More

    ಪುಸ್ತಕ ಓದಿನ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಉಳಿದೆಲ್ಲ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿಯಾಗಿದೆ. ಈ ಅನುಭವ ಪಡೆಯಲು ಜ್ಞಾನದ ಬೆಳವಣಿಗೆ ಮತ್ತು ವಿಕಾಸವಾಗಲು ಪುಸ್ತಕಗಳನ್ನು ಓದಬೇಕಿದೆ. ಪುಸ್ತಕ ಓದು ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

    ಯುವಕರಲ್ಲಿ ಓದಿನ ಹವ್ಯಾಸ ಬೆಳೆಸಬೇಕೆಂಬ ಉದ್ದೇಶದೊಂದಿಗೆ ವೀರಲೋಕ ಪ್ರತಿಷ್ಠಾನವು ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ ಸ್ವಾಭಿಮಾನ ಉದ್ಯಾನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಪುಸ್ತಕ ಸಂತೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಪುಸ್ತಕ ಮತ್ತು ದಿನ ಪತ್ರಿಕೆಗಳನ್ನು ಖರೀದಿಸಿ ಓದುವಂತಹ ಅಭ್ಯಾಸ, ಅಭಿರುಚಿ ಮತ್ತು ಕಾಳಚಿಯನ್ನು ಓದುಗರು ಬೆಳೆಸಿಕೊಳ್ಳಬೇಕು. ಈ ಭಾಗದ ಜನರಿಗೆ ಪುಸ್ತಕಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಪುಸ್ತಕ ಸಂತೆ ಆಯೋಜನೆ ಮಾಡಿರುವುದು ಉತ್ತಮ ಕಾರ್ಯವೆಂದು ಶ್ಲಾಘನೆ ವ್ಯಕ್ತಪಡಿಸಿದರು.

    ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕರ್ನಾಧಟಕ ಸರ್ಕಾರವು ಮೊದಲಿನಿಂದಲೂ ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳ ಸಗಟು ಖರೀದಿ ಮಾಡುತ್ತಿದೆ. ಆದ್ದರಿಂದ ಹೊಸ ಪುಸ್ತಕಗಳ ಖರೀದಿ ಕೆಲಸವು ಆಯಾ ವರ್ಷವೇ ಆಗಬೇಕು. ಹಣ ಬಿಡುಗಡೆ ಕೂಡ ಅದೇ ವರ್ಷವಾಗಬೇಕು ಎಂದು ಒತ್ತಾಯಿಸಿದರು.

    ಗ್ರಂಥಾಲಯವು ಒಂದು ರೀತಿಯಲ್ಲಿ ಉಗ್ರಾಣವಾಗಿದೆ. ಅಲ್ಲೊಂದು ಪುಸ್ತಕ ಸಂಸ್ಕೃತಿ ಬೆಳೆಸಲು ಬೇಕಾಗುವ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಪ್ರತಿ ತಿಂಗಳು ಕನಿಷ್ಠ ಒಂದು ಪುಸ್ತಕಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಪುಸ್ತಕ ಸಂಸ್ಕೃತಿ ಬೆಳೆಸಲು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

    ಪುಸ್ತಕೋದ್ಯಮಕ್ಕೆ ಸಂಪಾದನೆ ಮತ್ತು ಪುಸ್ತಕ ಸಂಸ್ಕೃತಿಗೆ ಸಂವೇದನೆ ಮುಖ್ಯ. ಸಂಪಾದನೆ ಮತ್ತು ಸಂಸ್ಕತಿ ಒಟ್ಟಾಗಿ ಸೇರಿದಾಗ ಜನರಲ್ಲಿ ಸಂವೇದನಾಶೀಲತೆ ಬೆಳೆಸಲು ಸಾಧ್ಯವಾಗಲಿದೆ.
    ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಗ್ರಂಥಾಲಯ ಇಲಾಖೆಯಗೆ 10 ಕೋಟಿ ರೂ.ಗಳನ್ನು ನೀಡಿದ್ದರು. ಅನುದಾನವನ್ನು ಈ ಬಾರಿ 25 ಕೋಟಿ ರೂ,ಗಳಿಗೆ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು.

    ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಸಮಬಾಳು, ಸಮಪಾಲು ಮತ್ತು ಸಮ ಸಮಾಜ ನಿರ್ಮಾಣ ಮಾಡಲು ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕಿದೆ. ಅದೇ ರೀತಿ ಯುವಕರು ತಡರಾತ್ರಿಯವರೆಗೂ ಸಾಮಾಜಿಕ ತಾಣದಲ್ಲಿ ಮತ್ತು ಗೂಗಲ್ ಸರ್ಚ್‌ನಲ್ಲಿ ಮುಳುಗಿರುತ್ತಾರೆ. ಇ ವಿದ್ಯಾರ್ಥಿಗಳು ಪುಸ್ತಕ ಓದುವ ಸಂಸ್ಕೃತಿ ಅಳವಡಿಸಿಕೊಂಡರೆ ದೇಶದ ಪ್ರಗತಿಗೆ ಅನುಕೂಲವಾಗಲಿದೆ ಎಂದರು,

    ಕಾರ್ಯಕ್ರಮದಲ್ಲಿ ವೀರಲೋಕ ಪ್ರತಿಷ್ಠಾನದ ಪ್ರಕಾಶಕ ಶ್ರೀನಿವಾಸ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ ಮತ್ತು ಕವಿ ಬಿ.ಆರ್. ಲಕ್ಷ್ಮಣರಾವ್ ಸೇರಿ ಹಲವರು ಉಪಸ್ಥಿತರಿದ್ದರು.

    ಉಗ್ರಪ್ಪ ಮತ್ತು ಸ್ನೇಹಿತರು ಸೇರಿ ಪುಸ್ತಕ ಸಂತೆ ಆಯೋಜನೆ ಮಾಡಿರುವುದು ಉತ್ತಮ ಕೆಲಸ. ಇದನ್ನು ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿಯೂ ಆಯೋಜಿಸುವ ಕೆಲಸ ಮಾಡಬೇಕು.
    – ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನ ಪರಿಷತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts