More

    ಫೆ.14ರಿಂದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

    ಮೈಸೂರು: ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ‘ಗಾಂಧಿ ಪಥ’ ಆಶಯದೊಂದಿಗೆ ಈ ಬಾರಿಯ ರಂಗಹಬ್ಬ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020’ ಫೆ.14ರಿಂದ 19ರವರೆಗೆ ರಂಗಾಯಣದ ಅಂಗಳದಲ್ಲಿ ನಡೆಯಲಿದೆ. ಒಂದು ದಿನ ಮುಂಚಿತವಾಗಿಯೇ ಫೆ.13ರಂದು ಜನಪದ ಉತ್ಸವ ಪ್ರಾರಂಭಗೊಳ್ಳಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
    ರಂಗಾಯಣದ ಅಂಗಳದಲ್ಲಿ ಬುಧವಾರ ಆಯೋಜಿಸಿದ್ದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020’ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    14ರಂದು ಸಂಜೆ 5.30ಕ್ಕೆ ವನರಂಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ಸವಕ್ಕೆ ಹಿರಿಯ ಕಲಾವಿದ ಅನಂತನಾಗ್ ಚಾಲನೆ ನೀಡಲಿದ್ದಾರೆ. ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ, ಶಾಸಕ ಎಲ್.ನಾಗೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್.ಜನ್ನು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
    ಆರು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಕನ್ನಡದ 10 ಹಾಗೂ ಭಾರತದ ವಿವಿಧ ಭಾಷೆಯ 11, ಯಕ್ಷಗಾನ ಪ್ರಸಂಗಗಳು 2, ಬಯಲಾಟ ಹಾಗೂ ತೊಗಲುಗೊಂಬೆಯಾಟ ಸೇರಿದಂತೆ ಒಟ್ಟು 25 ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಕರಕುಶಲ ವಸ್ತುಗಳು, ಪುಸ್ತಕ ಪ್ರದರ್ಶನ, ಜನಪದೋತ್ಸವ, ದೇಸಿ ಆಹಾರ ಮಳಿಗೆ ಹೀಗೆ ಹತ್ತು ಹಲವು ದೇಸಿ, ಕಲೆ-ಸಂಸ್ಕೃತಿ, ಸಂಗತಿಗಳು ಅನಾವರಣಗೊಳ್ಳಲಿವೆ ಎಂದರು.
    ಹಿರಿಯ ರಂಗಕರ್ಮಿ ಎಚ್.ಕೆ.ರಾಮನಾಥ್ ಪೋಸ್ಟರ್ ಬಿಡುಗಡೆಗೊಳಿಸಿದರು. ರಂಗಾಯಣ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಬಹುರೂಪಿ ಸಂಚಾಲಕ ಹುಲಗಪ್ಪ ಕಟ್ಟಿಮನಿ, ಕಲಾವಿದರಾದ ರಾಮನಾಥ್, ಪ್ರಶಾಂತ್ ಹಿರೇಮಠ್ ಇತರರಿದ್ದರು.

    ಮುಖ್ಯಮಂತ್ರಿ ನಾಟಕ ಪ್ರದರ್ಶನ!
    ವಿಶೇಷವಾಗಿ ಕನ್ನಡ ಆಧುನಿಕ ರಂಗಭೂಮಿಯಲ್ಲಿ ‘ಮುಖ್ಯಮಂತ್ರಿ’ ನಾಟಕ ಐತಿಹಾಸಿಕ ದಾಖಲೆ ಮಾಡಿದ್ದು, ಈ ಬಾರಿ ಬಹುರೂಪಿ ಉತ್ಸವದಲ್ಲಿ ಸದರಿ ನಾಟಕದ ಪ್ರದರ್ಶನ ನಡೆಯಲಿದೆ. ಇದುವರೆಗೆ 700ಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶ-ವಿದೇಶಗಳಲ್ಲಿ ಕಂಡಿರುವ ಈ ನಾಟಕ ರಂಗಭೂಮಿಯ ಇತಿಹಾಸದಲ್ಲಿ ತೀವ್ರ ಗಮನ ಸೆಳೆದ ನಾಟಕವಾಗಿದೆ. ಕನ್ನಡ ರಂಗಭೂಮಿಯ ಖ್ಯಾತ ಹಿರಿಯ ನಟ ಚಂದ್ರಶೇಖರ್(ಚಂದ್ರು) ನಟಿಸಿದ್ದಾರೆ. ಈ ನಾಟಕದ ಮೂಲಕ ಮುಖ್ಯಮಂತ್ರಿ ಚಂದ್ರು ಎಂದೇ ಖ್ಯಾತರಾಗಿರುವುದು ವಿಶೇಷ.
    ಇನ್ನು ವೃತ್ತಿ ನಾಟಕ ಕಂಪನಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಟನ ಕಲಾವಿದರು ‘ಸುಭದ್ರ ಕಲ್ಯಾಣ’ ನಾಟಕ ಪ್ರದರ್ಶಿಸಲಿದ್ದು, ಇದು ಈ ಬಾರಿಯ ವಿಶೇಷವಾಗಿದೆ ಎಂದರು.

    ಕಿರುರಂಗ ಮಂದಿರ: ನಿತ್ಯ ಸಂಜೆ 6ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. 14ರಂದು ಚಿದಂಬರ್‌ರಾವ್ ಜಂಬೆ ನಿರ್ದೇಶನದ ‘ಬೆಂದಕಾಳು ಆನ್ ಟೋಸ್ಟ್’(ಕನ್ನಡ), 15ರಂದು ಸೂರ್ಯಮೋಹನ ಕುಲಶ್ರೇಷ್ಠ ನಿರ್ದೇಶನದ ‘ಭಗವದಜ್ಜುಕೀಯಮ್’(ಹಿಂದಿ), 16 ರಂದು ಕಲ್ಲೋಲ್ ಭಟ್ಟಾಚಾರ್ಯ ನಿರ್ದೇಶನದ ‘ಈಡಿಪಸ್’(ಬೆಂಗಾಲಿ), 17 ರಂದು ರಾಜೇಶ್ ಸಿಂಗ್ ನಿರ್ದೇಶನದ ‘ದ ಬ್ಲಾಕ್‌ಬೋರ್ಡ್ ಲ್ಯಾಂಡ್’(ಹಿಂದಿ/ಇಂಗ್ಲಿಷ್), 18ರಂದು ಅಮಿತ್ ಜೆ.ರೆಡ್ಡಿ ನಿರ್ದೇಶನದ ‘ಮಿಸ್ ಜೂಲಿ’(ಕನ್ನಡ), 19ರಂದು ಬಹರುಲ್ ಇಸ್ಲಾಮ್ ನಿರ್ದೇಶನದ ‘ಸ್ವಭಾಬ್‌ಜತ’(ಅಸ್ಸಾಮಿ) ನಾಟಕ ಪ್ರದರ್ಶನವಾಗಲಿವೆ.

    ಭೂಮಿಗೀತ ವೇದಿಕೆ: ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. 14ರಂದು ನಿಂಗ್ಥೊಜಾ ದೀಪಕ್ ನಿರ್ದೇಶನದ ‘ಸದಾನ್‌ಬಗಿ ಇಶೈ’(ಮಣಿಪುರಿ), 15ರಂದು ರಾಮು ರಾಮನಾಥನ್ ನಿರ್ದೇಶನದ ‘ಮಹದೇವಭಾಯಿ’(ಇಂಗ್ಲಿಷ್/ಹಿಂದಿ), 16 ರಂದು ಸಾವಿತ್ರಿ ಮೇಧಾತುಲ್ ನಿರ್ದೇಶನದ ‘ಸಂಗೀತ್‌ಬಾರೀ’(ಮರಾಠಿ), 17 ರಂದು ಸಿ.ಬಸವಲಿಂಗಯ್ಯ ನಿರ್ದೇಶನದ ‘ಗಾಂಧಿ ವರ್ಸಸ್ ಗಾಂಧಿ’(ಕನ್ನಡ), 18 ರಂದು ರಾಜೂ ಬರೋಟ್ ನಿರ್ದೇಶನದ ‘ಪರಿತ್ರಾಣ್’(ಗುಜರಾತಿ), 19ರಂದು ಶರಣ್ಯಾ ರಾಮ್‌ಪ್ರಕಾಶ್ ನಿರ್ದೇಶನದ ‘ಅಕ್ಷಯಾಬಂರ’(ಕನ್ನಡ) ನಾಟಕ ಪ್ರದರ್ಶನವಾಗಲಿವೆ.

    ವನರಂಗ ವೇದಿಕೆ: ನಿತ್ಯ ಸಂಜೆ 7ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. 14ರಂದು ವೀರರಾಣಿ ಕಿತ್ತೂರು ಚೆನ್ನಮ್ಮ(ದೊಡ್ಡಾಟ), 15ರಂದು ನೇಹಾಸಿಂಗ್ ನಿರ್ದೇಶನದ ‘ಝಲ್ಕರಿ’(ಹಿಂದಿ), 16ರಂದು ಮೈಮ್ ರಮೇಶ್ ನಿರ್ದೇಶನದ ‘ಮಂಟೇಸ್ವಾಮಿ ಕಥಾಪ್ರಸಂಗ’(ಕನ್ನಡ), 17ರಂದು ಕೃಷ್ಣಮೂರ್ತಿ ತುಂಗ ನಿರ್ದೇಶನದ ‘ದೇವಯಾನಿ’(ಕನ್ನಡ) ಯಕ್ಷಗಾನ ಪ್ರದರ್ಶನ, 18ರಂದು ಅರುಣ್‌ಲಾಲ್ ನಿರ್ದೇಶನದ ‘ಕೆಂಡೋನಿಯನ್ಸ್’(ಕನ್ನಡ), 19ರಂದು ಗಣೇಶ್ ಮಂದರ್ತಿ ನಿರ್ದೇಶನದ ‘ಕಾಮ್ಯಕಲಾ ಪ್ರತಿಮಾ’(ಕನ್ನಡ) ನಾಟಕ ಪ್ರದರ್ಶನವಾಗಲಿವೆ.

    ಕಲಾಮಂದಿರ: ನಿತ್ಯ ಸಂಜೆ 7.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. 13ರಂದು ಅಜಿತ್ ಅಮೀನ್ ಕೆರೆಕಾಡು ನಿರ್ದೇಶನದ ‘ವೀರ ಅಭಿಮನ್ಯು’(ಕನ್ನಡ), 15ರಂದು ಡಾ.ಬಿ.ವಿ.ರಾಜಾರಾಂ ನಿರ್ದೇಶನದ ‘ಮುಖ್ಯಮಂತ್ರಿ’(ಕನ್ನಡ), 16ರಂದು ಬನ್ಸಿಕೌಲ್ ನಿರ್ದೇಶನದ ‘ಜಿಂದಗಿ ಔರ್ ಜೋಂಕ್’ (ಹಿಂದಿ), 17ರಂದು ಮಂಡ್ಯ ರಮೇಶ್ ನಿರ್ದೇಶನದ ‘ಸುಭದ್ರ ಕಲ್ಯಾಣ’(ಕನ್ನಡ), 18ರಂದು ಚಂದ್ರದಾಸನ್ ನಿರ್ದೇಶನದ ‘ಶಾಕುಂತಲಂ’ (ಮಲಯಾಳಂ), 19ರಂದು ಎಸ್.ಆರ್.ರಮೇಶ್ ನಿರ್ದೇಶನದ ‘ಮಹಾತ್ಮ’(ಕನ್ನಡ) ನಾಟಕ ಪ್ರದರ್ಶನವಾಗಲಿವೆ.

    ಜಾನಪದ ಕಾರ್ಯಕ್ರಮ: ಪ್ರತಿದಿನ ಸಂಜೆ 5.30ಕ್ಕೆ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಕಾರ್ಯಕ್ರಮ ಆರಂಭಗೊಳ್ಳಿವೆ. ಫೆ.13ರಂದು ಸಂಜೆ 5 ಗಂಟೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇಬ್ರಾಹಿಂ ಸುತಾರ್ ಭಾಗವಹಿಸಲಿದ್ದಾರೆ.
    13ರಂದು ಗೊರವರ ನೃತ್ಯ, 14ರಂದು ದಕ್ಷಿಣ ಮಧ್ಯ ವಲಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗೊಂಬೆಯಾಟ, 15ರಂದು ಬ್ಯಾರಿ ಜಾನಪದ, ಗೊಂದಲಿಗರ ಮೇಳ, 16ರಂದು ಸಾಂಸ್ಕೃತಿಕ ಕಾರ್ಯಕ್ರಮ, ಉಮ್ಮತ್ತಾಟ್ ಮತ್ತು ಬೊಳಕಾಟ್, ತಮಟೆ, 17ರಂದು ಅರೆಭಾಷೆ ಜಾನಪದ, ಸಿದ್ದಿ ಕುಣಿತ, 18ರಂದು ತುಳು ಜಾನಪದ-ಕಿಂಗೀಲು ನೃತ್ಯ, ರಂಗಗೀತೆ, 19ರಂದು ಮಹಿಳಾ ಡೊಳ್ಳು ಕುಣಿತ, ಮಲ್ಲಕಂಬ ಪ್ರದರ್ಶನ ನಡೆಯಲಿದೆ.
    ಕಿಂದರಿಜೋಗಿ ವೇದಿಕೆಯಲ್ಲದೆ ಚಿಕ್ಕಗಡಿಯಾರ, ಅಗ್ರಹಾರ ವೃತ್ತ, ಕೆ.ಆರ್.ವೃತ್ತ, ಮಾತೃಮಂಡಳಿ ವೃತ್ತಗಳಲ್ಲೂ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.

    ಫೆ.4ರಿಂದ ಟಿಕೆಟ್ ಮಾರಾಟ: ಎಲ್ಲ ನಾಟಕಗಳ ಟಿಕೆಟ್‌ಗಳನ್ನು ಫೆ.4ರಿಂದ ಮಾರಾಟ ಮಾಡಲಾಗುತ್ತದೆ. ಆಸಕ್ತರು ವೆಬ್‌ಸೈಟ್ ಅಥವಾ ರಂಗಾಯಣದ ಆವರಣದಲ್ಲಿ ನೇರವಾಗಿ ಖರೀದಿಸಬಹುದಾಗಿದೆ. ವೆಬ್‌ಸೈಟ್‌ನಲ್ಲಿ ನಾಟಕಗಳ ಮೂರನೇ ಒಂದು ಭಾಗ , ರಂಗಾಯಣದ ಆವರಣದಲ್ಲಿಯೇ ನೇರವಾಗಿ ಮೂರನೇ ಒಂದು ಭಾಗ ಹಾಗೂ ನಾಟಕದ ಪ್ರದರ್ಶನದ ದಿನ ಮೂರನೇ ಒಂದು ಭಾಗ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರತಿ ನಾಟಕಕ್ಕೆ ತಲಾ 100 ರೂ.ಬೆಲೆ ನಿಗದಿ ಮಾಡಲಾಗಿದೆ.

    ಚಲನಚಿತ್ರೋತ್ಸವ: ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ‘ಗಾಂಧಿಪಥ’ ವಿಷಯಕ್ಕೆ ಸಂಬಂಧಿಸಿದ ಚಲನಚಿತ್ರಗಳ ಪ್ರದರ್ಶನ ಶ್ರೀರಂಗ ವೇದಿಕೆಯಲ್ಲಿ ನಡೆಯಲಿದೆ.
    ಫೆ.14ರಂದು ಬೆಳಗ್ಗೆ 10 ಗಂಟೆಗೆ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಹುರೂಪಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮ.12ಕ್ಕೆ ‘ಕೂರ್ಮಾವತಾರ’, 2 ಕ್ಕೆ ‘ದಿ ಮೇಕಿಂಗ್ ಆಫ್ ಮಹಾತ್ಮ’ ಚಿತ್ರ ಪ್ರದರ್ಶನಗೊಳ್ಳಲಿವೆ. ನಿತ್ಯ ಕ್ರಮವಾಗಿ ಬೆ.10.30ರಿಂದ 12, ಮ.12ರಿಂದ 1.30 ಹಾಗೂ 2ರಿಂದ 5ಗಂಟೆ ನಡುವೆ ಚಿತ್ರ ಪ್ರದರ್ಶನ ನಡೆಯಲಿದೆ.

    ವಿಚಾರ ಸಂಕಿರಣ: ಫೆ.16 ಮತ್ತು 17ರಂದು ‘ಗಾಂಧಿ ಪಥ’-ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಬುದ್ಧಿಜೀವಿಗಳು, ಚಿಂತಕರು ಮತ್ತು ರಂಗಕರ್ಮಿಗಳು ಭಾಗವಹಿಸಲಿದ್ದಾರೆ. ಫೆ.16ರಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣದ ಉದ್ಘಾಟನೆಯನ್ನು ಖ್ಯಾತ ಕವಿ ಸಿದ್ಧಲಿಂಗಯ್ಯ ನೆರವೇರಿಸಲಿದ್ದಾರೆ. ವಿಚಾರ ವಿನಿಮಯ, ಸಂವಾದಕ್ಕೆ ಇದು ಉತ್ತಮ ವೇದಿಕೆಯಾಗಲಿದೆ.

    ಬಹುರೂಪಿಯ ಇತರೆ ವಿಶೇಷಗಳು: *ಈ ಬಾರಿ ವೃತ್ತಿ ಕಂಪನಿಯ ಹಿರಿಯ ರಂಗ ಸಂಗೀತ ನಿರ್ದೇಶಕ ಪರಮಶಿವಯ್ಯ ಮತ್ತು ಮುಖ್ಯಮಂತ್ರಿ ಚಂದ್ರುಗೆ ‘ಗಾಂಧಿಪಥ-ರಂಗಗೌರವ’ ನೀಡಿ ಗೌರವಿಸಲಾಗುತ್ತದೆ.
    *ಗಾಂಧೀಜಿ ಹುಟ್ಟಿನಿಂದ ಅವರ ಸಾವಿನ ಯಾತ್ರೆವರೆಗಿನ ಸಂಗತಿಗಳನ್ನು ಹೇಳುವ ಚಿತ್ರ ಮತ್ತು ಮಾಹಿತಿಯ ಛಾಯಾ ಪ್ರದರ್ಶನವನ್ನು ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ಆಯೋಜಿಸಲಾಗುತ್ತದೆ.
    *ಫೆ.18, 19ರಂದು ಸಂಜೆ ರಂಗಾಯಣದ ಆವರಣದಲ್ಲಿ ಕವಿಕಟ್ಟೆಯಲ್ಲಿ ‘ಕವಿ ಕಂಡ ಗಾಂಧಿ’ ಎಂಬ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಕವಿಗಳು ಗಾಂಧೀಜಿ ಕುರಿತು ರಚಿಸಿರುವ ಕವನಗಳನ್ನು ರಂಗಾಯಣದ ಹಿರಿಯ ಕಲಾವಿದರು ವಾಚನ ಮಾಡಲಿದ್ದಾರೆ.
    *ಬಹುರೂಪಿ ನಾಟಕೋತ್ಸವಕ್ಕೆ ಈ ಬಾರಿ ಅರ್ಜಿ ಕರೆಯದೆ ಕನ್ನಡ ನಾಡಿನ ದೇಸಿಯ ಆಹಾರ ಮಳಿಗೆಗೆ ಅವಕಾಶ ನೀಡಲಾಗಿದೆ. 10 ದೇಸಿ ಆಹಾರ ಮಳಿಗೆಗಳ ಕುಟೀರದಲ್ಲಿ ಮಲೆನಾಡು, ಕರಾವಳಿ, ಉತ್ತರ ಕನ್ನಡ, ಕೊಡವ, ಕಲ್ಯಾಣ ಕರ್ನಾಟಕದ ವಿಶೇಷ ದೇಸಿ ಆಹಾರ ಮಳಿಗೆ ನಿರ್ಮಾಣವಾಗಲಿವೆ.
    *ಕರಕುಶಲ ಮಳಿಗೆಗಳು, ವಿಶೇಷವಾಗಿ ಬೆಂಗಳೂರು ಗಾಂಧಿ ಭವನದ ಗಾಂಧಿ ಪ್ರತಿಮೆ ಮತ್ತು ಸರಕುಗಳು, ಪುರಾತನ ನಾಣ್ಯ, ನೋಟು ಸಂಗ್ರಹಗಳ ಪ್ರದರ್ಶನ, ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಪುಸ್ತಕ ಮಳಿಗೆಗಳು, ಕೇ
    ಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕದ ಮಳಿಗೆಗಳೂ ಈ ಬಾರಿ ಇರಲಿವೆ.
    —————–
    ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020’ ಆಯೋಜನೆಗೆ 1 ಕೋಟಿ ರೂ.ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಇಲ್ಲಿವರೆಗೂ ಒಂದು ರೂಪಾಯಿಯೂ ಬಂದಿಲ್ಲ. ಹಣ ಇಲ್ಲದೆ ಇದ್ದರೂ ಭಂಡ ಧೈರ್ಯದಿಂದ ಉತ್ಸವ ಆಯೋಜಿಸುತ್ತಿದ್ದೇವೆ. ಸದ್ಯ ಸರ್ಕಾರ ನೀಡುತ್ತಿರುವ ಅನುದಾನ ಕಲಾವಿದರ ಸಂಬಳ ನೀಡಲು ಮಾತ್ರ ಸರಿ ಹೊಂದುತ್ತಿದೆಯೇ ಹೊರತು ಇತರ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ 2 ಕೋಟಿ ರೂ.ಅನುದಾನ ಬಾಕಿ ಉಳಿಸಿಕೊಂಡಿದೆ.
    ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts