More

    ಕಬ್ಬಿಗೆ ಬೆಂಬಲ ನಿಗದಿಗೆ ಒತ್ತಾಯಿಸಿ ಬೆಸಗರಹಳ್ಳಿ ಬಂದ್: ಸಂಘಟನೆಗಳು, ವ್ಯಾಪಾರಸ್ಥರಿಂದ ಉತ್ತಮ ಬೆಂಬಲ

    ಮದ್ದೂರು: ಕಬ್ಬಿನ ಬೆಂಬಲ ಬೆಲೆ ನಿಗದಿ, ಹಾಲಿನ ದರ ಹೆಚ್ಚಳ ಹಾಗೂ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹಾಗೂ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಬೆಸಗರಹಳ್ಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
    ಬಂದ್ ಕರೆ ಹಿನ್ನೆಲೆಯಲ್ಲಿ ವರ್ತರು, ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಅವರ ನೇತೃತ್ವದಲ್ಲಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಗಿಳಿದ ರೈತಸಂಘದ ಕಾರ್ಯಕರ್ತರು ಕೆಲಕಾಲ ಮದ್ದೂರು ಕೊಪ್ಪ ಮಾರ್ಗದ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
    ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ರೈತ ಸಂಘದ ತಾಲೂಕು ಅಧ್ಯಕ್ಷ ಸೀತಾರಾಮು ಮಾತನಾಡಿ, ರಾಜ್ಯದ ರೈತಾಪಿ ಜನರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಸರ್ಕಾರಗಳು ವಂಚಿಸುತ್ತಿವೆ. ಗೊಬ್ಬರಗಳ ದರ ಹೆಚ್ಚಿಸಿ ರೈತರಿಗೆ ಗಾಯದ ಮೇಲೆ ಬರೆ ಎಳೆದಿವೆ. ಕಬ್ಬಿಗೆ ನ್ಯಾಯ ಮತ್ತು ಯೋಗ್ಯ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
    ಭತ್ತಕ್ಕೆ ಎಲ್ಲ ಜಿಲ್ಲೆಗಳಿಗೆ ಸಮನಾಂತರ ಬೆಲೆ ನಿಗದಿಗೊಳಿಸಬೇಕು. ಹೈನುಗಾರಿಕೆಗೆಯನ್ನು ಪ್ರೋತ್ಸಾಹಿಸಿ ಹಾಲಿನ ಉತ್ಪಾದನೆ ವೆಚ್ಚ ಆಧರಿಸಿ ಲೀಟರ್‌ಗೆ 40ರಿಂದ 45 ರೂ. ಬೆಲೆ ನೀಡಬೇಕು. ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ನಷ್ಟಕ್ಕೆ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ವಿತರಿಸಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು. ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
    ರೈತ ಸಂಘದ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿದರು. ದಲಿತ ಮುಖಂಡ ಬಿ.ಎಂ. ಸತ್ಯ, ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೊ.ಶಿ. ಪ್ರಕಾಶ್, ಗುಡಿದೊಡ್ಡಿ ಶಿವಲಿಂಗಯ್ಯ, ಶಿವಣ್ಣ, ಉಮೇಶ್, ಪಣ್ಣೆದೊಡ್ಡಿ ವೆಂಕಟೇಶ್, ರಮೇಶ್, ಮರಲಿಂಗಯ್ಯ, ಮರಳಿಗ ಚನ್ನಪ್ಪ, ರಾಜೇಶ್, ಉಮೇಶ್, ಲೋಕೇಶ್, ಹೊಸಕೆರೆ ಜಯರಾಮು, ಕೆ.ಪಿ. ದೊಡ್ಡಿ ಪುಟ್ಟಸ್ವಾಮಿ, ಭಾರತೀನಗರ ವೆಂಕಟೇಶ್, ಆನಂದ, ರಾಜು, ಪಾರ್ಥ, ಕೋಣಸಾಲೆ ಕೃಷ್ಣ, ಶಿವರಾಮು, ಆನೆದೊಡ್ಡಿ ಶಿವರಾಮು ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts