More

    ರೆಪೋದರ ಯಥಾಸ್ಥಿತಿ ಮುಂದುವರಿಕೆ, ಜಿಡಿಪಿ ಬೆಳವಣಿಗೆ ದರ ಮುಂದು ವರ್ಷಕ್ಕೆ ಶೇಕಡ 6: ವಿತ್ತೀಯ ನೀತಿ ಪ್ರಕಟಿಸಿದ ಆರ್​ಬಿಐ

    ಮುಂಬೈ: ಕೇಂದ್ರ ಸರ್ಕಾರ ಈ ಸಲದ ಮುಂಗಡ ಪತ್ರದಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ಇಳಿಸಿದ ನಂತರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಗುರುವಾರ ತನ್ನ ವಿತ್ತೀಯ ನೀತಿಯನ್ನು ಪ್ರಕಟಿಸಿದೆ. ಇದರಂತೆ, ರೆಪೋ ದರದ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿರುವ ಆರ್​ಬಿಐ, ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರವನ್ನೂ ಯಥಾಸ್ಥಿತಿ ಮುಂದುವರಿಸಿದೆ.

    ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್​ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಆರು ಸದಸ್ಯರ ವಿತ್ತೀಯ ನೀತಿ ಸಮಿತಿಯ ಸಭೆಯಲ್ಲಿ ಈ ಅವಧಿಯ ವಿತ್ತೀಯ ನೀತಿಯನ್ನು ಅಂತಿಮಗೊಳಿಸಲಾಗಿದೆ. ಇದರಂತೆ, ರೆಪೋ ದರ ಶೇಕಡ 5.15 ಮುಂದುವರಿಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಬೆಳವಣಿಗೆಗೆ ಪೂರಕ ನಿರ್ಣಯ ತೆಗೆದುಕೊಳ್ಳುವ ನೀತಿಯ ಅವಕಾಶವನ್ನು ಮುಕ್ತವಾಗಿ ಇರಿಸಿಕೊಳ್ಳಲಾಗಿದೆ.

    ಪ್ರಸಕ್ತ ಹಣಕಾಸು ವರ್ಷದ ಮಟ್ಟಿಗೆ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 5 ಮುಂದುವರಿಸಲಾಗಿದ್ದು, ಮುಂದಿನ ಹಣಕಾಸು ವರ್ಷಕ್ಕೆ ಇದು ಶೇಕಡ 6 ಆಗಿರಲಿದೆ. ಇದೇ ರೀತಿ, ಹಣದುಬ್ಬರ ದರದ ಔಟ್​ಲುಕ್ ಅನ್ನು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಶೇಕಡ 0.30 ಹೆಚ್ಚಿಸಿದ್ದು, ಶೇಕಡ 5.4-5ರ ದರದಲ್ಲಿ ನಿರೀಕ್ಷಿಸಲಾಗುತ್ತಿದೆ. ಆರು ಸದಸ್ಯರ ಸಮಿತಿ ಒಮ್ಮತದಿಂದ ರೆಪೋದರ, ಜಿಡಿಪಿ ಬೆಳವಣಿಗೆ ದರದ ತೀರ್ಮಾನವನ್ನು ತೆಗೆದುಕೊಂಡಿದೆ.

    ಕೇಂದ್ರ ಮುಂಗಡ ಪತ್ರದಲ್ಲಿ ಉಲ್ಲೇಖಿಸಿದ ಆದಾಯ ತೆರಿಗೆ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಕೇಂದ್ರ ಬಜೆಟ್ 2020-21ರಲ್ಲಿ ಆದಾಯ ತೆರಿಗೆ ದರವನ್ನು ತರ್ಕ ಬದ್ಧಗೊಳಿಸಿರುವ ಕ್ರಮವು ಪ್ರಾದೇಶಿಕ ಬೇಡಿಕೆಯನ್ನು ಈಡೇರಿಸುವಂತೆ ಇರಬೇಕು ಮತ್ತು ಗ್ರಾಮೀಣ ಮತ್ತು ಮೂಲಸೌಕರ್ಯದ ಖರ್ಚುವೆಚ್ಚಗಳಿಗೆ ಉತ್ತೇಜನ ನೀಡುವಂತೆ ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts