More

    ಸಂಸದ ತೇಜಸ್ವಿ ಸೂರ್ಯಗೆ ಕನಿಷ್ಠ ಜ್ಞಾನವಿಲ್ಲ: ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ವಾಗ್ದಾಳಿ

    ಮಂಡ್ಯ: ರೈತರ ಸಾಲಮನ್ನಾದಿಂದ ಯಾವುದೇ ಪ್ರಯೋಜನವಿಲ್ಲವೆಂದಿರುವ ಸಂಸದ ತೇಜಸ್ವಿ ಸೂರ್ಯಗೆ ಕನಿಷ್ಠ ಮಟ್ಟದ ಜ್ಞಾನವಿಲ್ಲ ಎಂದು ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ವಾಗ್ದಾಳಿ ನಡೆಸಿದರು.
    ತೇಜಸ್ವಿ ಸೂರ್ಯ ಸಂಸದನಾಗಿರುವುರಿಂದಲೂ ದೇಶಕ್ಕೆ ಯಾವುದೇ ಉಪಯೋಗವಿಲ್ಲ. ರೈತರ ಬಗ್ಗೆ ಮಾತನಾಡುವುದೆಂದರೆ ವಿಮಾನದ ತುರ್ತು ಬಾಗಿಲು ತೆರೆದಂತಲ್ಲ. ಕರೊನಾ ಸಂದರ್ಭದಲ್ಲಿ ನೀವು ಹಾಕಿರುವ ಲಕ್ಷಾಂತರ ಕೋಟಿ ರೂ. ಬಂಡವಾಳ ಮಕಾಡೆ ಮಲಗಿದ್ದಾಗ, ಇಡೀ ದೇಶದಲ್ಲಿ ಕೃಷಿ ಚಟುವಟಿಕೆ ಮಾತ್ರ ನಡೆಯುತ್ತಿತ್ತೆಂಬ ಕನಿಷ್ಠ ಜ್ಞಾನವೂ ನಿಮಗಿಲ್ಲ. ರೈತರ ಕಷ್ಟ ಸುಖದ ಅರಿವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
    ನಮ್ಮದು ಹಳ್ಳಿ ಪ್ರಧಾನ ರಾಷ್ಟ್ರ. ದೇಶದಲ್ಲಿ ಬಹುತೇಕ ಆರ್ಥಿಕತೆ ನಿಂತಿರುವುದು ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಮೇಲೆ ಎಂಬುದು ನಿಮಗೆ ತಿಳಿದಿಲ್ಲವೇ?. ಕೃಷಿಯಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆ ಬಗ್ಗೆ ನಿಮಗೆ ಅರಿವಿದೆಯೇ?. ಈ ಬಾರಿಯ ಬಜೆಟ್‌ನಲ್ಲಿ ನಿಮ್ಮದೇ ಮನಸ್ಥಿತಿ ಹೊಂದಿರುವ ಕೇಂದ್ರ ಸರ್ಕಾರವು ರೈತರಿಗೆ ಸಿಗಬೇಕಾದ ಪಾಲನ್ನು ಕಡಿತಗಳಿಸಿ ಮೊದಲೇ ಸಂಕಷ್ಟದಲ್ಲಿರುವ ರೈತರ ಮೇಲೆ ಬರೆ ಎಳೆ ಎಳೆದಿದೆ. ರೈತರು ಯಾವತ್ತು ಸರ್ಕಾರಕ್ಕೆ ಬಾಕಿದಾರರಲ್ಲ, ಸರ್ಕಾರವೇ ರೈತರಿಗೆ ಬಾಕಿದಾರ ಎಂದು ಕಿಡಿಕಾರಿದರು.
    ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ಕ್ಷೇತ್ರಕ್ಕೆ 20 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಒಟ್ಟು ಕೇಂದ್ರದ ಬಜೆಟ್ ಗಾತ್ರವೇ 43 ಲಕ್ಷ ಕೋಟಿ ರೂ. ಆಗಿರುವಾಗ 20 ಲಕ್ಷ ಕೋಟಿ ರೂ ಮೀಸಲಿಡಲು ಹೇಗೆ ಸಾಧ್ಯ?. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದರು.
    ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದ್ದರೆ ರೈತರಿಗೆ ಸಾಲಮನ್ನಾದ ಅವಶ್ಯಕತೆ ಇರಲಿಲ್ಲ. ಬಿಜೆಪಿ ಸರ್ಕಾರ ವೈಜ್ಞಾನಿಕ ಬೆಲೆ ನೀಡದ ಕಾರಣ ನಾವು ಸಾಲಮನ್ನಾ ಸೇರಿದಂತೆ ಇತರೆ ಸವಲತ್ತುಗಳನ್ನು ಕೇಳುತಿದ್ದೇವೆ. ಉದ್ಯಮಿಗಳು ಸಾವಿರಾರು ಕೋಟಿ ರೂ ವಂಚಿಸಿ ದೇಶವನ್ನು ಬಿಟ್ಟು ಓಡಿ ಹೋದಾಗ ನೀವೇನು ಮಾಡುತ್ತಿದ್ದೀರಿ?. ಮೊದಲು ಅದರ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ರೈತರ ಬಗ್ಗೆ ಉಡಾಫೆಯಿಂದ ಮಾತನಾಡಿದರೆ ಸರಿಯಾದ ಬುದ್ಧಿ ಕಲಿಸಬೇಕಾಗುತ್ತದೆ. ಸಂಸದ ತೇಜಸ್ವಿ ಸೂರ್ಯ ಕೂಡಲೇ ರೈತರ ಕ್ಷಮೆಯಾಚಿಸಬೇಕು. ಇನ್ನೆರಡು ದಿನಗಳಲ್ಲಿ ಅವರು ಕ್ಷಮೆ ಕೇಳದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ರೈತ ಮುಖಂಡರಾದ ಜಗದೀಶ್, ರಮೇಶ್, ನಾಗಣ್ಣ, ಕಾಂತರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts