More

    ಜನ್ಮವಿರುವವರೆಗೂ ಜನರ ಸೇವೆಗೆ ಸಿದ್ಧ

    ಮುದ್ದೇಬಿಹಾಳ: ನನ್ನ ಜನ್ಮ ಇರುವವರೆಗೂ ಜನರ ಸೇವೆ ಮಾಡುವ ಸಂಕಲ್ಪ ಮುಂದುವರೆಸುತ್ತೇನೆ. ನಾನು ಯಾವತ್ತಿಗೂ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡಿಲ್ಲ. ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ ಜನರ ಪ್ರೀತಿ ಗಳಿಸುವಲ್ಲಿ ನಾನು ಸೋತಿಲ್ಲ. ಜನರ ಪ್ರೀತಿ ಅಭಿಮಾನದ ಋಣ ಇವತ್ತಿಗೂ ನನ್ನ ಮೇಲಿದೆ ಎಂದು ನಿಕಟಪೂರ್ವ ಶಾಸಕ, ಉದ್ಯಮಿ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

    ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ನಂತರ 6ನೇ ವಾರ್ಡ್‌ನ ನಡಹಳ್ಳಿಯವರ ಅಭಿಮಾನಿಗಳು ಸಿಸಿ ರಸ್ತೆ ಸೌಲಭ್ಯ ಒದಗಿಸಿದ ಹಿನ್ನೆಲೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಮತ್ತು ನಡಹಳ್ಳಿಯವರ ಜನ್ಮದಿನ ಆಚರಣೆಯಲ್ಲಿ ಅವರು ಮಾತನಾಡಿದರು.

    ದೈವವೇ ದೇವರೆಂದು ನಂಬಿದವನು ನಾನು. ಕ್ಷೇತ್ರದ ಜನತೆಯಲ್ಲಿ ವ್ಯತ್ಯಾಸ ಮಾಡದೆ ಎಲ್ಲರನ್ನೂ ಸಮನಾಗಿ ಕಂಡಿದ್ದೇನೆ. ನಿಜಕ್ಕೂ ಇಂಥ ಪರಿಸ್ಥಿತಿಯಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಮನಸ್ಸಿರಲಿಲ್ಲ. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಬಂದಿದ್ದೇನೆ. ಹಬ್ಬದ ರೀತಿ ಜನ್ಮದಿನ ಆಚರಣೆ ಅಚ್ಚರಿ ಮೂಡಿಸಿದೆ. ನಾನು ಇದಕ್ಕೆ ಅರ್ಹನೆ ಎನ್ನುವ ಯೋಚನೆ ನನ್ನಲ್ಲಿ ಬಂತು. ಅದ್ದೂರಿ ಆಚರಣೆ ಬೇಡ ಎಂದಿದ್ದೆ. ನನಗೆ ಗೊತ್ತಿಲ್ಲದೆ 25ಕ್ಕೂ ಹೆಚ್ಚು ಜನ ಮುಖಂಡರು ಬೆಂಗಳೂರಿನ ನನ್ನ ಮನೆಗೆ ಬಂದು ಬರಲೇಬೇಕು ಎಂದಾಗ ಅವರೆಲ್ಲರ ಪ್ರೀತಿಗೆ ಬೆಲೆ ಕೊಟ್ಟು ಬಂದಿದ್ದೇನೆ ಎಂದರು.

    ಮತಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡುವ ಕನಸಿಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೆ. ಆದರೆ ನನಗೆ ದೇವರು 5ವರ್ಷ ವಿಶ್ರಾಂತಿ ಕೊಟ್ಟಿದ್ದಾನೆ. ನನ್ನ ಯೋಜನೆಗಳು ನನ್ನಲ್ಲೇ ಉಳಿದವು. ಇನ್ನೂ ನನ್ನ ಅವಧಿಯಲ್ಲಿ ಸರ್ಕಾರದಿಂದ ತಂದಿರುವ 1,500 ಕೋಟಿ ರೂ. ಕಾಮಗಾರಿಗಳು ಬಾಕಿಯಿವೆ. ಈಗಿನ ಶಾಸಕರು ಇದನ್ನು ಬಳಸಿಕೊಂಡು ನನ್ನಂತೆ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ನಮ್ಮೆಲ್ಲರ ಕನಸು ನನಸಾಗುತ್ತದೆ. ಆದರೆ ಅಭಿವೃದ್ಧಿಯಲ್ಲೂ ರಾಜಕಾರಣ ಮಾಡುತ್ತಿರುವುದು ಖೇದವೆನಿಸುತ್ತದೆ. ರಾಜಕಾರಣದಲ್ಲಿ ಅಭಿವೃದ್ಧಿ ವಿಷಯ ಬಂದಾಗ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವ ತತ್ವವನ್ನು ನಾನು ಪಾಲಿಸುತ್ತೇನೆ ಎಂದರು.

    ನಡಹಳ್ಳಿಯವರ ಜನ್ಮದಿನದ ಹಿನ್ನೆಲೆ ನಗರ, ಗ್ರಾಮೀಣ ಪ್ರದೇಶದ ಜನರು ಸಾವಿರಾರು ಸಂಖ್ಯೆಯಲ್ಲಿ ಅವರ ಫಾರಂಹೌಸ್‌ಗೆ ಆಗಮಿಸಿ ಶುಭಾಶಯ ಕೋರಿದರು. ಜನಪ್ರತಿನಿಧಿಗಳು, ಪುರಸಭೆ ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

    ರಕ್ತದಾನ, ಆರೋಗ್ಯ ಶಿಬಿರ

    ನಡಹಳ್ಳಿಯವರ ಜನ್ಮದಿನದ ಹಿನ್ನೆಲೆ ಅವರ ತೋಟದ ಮನೆಯ ಸಭಾಭವನದಲ್ಲಿ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 50ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ಸಲಹೆ ನೀಡಲಾಯಿತು. ಅಲ್ಲದೇ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ನಡಹಳ್ಳಿಯವರ ಅಭಿಮಾನಿಗಳು ಅವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts