More

    ಪಡಿತರ ಇ-ಕೆವೈಸಿಗೆ ಸರ್ವರ್ ಸಂಕಷ್ಟ, ಕೇಂದ್ರದಲ್ಲಿ ನೂಕುನುಗ್ಗಲು

     

     

    ಬಿ.ನರಸಿಂಹ ನಾಯಕ್ ಬೈಂದೂರು
    ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ನೂಕುನುಗ್ಗಲು ಏರ್ಪಟ್ಟಿದ್ದು, ಕೆಲದಿನಗಳಿಂದ ಸರ್ವರ್ ಸಮಸ್ಯೆಯಿಂದ ಸ್ಥಗಿತಗೊಂಡ ಪ್ರಕ್ರಿಯೆ ಈಗ ಜ.20ರವರೆಗೆ ಮುಂದೂಡಲ್ಪಟ್ಟಿದೆ.
    ಪಡಿತರ ಸೌಲಭ್ಯ ಅರ್ಹರಿಗೆ ಸಿಗಬೇಕೆಂಬ ಉದ್ದೇಶದಿಂದ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಇ-ಕೆವೈಸಿ ಪ್ರಕ್ರಿಯೆ. ಈಗ ಗಡುವು ಮಾರ್ಚ್ 31ರವರೆಗೆ ವಿಸ್ತರಣೆಯಾಗಿದ್ದರೂ, ಸರ್ವರ್ ಸಮಸ್ಯೆಯಿಂದಾಗಿ ಇಡೀ ಪ್ರಕ್ರಿಯೆ ಸ್ಥಗಿತಗೊಂಡಿದೆ.

    ಮುಗಿಯದ ಗೊಂದಲ: ಪ್ರಸಕ್ತ ಲಕ್ಷಾಂತರ ಮಂದಿ ಆದಾಯ ಮಿತಿ ಮೀರಿದವರು ಬಿಪಿಎಲ್ ಕಾರ್ಡ್‌ನ ಸೌಲಭ್ಯ ಪಡೆಯುತ್ತಿದ್ದಾರೆ. ಮೃತಪಟ್ಟವರು, ವಿದೇಶಗಳಲ್ಲಿ ನೆಲೆಸಿರುವವರ ಹೆಸರೂ ಪಡಿತರ ಚೀಟಿಯಲ್ಲಿದೆ. ಇದರಿಂದಾಗಿ ಹೆಚ್ಚುವರಿ ಪಡಿತರ ಸಾಮಗ್ರಿ ವಿತರಣೆಯಾಗಿ ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಕುಟುಂಬದ ಎಲ್ಲರ ಆಧಾರ್ ದೃಢೀಕರಣಕ್ಕೆ ಅಭಿಯಾನ ಆರಂಭಿಸಲಾಗಿದೆ.

    ಎಲ್ಲರೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಿದ್ದು, ಥಂಬ್ (ಬೆರಳಚ್ಚು) ಮಾಡುವುದು ಕಡ್ಡಾಯ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೇ ತೆರಳಬೇಕೆಂದಿಲ್ಲ. ಬಿಡಿಬಿಡಿಯಾಗಿ ಪಡಿತರ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಬಹುದು.
    ಇಲ್ಲಿ ಗೊಂದಲಕ್ಕೆ ಕಾರಣವಾಗಿರುವುದು ಆಹಾರ ಇಲಾಖೆ ನೀಡುತ್ತಿರುವ ಗಡುವು. ನವೆಂಬರ್ ತಿಂಗಳ ಗಡುವು ನಂತರ ಜನವರಿ 10 ಕ್ಕೆ ವಿಸ್ತರಣೆಯಾಯಿತು. ಅವಧಿಯೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಸಿಗುವುದಿಲ್ಲ ಎಂದೆಲ್ಲ ಪ್ರಚಾರ ನಡೆದಿದ್ದರಿಂದಾಗಿ ಸೊಸೈಟಿಗಳಲ್ಲಿ ನೂಕುನುಕ್ಕಲು ಏರ್ಪಟ್ಟಿತು. ಜನರು ಕೆಲಸ- ಕಾರ್ಯ ಬಿಟ್ಟು ಸರದಿಸಾಲಿನಲ್ಲಿ ನಿಲ್ಲಲಾರಂಭಿಸಿದರು. ಆದರೆ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಜನರನ್ನು ಸತಾಯಿಸಿತು. ಈಗ ಸರ್ವರ್ ಡೌನ್ ತಾಂತ್ರಿಕ ಸಮಸ್ಯೆಯಿಂದ ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಸರ್ವರ್ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಮುಗಿಸಿ ಜ.20ರ ಬಳಿಕ ಇ-ಕೆವೈಸಿ ಮುಂದುವರಿಯುತ್ತದೆ, ಮಾರ್ಚ್ 31ರವರೆಗೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ಕೆವೈಸಿ ಕಾರ್ಯದಿಂದ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ನೆಟ್‌ವರ್ಕ್, ಸರ್ವರ್ ಸಮಸ್ಯೆ ತೀವ್ರವಾಗಿದೆ. ಇ-ಕೆವೈಸಿ ಕಾರ್ಯವನ್ನು ನ್ಯಾಯಬೆಲೆ ಅಂಗಡಿ ಬದಲು ಗ್ರಾಮ ಪಂಚಾಯಿತಿ ಅಥವಾ ತಾಲೂಕು ಕಚೇರಿಗಳಲ್ಲಿ ಮಾಡಿದರೆ ಉತ್ತಮ’ ಎನ್ನುತ್ತಾರೆ ಯಡ್ತರೆಯ ಬೈ.ವ್ಯ.ಸೇ.ಸ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾರಾಮ ಶೆಟ್ಟಿ.

    ಆಗಿರೋದು ಅಲ್ಪ ಮಾತ್ರ: ದಕ್ಷಿಣಕನ್ನಡ ಜಿಲ್ಲೆಯಲ್ಲಿ 1,59,372 ಎಪಿಎಲ್ ಹಾಗೂ 2,71,612 ಬಿಪಿಎಲ್ ಪಡಿತರ ಚೀಟಿದಾರರಿದ್ದು, ಶೇ.39ರಷ್ಟು ಇ- ಕೆವೈಸಿ ಪೂರ್ಣಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಎಪಿಎಲ್ ಕಾರ್ಡ್ 96,000, ಬಿಪಿಎಲ್ ಕಾರ್ಡ್ 1,61,407, ಅಂತ್ಯೋದಯ ಕಾರ್ಡ್ 28,741 ಇದೆ. ಇವುಗಳ ಪೈಕಿ ಇ-ಕೆವೈಸಿ ಆಗಿರುವುದು ಶೇ.40ರಷ್ಟು ಮಾತ್ರ.

    ಸಾರ್ವಜನಿಕರು ಪಡಿತರ ಚೀಟಿ ಇ-ಕೆವೈಸಿ ಬಗ್ಗೆ ಆತಂಕಗೊಳ್ಳಬೇಕಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿ ನೋಂದಣಿ ಕಾರ್ಯ ವಿಳಂಬವಾಗಿದೆ. ಇದಕ್ಕೆ ವೇಗ ಕೊಡಲೆಂದು ವ್ಯವಸ್ಥೆ ಸುಧಾರಣೆ ಮಾಡಲಾಗುತ್ತಿದ್ದು, ಜ.21ರ ಬಳಿಕ ಇ-ಕೆವೈಸಿ ನೋಂದಣಿ ಪುನಃ ಆರಂಭವಾಗಲಿದೆ.
    -ಬಿ.ಕೆ ಕುಸುಮಾಧರ, ಉಪ ನಿರ್ದೇಶಕ,(ಪ್ರಭಾರ), ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ

    ತಾಂತ್ರಿಕ ವ್ಯವಸ್ಥೆ ಅಪ್‌ಗ್ರೇಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಜ.20 ಬಳಿಕ ಇ- ಕೆವೈಸಿ ಪ್ರಕ್ರಿಯೆ ಪುನರಾರಂಭಗೊಳ್ಳಲಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಮಾರ್ಚ್ ಅಂತ್ಯ ತನಕ ಅವಕಾಶವಿದೆ. ಆದ್ದರಿಂದ ಸಾರ್ವಜನಿಕರು ಅವಸರ ಮಾಡುವ ಅಗತ್ಯವಿಲ್ಲ.
    -ಸುನಂದಾ, ಸಹಾಯಕ ನಿರ್ದೇಶಕಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ.

    ಗ್ರಾಮೀಣ ಭಾಗದ ಜನರಿಗೆ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಗೊಂದಲ ಉಂಟಾಗಿದೆ. ದೂರದ ಊರುಗಳಿಂದ ತರಾತುರಿಯಲ್ಲಿ ಓಡಿ ಬರುವಂತಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಉದ್ಯೋಗ ಬಿಟ್ಟು ಕಾಯಬೇಕಾದ ಪರಿಸ್ಥಿತಿ ಬಂದಿದೆ.
    -ಜಯವಧರ್ನ ಬಿಲ್ಲವ ತೂದಳ್ಳಿ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts