More

    ಕುವೆಂಪು ಕವಿ, ಸಾಹಿತಿ, ಮಹಾನ್ ದಾರ್ಶನಿಕ

    ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರು ಕೇವಲ ಒಬ್ಬ ಕವಿ ಮತ್ತು ಸಾಹಿತಿಯಲ್ಲ. ಅವರೊಬ್ಬ ಮಹಾನ್ ದಾರ್ಶನಿಕ. ಅವರ ವ್ಯಕ್ತಿತ್ವ ಆಕಾಶ, ಸಮುದ್ರ ಇದ್ದಂತೆ. ಹಾಗಾಗಿ ಅವರನ್ನು ಕೆಲವೇ ಮಾತುಗಳನ್ನು ಹಿಡಿದಿಡುವುದು ಅಸಾಧ್ಯ ಎಂದು ತೀರ್ಥಹಳ್ಳಿಯ ನಿವೃತ್ತ ಪ್ರಾಧ್ಯಾಪಕ ಜೆ.ಕೆ.ರಮೇಶ್ ಬಣ್ಣಿಸಿದರು.
    ನಗರದ ಜಿಲ್ಲಾ ಒಕ್ಕಲಿಗರ ಭವನದಲ್ಲಿ ಗುರುವಾರ ಜಿಲ್ಲಾ ಒಕ್ಕಲಿಗರ ಸಂಘ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಮಲೆನಾಡು ಕಲಾ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುವೆಂಪು ಅವರ 118ನೇ ಜನ್ಮದಿನಾಚರಣೆ ನಿಮಿತ್ತ ಉಪನ್ಯಾಸ-ನಾಟಕ-ಗಾಯನ-ರೂಪಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
    ಕುವೆಂಪು ಅವರ ಸಾಹಿತ್ಯ ರಚನೆ ರಸದ ಗಟ್ಟಿ ಇದ್ದಂತೆ. ಇದುವರೆಗೆ ಸಂದ ಪ್ರಶಸ್ತಿಗಳೇ ಅವರ ವ್ಯಕ್ತಿತ್ವವನ್ನು ಬಣ್ಣಿಸುತ್ತವೆ. ಎಲ್ಲ ಪ್ರಶಸ್ತಿಗಳಿಗೂ ಮೊದಲಿಗರಾಗಿರುವುದು ಅವರ ವಿಶೇಷ. ವೈಚಾರಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಬೆಳೆದುಬಂದ ಅವರು ಕೊನೆಯಲ್ಲಿ ವಿಶ್ವ ಮಾನವ ಸಂದೇಶವನ್ನು ಕೊಟ್ಟು ಹೋಗಿದ್ದು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
    ಪ್ರತಿಯೊಬ್ಬರೂ ಜನಿಸುವಾಗ ವಿಶ್ವ ಮಾನವರೇ ಆಗಿರುತ್ತಾರೆ. ಆದರೆ ಸಮಾಜದಲ್ಲಿ ಬೆಳೆದಂತೆ ಅಲ್ಪ ಮಾನವರಾಗುತ್ತಾರೆ. ಆದರೆ ಕುವೆಂಪು ಅವರು ಜೀವನದಲ್ಲಿ ಯಾವ ಮಿತಿಗಳೂ ಇರಬಾರದು ಎಂದು ನಂಬಿದ್ದರು. ದಾರ್ಶನಿಕರ ಜತೆಗೆ ಸಮಾಜ ಸುಧಾರಕರೂ ಆಗಿದ್ದರು. ಆದರೆ ಕವಿ, ಸಾಹಿತಿ, ದಾರ್ಶನಿಕ ಎಂಬುದು ಸಮಾಜ ಸುಧಾರಕ ಎಂಬುದನ್ನು ಮರೆ ಮಾಚಿತು ಎಂದರು.
    ಮಲೆನಾಡು ಕಲಾ ತಂಡದ ಅಧ್ಯಕ್ಷ ಡಾ. ಗಣೇಶ್ ಕೆಂಚನಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಬಿ.ಆದಿಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಎನ್.ಎಚ್.ನಾಗರಾಜ್ ನೀರುಳ್ಳಿ, ಸಹ ಕಾರ್ಯದರ್ಶಿ ಸುಮಿತ್ರಾ ಕೇಶವಮೂರ್ತಿ, ಖಜಾಂಚಿ ಟಿ.ಪಿ.ನಾಗರಾಜ್, ಆಂತರಿಕ ಲೆಕ್ಕ ಪರಿಶೋಧಕ ಎಂ.ವೈ.ನವೀನ್, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಿ.ಮಧು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts