More

    ರೈತನ ಮನೆ ಜಪ್ತಿ: ಉಜ್ಜೀವನ್ ಫೈನಾನ್ಸ್ ವಿರುದ್ಧ ರೈತರ ಆಕ್ರೋಶ

    ಶ್ರೀರಂಗಪಟ್ಟಣ: ಪಡೆದಿದ್ದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ರೈತನ ಮನೆ ಜಪ್ತಿ ಮಾಡಿ ಬೀಗ ಜಡಿದಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಉಜ್ಜೀವನ್ ಫೈನಾನ್ಸ್ ಕಾರ್ಪೋರೇಷನ್ ಎದುರು ಗುರುವಾರ ಪ್ರತಿಭಟಿಸಿದರು.
    ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿರುವ ಬ್ಯಾಂಕ್ ಮುಂಭಾಗ ಪಕ್ಷದ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಬ್ಯಾಂಕ್ ವಿರುದ್ಧ ಘೋಷಣೆ ಕೂಗಿದರು.
    ಸಬ್ಬನಕುಪ್ಪೆ ಗ್ರಾಮದ ಕೆಂಪೇಗೌಡ ಎಂಬ ರೈತ 3 ವರ್ಷಗಳ ಹಿಂದೆ ಉಜ್ಜೀವನ್ ಬ್ಯಾಂಕ್‌ನಿಂದ 10 ಲಕ್ಷ ರೂ. ಸಾಲ ಪಡೆದಿದ್ದು, 6.5 ಲಕ್ಷ ತೀರುವಳಿ ಮಾಡಿದ್ದಾರೆ. ಅದಾಗಿಯೂ ಉಳಿಕೆ ಹಣವನ್ನು ಶೀಘ್ರ ಪಾವತಿಸಲು ಒತ್ತಡ ಹೇರಿರುವ ಬ್ಯಾಂಕ್, ರೈತನಿಗೆ ತಿಳಿಯದಂತೆ ನ್ಯಾಯಾಲಯದಿಂದ ಆದೇಶ ಪಡೆದು ಬೀಗ ಜಡಿದಿದೆ. ಅಧಿಕ ಬಡ್ಡಿಯನ್ನು ಕಡಿತಗೊಳಿಸಿ ಉಳಿದ ಅಸಲು ಮರುಪಾವತಿಗೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಹೋರಾಟ ಮಾಡಿ ಬಂಧನವಾಗಲು ಸಿದ್ಧರಿದ್ದೇವೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಎಚ್ಚರಿಸಿದರು.
    ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ ಶಾಖಾ ವ್ಯವಸ್ಥಾಪಕ ವಿನಯ್, ಪ್ರಕರಣವನ್ನು ಕಚೇರಿಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ರೈತನಿಗೆ ಅನೂಕೂಲ ಮಾಡಿಕೊಡುವಂತೆ ಕೇಳಿಕೊಳ್ಳಲಾಗಿದೆ ಎಂದು ತಿಳಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
    ಇದಕ್ಕೆ ಪ್ರತಿಕ್ರಿಯಿಸಿದ ರೈತ ಕಾರ್ಯಕರ್ತರು, ಅ.17ರವರೆಗೆ ಕಾಲಾವಕಾಶ ನೀಡುತ್ತಿದ್ದು, ಒಂದು ವೇಳೆ ರೈತ ವಿರೋಧಿ ನಡೆ ಮುಂದುವರಿದರೆ ಬ್ಯಾಂಕ್ ಮುಂಭಾಗ ಪ್ರತಿಭಟನೆ ಕೂರುವುದಾಗಿ ಎಚ್ಚರಿಕೆ ನೀಡಿದರು.
    ರೈತ ಮುಖಂಡರಾದ ಬಲ್ಲೇನಹಳ್ಳಿ ಮಂಜು, ಪುರುಷೋತ್ತಮ್, ಹೊಸಹುಂಡುವಾಡಿ ಮಹದೇವು, ಬಲ್ಲೇನಹಳ್ಳಿ ಕೃಷ್ಣೇಗೌಡ, ಕೆ.ಶೆಟ್ಟಹಳ್ಳಿ ಮಹಲಿಂಗು, ಪಾಲಹಳ್ಳಿ ರಾಮಚಂದ್ರು, ಕೆಂಪೇಗೌಡ, ದರಸಗುಪ್ಪೆ ಸುರೇಶ್, ಕಿರಂಗೂರು ಫಿಲಿಪ್ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts