More

    ಬಂಡುಕೋರರ ಬೀಡು; ಸಂಘರ್ಷದ ನಾಡು

    ಈಶಾನ್ಯ ಭಾರತ ರಾಜ್ಯವಾದ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ 40 ದಂಗೆಕೋರರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಈಚೆಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು. ಆದರೆ, ಕುಕಿ ನ್ಯಾಷನಲ್ ಆರ್ಗನೈಸೇಶನ್ (ಕೆಎನ್​ಒ) ಈ ಸಂಗತಿಯನ್ನು ನಿರಾಕರಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಮೈತೆಯಿ ಸಮುದಾಯದ ಜನರು ಈಚೆಗೆ ಹೋರಾಟ ಆರಂಭಿಸಿದ ನಂತರ ಮಣಿಪುರದಲ್ಲಿ ಹಿಂಸಾಚಾರಗಳು ಭುಗಿಲೆದ್ದಿವೆ. ರಾಜ್ಯದ ಜನಸಂಖ್ಯೆಯಲ್ಲಿ ಮೈತೆಯಿ ಸಮುದಾಯವರ ಪಾಲು ಹೆಚ್ಚಾಗಿರುವುದರಿಂದ ಹಾಗೂ ರಾಜಕೀಯವಾಗಿಯೂ ಈ ಸಮುದಾಯವರು ಬಲಾಢ್ಯವಾಗಿರುವುದರಿಂದ ಉಳಿದ ಪರಿಶಿಷ್ಪ ಪಂಗಡಗಳ ಸಮುದಾಯದವರು ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಸ್ವಾತಂತ್ರ್ಯಾನಂತರದ ಮಣಿಪುರ ಇತಿಹಾಸವು ಸಾಕಷ್ಟು ಸಂಘರ್ಷಗಳಿಂದ ಕೂಡಿದೆ. ಮಣಿಪುರದಲ್ಲಿ ಹಳೆಯ ಬಂಡಾಯ ಚಳವಳಿಗಳು ಈಗ ಮತ್ತೆ ಕಾಣಿಸಿಕೊಳ್ಳುತ್ತಿವೆ. 1950ರ ದಶಕದಲ್ಲಿ ನಾಗಾ ರಾಷ್ಟ್ರೀಯ ಚಳವಳಿ ಮತ್ತು ಸ್ವತಂತ್ರ ನಾಗಲಿಮ್ ಹೋರಾಟವು ಮಣಿಪುರದ ಕೆಲ ಭಾಗಗಳನ್ನು ತಟ್ಟಿತ್ತು. ಈ ಹೋರಾಟ ನಡೆಸುತ್ತಿದ್ದ ಎನ್​ಎಸ್​ಸಿಎನ್- ಐಎಂ (ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್) ಸಂಘಟನೆಯು ಭಾರತ ಸರ್ಕಾರದೊಂದಿಗೆ ಕದನ ವಿರಾಮ ಒಪ್ಪಂದವನ್ನು ಮಾಡಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ, ಅಂದರೆ 1997ರಲ್ಲಿ. ಈ ಆಂದೋಲನವು ತೀವ್ರಗೊಂಡಿದ್ದ ಸಂದರ್ಭದಲ್ಲಿಯೇ ಮಣಿಪುರದ ಮೈತೆಯಿ ಸಮುದಾಯದವರು ಮಣಿಪುರ ರಾಜ ಮಹಾರಾಜ ಬೋಧಚಂದ್ರ ಮತ್ತು ಭಾರತ ಸರ್ಕಾರದ ನಡುವಿನ ವಿಲೀನ ಒಪ್ಪಂದವನ್ನು ವಿರೋಧಿಸಿದ್ದರು.

    1964ರಲ್ಲಿ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್​ಎಲ್​ಎಫ್) ರಚನೆಗೊಂಡು, ಭಾರತದಿಂದ ಪ್ರತ್ಯೇಕತೆಗೆ ಒತ್ತಾಯಿಸಿತು. ತರುವಾಯ, ಚೀನಾದಿಂದ ಶಸ್ತ್ರಾಸ್ತ್ರಗಳು ಮತ್ತು ತರಬೇತಿಯನ್ನು ಪಡೆದ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (ಪಿಆರ್​ಇಪಿಎಕೆ) ಮತ್ತು ಪೀಪಲ್ಸ್ ಲಿಬರೇಶನ್ ಆರ್ವಿು (ಪಿಎಲ್​ಎ) ರೀತಿಯ ಹಲವಾರು ದಂಗೆಕೋರ ಗುಂಪುಗಳು ಅಥವಾ ಕಣಿವೆಯ ಬಂಡಾಯ ಗುಂಪುಗಳು ತದನಂತರದಲ್ಲಿ ಅಸ್ತಿತ್ವಕ್ಕೆ ಬಂದವು. ಈ ಕಣಿವೆಯ ಗುಂಪುಗಳು ಭಾರತದಿಂದ ಸ್ವಾತಂತ್ರ್ಯ ಮತ್ತು ನಾಗಾ ದಂಗೆಕೋರ ಗುಂಪುಗಳನ್ನು ದೂರವಿಡುವ ಎರಡು ಪ್ರಮುಖ ಉದ್ದೇಶಗಳಿಂದ ಕಾರ್ಯ ನಿರ್ವಹಿಸುತ್ತಿದ್ದವು

    ಕುಕಿ-ಜೋಮಿ ಗುಂಪುಗಳು ವಾಸ್ತವವಾಗಿ ಕುಕಿಗಳ ವಿರುದ್ಧ ನಾಗಾ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಜನ್ಮ ತಳೆದವು. 1993ರಲ್ಲಿ ಎನ್​ಎಸ್​ಸಿಎನ್-ಐಎಂನಿಂದ ನಡೆದ ಕುಕಿಗಳ ಹತ್ಯಾಕಾಂಡವು ಸಾವಿರಾರು ಕುಕಿಗಳನ್ನು ನಿರಾಶ್ರಿತರನ್ನಾಗಿ ಮಾಡಿತು. ಇದರ ನಂತರ ಕುಕಿ-ಜೋಮಿ ಬುಡಕಟ್ಟು ಜನಾಂಗದವರು ವಿವಿಧ ಸಶಸ್ತ್ರ ಗುಂಪುಗಳನ್ನು ಸಂಘಟಿಸಿದರು. ಇದೇ ಸಮಯದಲ್ಲಿ ಇದೇ ರೀತಿಯ ಘರ್ಷಣೆಗಳು ಮೈತೆಯಿ ಮತ್ತು ಮೈತೆಯಿ ಪಂಗಲ್ (ಮುಸ್ಲಿಮರು) ನಡುವೆ ನಡೆಯುತ್ತಿದ್ದವು. ಇದು ಮುಸ್ಲಿಮರ ಗುಂಪಾದ ಪೀಪಲ್ಸ್ ಯುನೈಟೆಡ್ ಲಿಬರೇಶನ್ ಫ್ರಂಟ್ ಹಾಗೂ ಇತರ ಕೆಲ ಗುಂಪುಗಳ ರಚನೆಗೆ ಕಾರಣವಾಯಿತು. ಈ ಗುಂಪುಗಳು ಈಗ ಈ ಪ್ರದೇಶದಲ್ಲಿ ಸಕ್ರಿಯವಾಗಿಲ್ಲ.

    ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ

    ನಾಗಾ ಪ್ರತ್ಯೇಕತಾವಾದಿ ಚಟುವಟಿಕೆಗೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರವು 1958ರಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್​ಎಸ್​ಪಿಎ) ಜಾರಿಗೆ ತಂದಿತು. ಆರಂಭದಲ್ಲಿ ಇದನ್ನು ನಾಗಾಲ್ಯಾಂಡ್ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ಜಾರಿಗೆ ತರಲಾಯಿತು. ಕಣಿವೆ ಆಂದೋಲನವು ಹಬ್ಬತೊಡಗಿದ್ದರಿಂದ ಈ ಕಾಯ್ದೆಯನ್ನು ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಯಿತು. 1980ರ ದಶಕದಲ್ಲಿ ಮಣಿಪುರವನ್ನು ಪ್ರಕ್ಷುಬ್ಧ ಪ್ರದೇಶವೆಂದು ಘೊಷಿಸಲಾಯಿತು. ವಿವಿಧ ಶಾಂತಿ ಮಾತುಕತೆಗಳು 2008ರಲ್ಲಿ ಕೇಂದ್ರ, ರಾಜ್ಯ ಮತ್ತು ಕುಕಿ-ಜೋಮಿ ಗುಂಪುಗಳ ನಡುವಿನ ತ್ರಿಪಕ್ಷೀಯ ಕಾರ್ಯಾಚರಣೆಯ ಅಮಾನತು (ಟ್ರೖೆಪಾರ್ಟಿ ಸಸ್ಪೆನ್ಶನ್ ಆಪರೇಶನ್) ಒಪ್ಪಂದಕ್ಕೆ ಕಾರಣವಾಯಿತು. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಕ್ರಮೇಣ ಸುಧಾರಿಸಿದಂತೆ, ಹಲವಾರು ಪ್ರದೇಶಗಳಿಂದ ಎಎಫ್​ಎಸ್​ಪಿಎ ರದ್ದುಗೊಳಿಸಲಾಯಿತು. ಕಣಿವೆ ಬಂಡಾಯ ಗುಂಪುಗಳು ಕೇಂದ್ರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿಲ್ಲ ಹಾಗೂ ಯಾವುದೇ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸಿಲ್ಲ. ಇವು ತಾಂತ್ರಿಕವಾಗಿ ಸಕ್ರಿಯವಾಗಿ ಉಳಿದಿವೆ.

    ದಂಗೆಕೋರರ ನೆಲೆಬೀಡು ಚುರಚಂದ್​ಪುರ

    ಮಣಿಪುರದಲ್ಲಿ ಚುರಚಂದ್​ಪುರ ಜಿಲ್ಲೆ ಅತಿ ಹೆಚ್ಚು ದಂಗೆಕೋರ ಗುಂಪುಗಳನ್ನು ಹೊಂದಿದ ಪ್ರದೇಶವಾಗಿದೆ. ಕಾರ್ಯಾಚರಣೆಯ ಅಮಾನತು ಒಪ್ಪಂದ ಮಾಡಿಕೊಂಡ 24 ಕಾರ್ಯಾಚರಣೆ ಗುಂಪುಗಳು ಇಲ್ಲಿವೆ. ಆದರೆ, ಭಾರತ ಸರ್ಕಾರವು ಗೊತ್ತುಪಡಿಸಿದ ಶಿಬಿರಗಳು ಚುರಾಚಂದ್​ಪುರ ಮಾತ್ರವಲ್ಲದೆ, ಕಾನ್ಪೋಕ್ಪಿ, ಚಾಂಡೆಲ್ ಮತ್ತು ತೆಂಗ್ನೌಪಾಲ್ ಜಿಲ್ಲೆಗಳಲ್ಲೂ ಇವೆ. ಈ ಶಿಬಿರಗಳಲ್ಲಿ ಎರಡು ಲಾಕ್​ಗಳಿರುವ ಶಸ್ತ್ರಾಸ್ತ್ರ ಸುರಕ್ಷತಾ ಕೊಠಡಿಗಳಿವೆ. ಈ ಕೊಠಡಿಗಳ ಒಂದು ಕೀ (ಕೀಲಿಕೈ) ಶಿಬಿರದ ನಾಯಕನ ಬಳಿ ಮತ್ತು ಎರಡನೆಯದು ಭಾರತೀಯ ಭದ್ರತಾ ಪಡೆಗಳ ಬಳಿ ಇರುತ್ತದೆ. ಈ ಪ್ರದೇಶದ ಪ್ರಮುಖ ಗುಂಪುಗಳಲ್ಲಿ ಕುಕಿ ರಾಷ್ಟ್ರೀಯ ಸಂಘಟನೆ ಮತ್ತು ಅದರ ಸಶಸ್ತ್ರ ವಿಭಾಗವಾದ ಕುಕಿ ರೆವಲ್ಯೂಷನರಿ ಆರ್ವಿು, ಝೆೊಮಿ ಮರು-ಏಕೀಕರಣ ಸಂಸ್ಥೆ, ಝೆೊಮಿ ರೆವಲ್ಯೂಷನರಿ ಆರ್ವಿು, ಕುಕಿ ನ್ಯಾಷನಲ್ ಫ್ರಂಟ್, ಕುಕಿ ನ್ಯಾಷನಲ್ ಲಿಬರೇಶನ್ ಫ್ರಂಟ್, ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್ ಮತ್ತು ಕುಕಿ ನ್ಯಾಷನಲ್ ಆರ್ವಿು ಸೇರಿವೆ.

    ಕುಕಿಲ್ಯಾಂಡ್​ಗೆ ಕರೆ

    ಕುಕಿ-ಜೋಮಿ ಚಳವಳಿಯು ಇತರ ಗುಂಪುಗಳ ಆಕ್ರಮಣದ ವಿರುದ್ಧ ರಕ್ಷಣೆಯಾಗಿ ಪ್ರಾರಂಭ ವಾಯಿತು. ಆದರೆ, ತ್ವರಿತವಾಗಿ ಕುಕಿಲ್ಯಾಂಡ್​ಗೆ ಕರೆ ನೀಡಲಾಯಿತು. ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಕುಕಿ-ಜೋಮಿ ವಾಸಿಸುವ ಪ್ರದೇಶಗಳಲ್ಲಿ ಹರಡಿರುವ ಒಂದು ಕಲ್ಪನೆಯ ದೇಶವೇ ಕುಕಿಲ್ಯಾಂಡ್. ಆದರೆ, ಕಾಲಾನಂತರದಲ್ಲಿ ಇದು ಕೇವಲ ಪ್ರತ್ಯೇಕ ರಾಜ್ಯದ ಕೂಗಿಗೆ ದುರ್ಬಲಗೊಂಡಿತು.

    ಪ್ರಬಲ ಗುಂಪುಗಳು

    ಕಣಿವೆಯ ದಂಗೆಕೋರ ಗುಂಪುಗಳಲ್ಲಿ, ಎಲ್ಲಾ ಮೈತೆಯಿ ದಂಗೆಕೋರ ಗುಂಪುಗಳ ತಾಯಿ ಎಂದು ಯುಎನ್​ಎಲ್​ಎಫ್ ಪರಿಗಣಿತವಾಗಿದ್ದು, ಇದುವರೆಗೂ ಅತ್ಯಂತ ಶಕ್ತಿಶಾಲಿಯಾಗಿಯೇ ಉಳಿದುಕೊಂಡಿದೆ. ಕಣಿವೆಯ ಗುಂಪುಗಳು ಆಗಾಗ ಭದ್ರತಾ ಪಡೆಗಳ ವಿರುದ್ಧ ಹೊಂಚುಹಾಕಿ ದಾಳಿಗಳನ್ನು ನಡೆಸಿ, ಸ್ಪೋಟಗಳನ್ನು ನಡೆಸಿಕೊಂಡು ಬಂದಿವೆ. ಯುಎನ್​ಎಲ್​ಎಫ್ ತನ್ನ ಆರಂಭಿಕ ತರಬೇತಿಯನ್ನು ಎನ್​ಎಸ್​ಸಿಎನ್- ಐಎಂನಿಂದ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಕೆಸಿಪಿ ಮತ್ತು ಕೆವೈಕೆಎಲ್ ರೀತಿಯ ಪ್ರಬಲ ಗುಂಪುಗಳು ಕಾಲಾನಂತರದಲ್ಲಿ ಹೊರಹೊಮ್ಮಿದವು. ಈ ಗುಂಪುಗಳು ಈಗ ಬರ್ವ ಪ್ರಾಂತ್ಯದಲ್ಲಿ ಸ್ಥಾಪಿಸಲಾದ ಶಿಬಿರಗಳಿಂದ ಕಾರ್ಯನಿರ್ವಹಿಸುತ್ತಿವೆ. ಅನೇಕ ವರ್ಷಗಳಿಂದ ಕಣಿವೆ ಗುಂಪುಗಳ ಶಕ್ತಿ ಕ್ಷೀಣಿಸಿದೆ. ಯುಎನ್​ಎಲ್​ಎಫ್ ಈಗ ಅತ್ಯಂತ ದುರ್ಬಲವಾಗಿದ್ದು, ಒಳಜಗಳದಿಂದಾಗಿ ಮೂರು ಗುಂಪುಗಳಾಗಿ ಒಡೆದಿದೆ. ನಾಗಾ ಗುಂಪುಗಳಲ್ಲಿ ಎನ್​ಎಸ್​ಸಿಎನ್- ಐಎಂ ಪ್ರಬಲ ಸಂಘಟನೆಯಾಗಿದ್ದು, ಸೇನಾಪತಿ ಮತ್ತು ಉಖ್ರುಲ್ ಜಿಲ್ಲೆಗಳಾದ್ಯಂತ ನೆಲೆಗಳನ್ನು ಹೊಂದಿದೆ.

    ಭಾರತೀಯ ಸಂಗೀತ- ಉಡುಪು ನಿಷೇಧ

    ಮಣಿಪುರದ ದೈನಂದಿನ ಜೀವನದಲ್ಲಿ ಬಂಡಾಯ ಗುಂಪುಗಳನ್ನು ಸಂಕೀರ್ಣವಾಗಿ ಹೆಣೆಯಲಾಗಿದೆ. ಕಣಿವೆಯ ಗುಂಪುಗಳು, ವಿಶೇಷವಾಗಿ ಯುಎನ್​ಎಲ್​ಎಫ್ ಕಾಲಕಾಲಕ್ಕೆ ಆಗಸ್ಟ್ 15 ಅಥವಾ ಜನವರಿ 26ರಂದು ಮುಷ್ಕರಗಳಿಗೆ ಕರೆ ನೀಡುತ್ತವೆ. ಮೈತೆಯಿ ಗುಂಪುಗಳು ಕಣಿವೆಯ ನೈತಿಕ ಸಂಹಿತೆಯನ್ನು ನಿಯಂತ್ರಿಸುತ್ತವೆ. ಹಿಂದಿ ಚಲನಚಿತ್ರ- ಸಂಗೀತಗಳನ್ನು ನಿಷೇಧಿಸಿವೆ. ಭಾರತೀಯ ಉಡುಪುಗಳ ಮೇಲೆಯೂ ನಿಷೇಧ ಹೇರಲಾಗಿದೆ. ಮೈತೆಯಿ ಚಲನಚಿತ್ರಗಳಲ್ಲಿ ಏನನ್ನು ತೋರಿಸಬಹುದು ಎಂಬುದನ್ನು ನಿಯಂತ್ರಿಸುತ್ತವೆ. ಮದ್ಯವನ್ನು ನಿಷೇಧಿಸಿವೆ. ಈ ಗುಂಪುಗಳು, ಸಮುದಾಯಗಳ ಜನರ ಮೇಲೆ ತೆರಿಗೆ ವಿಧಿಸುತ್ತವೆ. ಈಗ ಈ ಗುಂಪುಗಳು ಹೆಚ್ಚಾಗಿ ಗೋಚರಿಸುತ್ತಿರುವುದು ರಾಜ್ಯದ ರಾಜಕೀಯ ಜೀವನದಲ್ಲಿ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಂಡುಕೋರ ಗುಂಪುಗಳ ಬೆಂಬಲದೊಂದಿಗೆ ಚುನಾವಣೆಗೆ ನಿಲ್ಲುತ್ತಾರೆ. ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ಈ ಗುಂಪುಗಳು ನಿರ್ದೇಶಿಸುತ್ತವೆ. ಕಳೆದ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ, ಎನ್​ಪಿಪಿ ಮತ್ತು ಕುಕಿ ಪೀಪಲ್ಸ್ ಮೈತ್ರಿಕೂಟದಂತಹ ಪಕ್ಷಗಳು ಚುರಚಂದ್​ಪುರದಲ್ಲಿ ನೆಲೆಗೊಳ್ಳಲು ಪ್ರಾರಂಭಿಸಿದಾಗ, ಕುಕಿ ನ್ಯಾಷನಲ್ ಆರ್ಗನೈಸೇಶನ್ (ಕೆಎನ್​ಒ) ಅಧ್ಯಕ್ಷರ ನಿರ್ದೇಶನವು ಮತದಾರರನ್ನು ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ತಿರುಗಿಸಿತು.

    ಭಾರತದ ಸ್ವಿಜರ್ಲೆಂಡ್

    ಮಣಿಪುರ ಕಣಿವೆಯ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಜನರು ಮೈತೆಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ಬಹುತೇಕರು ಹಿಂದೂಗಳಾಗಿದ್ದಾರೆ. ಮೈತೆಯಿ ಮಹಿಳೆಯರು ಕಣಿವೆಯಲ್ಲಿ ಬಹುತೇಕವಾಗಿ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದು, ಉನ್ನತ ಸಾಮಾಜಿಕ ಸ್ಥಾನಮಾನವನ್ನು ಅನುಭವಿಸುತ್ತಾರೆ. ಉತ್ತರದಲ್ಲಿ ನಾಗಾಗಳು ಮತ್ತು ದಕ್ಷಿಣದಲ್ಲಿ ಕುಕಿಗಳಂತಹ ಸ್ಥಳೀಯ ಗುಡ್ಡಗಾಡು ಬುಡಕಟ್ಟುಗಳು ಜನರು ಇದ್ದಾರೆ. ಈ ಬುಡಕಟ್ಟುಗಳ ಜನರು ಟಿಬೆಟೊ-ಬರ್ಮನ್ ಕುಟುಂಬದ ಭಾಷೆಗಳನ್ನು ಮಾತನಾಡುತ್ತಾರೆ. ಸಾಂಪ್ರದಾಯಿಕ ಆನಿಮಿಸ್ಟ್ ಧರ್ಮಗಳನ್ನು ಅಭ್ಯಾಸ ಮಾಡುತ್ತಾರೆ. ಕೆಲವು ನಾಗಾಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಐದನೇ ಮೂರು ಭಾಗದಷ್ಟು ಜನರು ಮಣಿಪುರಿಯನ್ನು ಮಾತನಾಡುತ್ತಾರೆ. ಇದು ಇಂಗ್ಲಿಷ್ ಜತೆಗೆ ರಾಜ್ಯದ ಅಧಿಕೃತ ಭಾಷೆಯಾಗಿದೆ. ಮಣಿಪುರವು ಹೆಚ್ಚಾಗಿ ಗ್ರಾಮೀಣ ಪ್ರದೇಶವಾಗಿದೆ. ರಾಜಧಾನಿ ಇಂಫಾಲ್ ಮಾತ್ರ ದೊಡ್ಡ ನಗರವಾಗಿದೆ. ಪ್ರಾಕೃತಿಕ ಸೌಂದರ್ಯದಿಂದಾಗಿ ಮಣಿಪುರವು ಪ್ರವಾಸಿಗರನ್ನು ಸೆಳೆಯುತ್ತದೆ. ಭಾರತದ ಸ್ವಿಜರ್ಲೆಂಡ್ ಎಂದೇ ಕರೆಯಲಾಗುತ್ತದೆ.

    10 ಲಕ್ಷ ರೂ. ಪರಿಹಾರ

    ಇಂಫಾಲ: ಗಲಭೆಗ್ರಸ್ತ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ವಿತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಂಡಿವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ನಡುವೆ ಸೋಮವಾರ ತಡ ರಾತ್ರಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪರಿಹಾರದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಭರಿಸಲಿವೆ. ಹಿಂಸಾಚಾರದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬದ ತಲಾ ಒಬ್ಬರಿಗೆ ಉದ್ಯೋಗ ನೀಡಲೂ ಸಭೆ ನಿರ್ಧರಿಸಿದೆ.

    ಸಂಧಾನಕ್ಕೆ ಅಮಿತ್ ಷಾ

    ಘರ್ಷಣೆ ನಿರತ ಮೈತೆಯಿ ಮತ್ತು ಕುಕಿ ಸಮುದಾಯದವರ ನಡುವೆ ಸಂಧಾನ ನಡೆಸಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ನಾಲ್ಕು ದಿನಗಳ ಭೇಟಿಗಾಗಿ ಅಮಿತ್ ಷಾ ಮಣಿಪುರಕ್ಕೆ ಆಗಮಿಸಿದ್ದಾರೆ. ವದಂತಿಗಳು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ವಿಶೇಷ ದೂರವಾಣಿ ಲೈನ್​ಗಳನ್ನು ಸ್ಥಾಪಿಸಲು ಕೂಡ ಸಭೆ ನಿರ್ಧರಿಸಲಾಗಿದೆ. ಏರಿದ ಬೆಲೆಗಳನ್ನು ನಿಯಂತ್ರಿಸಲು ರಾಜ್ಯಕ್ಕೆ ಪೆಟ್ರೋಲ್, ಅಡುಗೆ ಅನಿಲ, ಅಕ್ಕಿ ಮತ್ತು ಇತರ ಆಹಾರ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಮಾಡಲಾಗುವುದು ಎಂದು ಅಮಿತ್ ಷಾ ಹೇಳಿದ್ದಾರೆ.

    ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಸಾವು!

    ಮತ್ತೆ ಸುದ್ದಿಯಲ್ಲಿ ಪವಿತ್ರಾ ಲೋಕೇಶ್; ಹೊಸ ಪ್ರಯತ್ನವಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts