯುತ್ತಿದ್ದು, ಸದ್ಯಕ್ಕೆ ಫಲ ನೀಡಿಲ್ಲ.

    ಮೊದಲ ಪಟ್ಟಿಯಲ್ಲಿ ಹೆಸರಿಲ್ಲದ ಮತ್ತು ಈಗಾಗಲೇ ದೆಹಲಿ ವರಿಷ್ಠರಿಂದ ‘ಚುನಾವಣಾ ರಾಜಕಾರಣದಿಂದ ದೂರ ಇರುವುದೊಳಿತು’ ಎಂಬ ಉಪದೇಶ ಕೇಳಿ ಜಗದೀಶ ಶೆಟ್ಟರ್‌ ತೀವ್ರ ಅಸಮಾಧಾನಗೊಂಡಿದ್ದಾರೆ.

    ದೆಹಲಿಯಿಂದಲೇ ಬುಲಾವ್ ಬಂದಿದ್ದರಿಂದ ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಆಕಾಂಕ್ಷಿ ಜಗದೀಶ ಶೆಟ್ಟರ್‌ ಗುರುವಾರ ಬೆಳಗ್ಗೆ ಶೆಟ್ಟರ್ ದೆಹಲಿಗೆ ತೆರಳಿದ್ದು, ವರಿಷ್ಠರೊಂದಿಗೆ ಚರ್ಚಿಸಿದ್ದಾರೆ.

    ಟಿಕೆಟ್ ಇನ್ನೂ ಖಚಿತವಾಗದೆ ಇರುವುದರಿಂದ ಶೆಟ್ಟರ್ ಬೆಂಬಲಿಗರ ಕೋಪ ಹಾಗೇ ಇದೆ. ಈ ಮಧ್ಯೆ, ಟಿಕೆಟ್ ಸಿಗದಿದ್ದರೆ ನನ್ನ ಬೆಂಬಲಿಗರ ಸಲಹೆಯಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ.

    ಇನ್ನೂ ಹತ್ತು ವರ್ಷ ರಾಜಕಾರಣದಲ್ಲಿರುತ್ತೇನೆ ಎಂದು ಶೆಟ್ಟರ್ ಹೇಳಿರುವುದರಿಂದ ಕುತೂಹಲ ಹೆಚ್ಚಿದೆ.

    ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾವಿ ಮುಖಂಡ ತವನಪ್ಪ ಅಷ್ಟಗಿ ಬುಧವಾರ ರಾಜೀನಾಮೆ ನೀಡಿದ್ದಾರೆ.

    ಇದೇ ವೇಳೆ ಅವರು ಪಕ್ಷದ ವರಿಷ್ಠರು ಹಾಗೂ ಹಾಲಿ ಶಾಸಕ ಅಮೃತ ದೇಸಾಯಿ ವಿರುದ್ಧ ಅಸಮಾಧಾನ ಹೊರಹಾಕಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಮಾನಿಗಳು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಇನ್ನೆರಡು ದಿನಗಳಲ್ಲಿ ಬೆಂಬಲಿಗರ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

    ಹಾಲಿ ಶಾಸಕ ಅಮೃತ ದೇಸಾಯಿ ವಿರುದ್ಧ ಜನವಿರೋಧಿ ಅಲೆ ಇರುವುದು ಜನಜನಿತ. ಹೀಗಾಗಿ ಹಲವು ತಿಂಗಳಿಂದ ನನ್ನ ಹೆಸರು ಮುಂಚೂಣಿಯಲ್ಲಿತ್ತು.

    ಪಕ್ಷದ ಸರ್ವೇಯಲ್ಲೂ ನನಗೇ ಟಿಕೆಟ್ ಎನ್ನಲಾಗಿತ್ತು. ಆದರೆ, ಏಕಪಕ್ಷೀಯವಾಗಿ ಅಮೃತ ದೇಸಾಯಿ ಅವರಿಗೆ ಟಿಕೆಟ್ ೋಷಿಸಲಾಗಿದೆ.

    ಇದರಿಂದ ತೀವ್ರ ಬೇಜಾರಾಗಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದರು.

    ಸಿಎಂ ಬೊಮ್ಮಾಯಿ ಕಾರಣ: ನನಗೆ ಟಿಕೆಟ್ ಕೈ ತಪ್ಪಲು ಮುಖ್ಯ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರು ಸ್ವ ಜಾತಿಯ ಅಮೃತ ದೇಸಾಯಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಿಜೆಪಿಯ ಮೊದಲ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಂಥವರಿಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆದಿದೆ. ಅವರನ್ನು ರಾಜಕೀಯವಾಗಿ ಅತಂತ್ರಗೊಳಿಸಲು ಹೊರಟಿರುವುದು ಬಿಜೆಪಿಯಲ್ಲಿ ದೊಡ್ಡ ಪರಿಣಾಮ ಬೀರಲಿದೆ.

    ಅದೇ ರೀತಿ ನಾನು ಪಕ್ಷಕ್ಕಾಗಿ 10 ವರ್ಷ ದುಡಿದಿದ್ದೇನೆ. ಜನರ ಮನಸ್ಸಿಗೆ ವಿರುದ್ಧವಾಗಿ ಅಮೃತ ದೇಸಾಯಿ ಅವರಿಗೆ ಟಿಕೆಟ್ ನೀಡಿರುವುದು ನನ್ನ ಬೆಂಬಲಿಗರಿಗೆ ನೋವಾಗಿದೆ ಎಂದರು.

    ನನ್ನ ನಿರ್ಧಾರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಿಎಂ ಸ್ಥಾನ ಕೊಡುವುದಾಗಿ ಹೇಳಿದರೂ ಬೇಡ. ಖುದ್ದು ಪ್ರಧಾನಿ ಮೋದಿಯವರೇ ಹೇಳಿದರೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದರು.

    ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದಿರುವ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ.

    ಪಕ್ಷದಲ್ಲಿ ನನಗೆ ಅಡ್ಡಗಾಲು ಹಾಕುತ್ತಿರುವುದು ಒಂದು ವರ್ಷದ ಹಿಂದೆಯೇ ಅರಿವಿಗೆ ಬಂದಿತ್ತು. ಆದರೂ, 30 ವರ್ಷ ಪಕ್ಷಕ್ಕಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ನನಗೆ ಟಿಕೆಟ್ ದೊರೆಯುವ ವಿಶ್ವಾಸವಿತ್ತು.

    ಆದರೆ, ಪಕ್ಷ ದ್ರೋಹಿಗಳಿಗೆ ಮಣೆ ಹಾಕಿರುವುದು ತುಂಬಾ ನೋವುಂಟಾಗಿದೆ ಎಂದು ಕಿಡಿ ಕಾರಿದ್ದಾರೆ.

    ಹುಬ್ಬಳ್ಳಿ ತಾಲೂಕಿನ ಅದರಗುಂಚಿಯ ತಮ್ಮ ನಿವಾಸದಲ್ಲಿ ಬುಧವಾರ ಅಭಿಮಾನಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಮತದಾರ ಪ್ರಭುಗಳು ಬೆಂಬಲ ನೀಡುತ್ತಿದ್ದಾರೆ. ಅವರ ಆಶಯದಂತೆ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಕರೆದು ಟಿಕೆಟ್ ನೀಡಿದರೆ, ಆ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷೇತರವಾಗಿ ಸ್ಪರ್ಧಿಸಿ ವಿಧಾನಸೌಧಕ್ಕೆ ಹೋಗುತ್ತೇನೆ ಎಂದು ಗುಡುಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts