More

    ಕೃಷಿಗೆ ಬೇಡಿಕೆ ಬರುವ ದಿನ ದೂರವಿಲ್ಲ: ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಅಭಿಮತ

    ಮಂಡ್ಯ: ದೇಶಕ್ಕೆ ಅನ್ನ ನೀಡುವ ಕೃಷಿ ಪದ್ಧತಿ ಮಾತ್ರ ಸಾರ್ವಕಾಲಿಕವಾಗಿ ಉಳಿಯುತ್ತದೆ. ಮಾತ್ರವಲ್ಲದೆ ಕೃಷಿ ಹಾಗೂ ರೈತರ ಉದ್ಯೋಗಕ್ಕೂ ಬೇಡಿಕೆ ಬರುವ ದಿನ ದೂರವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ತಿಳಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಅಂಗವಾಗಿ ಮಾಜಿ ಪ್ರಧಾನಿ ದಿ.ಚೌದರಿ ಚರಣ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಕೃಷಿ ಜೀವನ ಕಷ್ಟಕರವೆಂದು ಬೇರೆ ಉದ್ಯೋಗ ಹುಡುಕಿ ಹೊರಟವರ ಸಂಖ್ಯೆ ಹೆಚ್ಚು. ವ್ಯವಸಾಯ ಜೀವನಕ್ಕೆ ಪ್ರಮುಖ ಎಂದು ತಿಳಿದಿದ್ದರೂ ಹೆಚ್ಚು ಜನ ವಿಮುಖರಾಗಿದ್ದಾರೆ ಎಂದರು.
    ಕೃಷಿಯಲ್ಲಿ ಬಹಳ ಸವಾಲುಗಳಿವೆ. ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚು. ಕೃಷಿಯಲ್ಲಿ ಕಾರ್ಮಿಕರು ಹಾಗೂ ಯಂತ್ರೋಪಕರಣ ಆಧುನಿಕ ಪದ್ಧತಿ ಬಳಸಲು ಹಣದ ಕೊರತೆ ಇದೆ. ರೈತರು ಸಂಘಟಿತರಾಗಿ ಗುಂಪುಗಳನ್ನು ಮಾಡಿಕೊಂಡು ತಮಗೆ ಬೇಕಿರುವ ಯಂತ್ರೋಪಕರಣಗಳನ್ನು ಖರೀದಿಸಿ ಬಳಸುವ ಮನಸ್ಥಿತಿ ಬೆಳಸಿಕೊಳ್ಳಬೇಕಿದೆ. ಕೃಷಿಯನ್ನು ಲಾಭದಾಯಕ ಹುದ್ದೆಯಾಗಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಬೆಲ್ಲದಲ್ಲಿ ಮಾಡಿದ ಟೀ ಎಂದರೆ ಅದು ಬಡವರು ಕುಡಿಯುವ ಟೀ ಎನ್ನುತ್ತಿದ್ದರು, ಇಂದು ಶ್ರೀಮಂತರು ಬೆಲ್ಲದಿಂದ ಮಾಡಿದ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದಾರೆ. ಈ ಬದಲಾವಣೆ ಗಮನಿಸಿದಾಗ ಜಿಲ್ಲೆಯಲ್ಲಿ ಬೆಲ್ಲಕ್ಕೆ ಹೆಚ್ಚು ಬೇಡಿಕೆ ಬರಬೇಕು ಎಂದರು.
    ಜಿಲ್ಲೆಯಲ್ಲಿ ಸಾವಯವ ಬೆಲ್ಲ ಹೆಚ್ಚು ಉತ್ಪಾದನೆಯಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಗಳಿಸಬೇಕು. ಇದಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಾವಯವ ಬೆಲ್ಲ ತಯಾರಿಕೆಯ ಬಗ್ಗೆ ಕೃಷಿ ಇಲಾಖೆ ವತಿಯಿಂದ ಹಲವಾರು ಕಾರ್ಯಾಗಾರ ಹಾಗೂ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾಜಿ ಪ್ರಧಾನಿ ದಿ.ಚೌದರಿ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥ ರೈತ ದಿನವನ್ನು ಆಚರಿಸಲಾಗುತ್ತಿದೆ ಎಂದರು.
    ಕಬ್ಬು ಉತ್ಪಾದನೆ, ರಾಸಾಯನಿಕ ಮುಕ್ತ ಸ್ವಚ್ಛ ಬೆಲ್ಲ ತಯಾರಿಕೆ ಹಾಗೂ ಮೌಲ್ಯವರ್ಧನೆ ಕುರಿತು ಹಿರಿಯ ವಿಜ್ಞಾನಿ ಡಾ.ಬಿ.ಬಿ. ಬೋರ್ಸೆ ಉಪನ್ಯಾಸ ನೀಡಿದರು. ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಡಾ.ಗೋವಿಂದರಾಜು, ಬೆಂಗಳೂರು ಇಂದಿರಾ ಫುಡ್ಸ್‌ನ ಮುಖ್ಯಸ್ಥೆ ಇಂದಿರಾ, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರ ಗುರು, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್. ನಿರ್ಮಲಾ, ಮಮತಾ, ಮಾಲತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts