ಬೆಳಗಾವಿ: ರೈಲು ಎನ್ನುವುದು ಭೌತಿಕವಾಗಿ ಒಂದು ಸಂಪರ್ಕ ಸಾಧನವಷ್ಟೆ. ಆದರೆ, ಉತ್ತರ ಕರ್ನಾಟಕದ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಭಾಗದ ಜನರಿಗೆ ರಾಣಿ ಚನ್ನಮ್ಮ ರೈಲು, ಸಂಪರ್ಕ ಸಾಧನಕ್ಕಿಂತ ಮಿಗಿಲಾದ ಮಿತ್ರನಿದ್ದಂತೆ. ಕೇವಲ ಪ್ರಯಾಣಕ್ಕಲ್ಲ; ತಮ್ಮ ವಾಚಿನ ಸಮಯ ಸರಿಯಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಹೊಲಕ್ಕೆ ಹೊರಡುವ ಸಮಯವಾಯಿತು, ರಾತ್ರಿ ಮಲಗುವ ಹೊತ್ತಾಯಿತು… ಹೀಗೆ ಅನೇಕ ಸಂಗತಿಗಳಿಗೂ ಉಗಿಬಂಡಿಗೂ
ಒಂದು ಸಂಬಂಧವಿದೆ! ಇಂಥ ಅತ್ಯಂತ ಜನಪ್ರಿಯ ರೈಲು ಈಗ ರಜತ ಸಂಭ್ರಮದ ವರ್ಷದಲ್ಲಿದೆ.
ರಾಣಿ ಚನ್ನಮ್ಮ ಹೆಸರಿನ ವೇಗದೂತ ರೈಲು ಆರಂಭವಾಗಿದ್ದು 1995ರ ಆಗಸ್ಟ್ 15ರಂದು. ಬೆಂಗಳೂರು ಮತ್ತು ಮಹಾರಾಷ್ಟ್ರದ ಮಿರಜ್ ಮಧ್ಯೆ ಸಂಚರಿಸುವ ಈ ರೈಲನ್ನು 2002ರಲ್ಲಿ ಕೊಲ್ಲಾಪುರದವರೆಗೆ ವಿಸ್ತರಿಸಲಾಯಿತು. ನೈಋತ್ಯ ರೈಲ್ವೆಯ ಪ್ರಮುಖ ರೈಲುಗಳಲ್ಲಿ ಇದು ಒಂದು.
ಮೊದಲು ಇದು ಬೆಂಗಳೂರು-ಪುಣೆ ರೈಲು ಆಗಿ ಹಲವು ವರ್ಷದಿಂದ ಚಾಲ್ತಿಯಲ್ಲಿತ್ತು. ಆಗ ಇದಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್, ಕಿತ್ತೂರು ಎಕ್ಸ್‌ಪ್ರೆಸ್ ಎಂದು ಬೇರೆ ಬೇರೆ ಸಂದರ್ಭದಲ್ಲಿ ನಾಮಕರಣ ಮಾಡಲಾಗಿತ್ತು. ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡುವಂತೆ 1986ರಲ್ಲಿ ಅಂದಿನ ತುಮಕೂರು ಸಂಸದ ಜಿ.ಎಸ್.ಬಸವರಾಜ ಅವರು ಸಂಸತ್ತಿನಲ್ಲಿ ಬೇಡಿಕೆ ಮಂಡಿಸಿದ್ದರು.
1995ರಲ್ಲಿ ಬ್ರಾಡ್‌ಗೇಜ್ ಹಳಿಗೆ ಪರಿವರ್ತನೆಯಾದ ಮೇಲೆ ರೈಲ್ವೆ ಸಚಿವಾಲಯವು ಅವರ ಬೇಡಿಕೆಯನ್ನು ಈಡೇರಿಸಿತು. ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿ ಧಾರವಾಡದ ಕಲೆಕ್ಟರ್ ಥ್ಯಾಕರೆಯನ್ನು ಕೊಂದಿದ್ದ ವೀರರಾಣಿಯ ಹೆಸರು ಚಾಲ್ತಿಗೆ ಬಂದಿದ್ದು ಆ ವರ್ಷದ ಸ್ವಾತಂತ್ರೃ ದಿನದಂದು. ಬೆಳಗ್ಗೆ 6.30ಕ್ಕೆ ಬೆಂಗಳೂರು ತಲುಪುವುದರಿಂದ ರಾಜಧಾನಿಗೆ ತೆರಳುವವರಿಗೆ ಈ ರೈಲು ಅತ್ಯಂತ ಅನುಕೂಲಕರವಾಗಿದೆ. ಹೀಗಾಗಿ ಅತ್ಯಂತ ಜನಪ್ರಿಯವಾಗಿದೆ.
ವಿಮಾನ ಸೌಲಭ್ಯವಿದ್ದರೂ ರೈಲಿಗೆ ಕಡಿಮೆಯಾಗದ ಜನಪ್ರಿಯತೆ: ಹಿಂದೆಲ್ಲ ಉ.ಕರ್ನಾಟಕದ ಹೆಚ್ಚಿನ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಯಾಣಿಸುತ್ತಿದ್ದುದೇ ರಾಣಿ ಚನ್ನಮ್ಮ ರೈಲಿನಲ್ಲಿ. ಇತ್ತೀಚಿನ ವರ್ಷಗಳಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳು ಅಭಿವೃದ್ಧಿಯಾಗಿ, ಸೇವೆ ಹೆಚ್ಚಳವಾಗಿರುವುದರಿಂದ ವಿಐಪಿ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆಯಷ್ಟೆ. ಅದೇನೆ ಇದ್ದರೂ, ರಾಣಿ ಚನ್ನಮ್ಮ ರೈಲು ವಿವಿಧ ಕಾರಣಗಳಿಂದಾಗಿ ಉತ್ತರ ಕರ್ನಾಟಕದ ಜನಜೀವನದ ಒಂದು ಭಾಗವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.