More

    ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಧನ ನೀಡಲಿ: ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಆಗ್ರಹ

    ಮಂಡ್ಯ: ರಾಜ್ಯ ಸರ್ಕಾರ ವೃತ್ತಿ ರಂಗಭೂಮಿ ಕಲಾವಿದರಿಗೆ ತಲಾ 10 ಸಾವಿರ ರೂನಂತೆ ಪ್ರೋತ್ಸಾಹಧನ ನೀಡಲಿ ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಒತ್ತಾಯಿಸಿದರು.
    ನಗರದ ಗಾಂಧಿಭವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಮತ್ತು ಕೃಷಿಕ ಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ರಂಗಗೀತೆ ಸ್ಪರ್ಧೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಕಲಾವಿದ ಬದುಕು ದುಸ್ಥರದಲ್ಲಿದೆ. ಆಧುನಿಕ ನಾಗಲೋಟದಲ್ಲಿ ಟಿವಿ, ಸಿನಿಮಾಗಳ ಹಾವಳಿಯಲ್ಲಿ ರಂಗಭೂಮಿ ಕಲೆಗಳು ವಿನಾಶದತ್ತ ಸಾಗಿದೆ. ಕಲಾವಿದರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ರಂಗಭೂಮಿಯನ್ನು ಉಳಿಸಿ ಬೆಳೆಸಲು ಸರ್ಕಾರ ಮುಂದಾಗಬೇಕಿದೆ. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಕಲೆಗಳ ಕಲಾವಿದರು, ಸಾಕಷ್ಟು ರಂಗಭೂಮಿ ಕಲಾವಿದರು, ನಿರ್ದೇಶಕರು ಇದ್ದಾರೆ. ಆದ್ದರಿಂದ ಸರ್ಕಾರದಿಂದ ವಿಶ್ವರಂಗಭೂಮಿ ದಿನಾಚರಣೆ ಆಚರಿಸಿ, ಸ್ಥಳೀಯ ವೃತ್ತಿ ಕಲಾವಿದರನ್ನು ಗೌರವಿಸಿ, ಆರ್ಥಿಕ ನೆರವು ನೀಡುವುದು ಅತ್ಯಾವಶ್ಯಕವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಮನವಿ ಮಾಡಿದರು.
    ರಂಗಭೂಮಿ ಕಲೆಯಿಂದ ಬೆಳೆದು ಸಿನಿಮಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೇ ಹೆಚ್ಚು. ಅಂತಹ ಪ್ರಸಿದ್ದ ನಟರು ರಂಗಭೂಮಿಯನ್ನು ಬೆಳೆಸುವುದು, ಪ್ರೋತ್ಸಾಹ ನೀಡುವುದು ಕಡಿಮೆಯಾಗಿದೆ, ಮುಂದಿನ ದಿನಗಳಲ್ಲಿ ಬಂದ ದಾರಿಯನ್ನು ಮರೆಯದೆ ಅಭಿವೃದ್ದಿಗೆ ಕೊಡಗೆ ನೀಡಲಿ. ಕಳೆದ 11 ವರ್ಷದಿಂದ ರಾಜ್ಯಮಟ್ಟದ ರಂಗಗೀತೆ ಸ್ಪರ್ಧೆ ಮಾಡುತ್ತಾ ಪ್ರೋತ್ಸಾಹ ನೀಡಲಾಗುತ್ತಿದೆ. ರಂಗಭೂಮಿಯು ಮನುಷ್ಯನ್ನು ಮನುಷ್ಯನ್ನಾಗಿ ತೊರಿಸುವ ವೇದಿಕೆ. ಜತೆಗೆ ಜೀವನದ ಮೌಲ್ಯಗಳನ್ನು ಹೆಚ್ಚಿಸುವ ಮಾಧ್ಯಮವಾಗಿದ್ದು, ಮಾನವೀಯತೆಯನ್ನು ಬೆಳೆಸುವ ಸಂಕೇತವಾಗಿದೆ ಎಂದು ನುಡಿದರು.
    1961ರಲ್ಲಿ ವಿಶ್ವ ರಂಗಭೂಮಿ ದಿನವನ್ನು ವಿಶ್ವಸಂಸ್ಥೆಯು ಘೋಷಿಸಿತ್ತು. ಅಂತೆಯೇ ದಿನಾಚರಣೆ ಮಾಡಲು ತನ್ನ ಸದಸ್ಯ ದೇಶಗಳಿಗೆ ಸಂದೇಶ ನೀಡಿತು. ಮಾನವ ಇತಿಹಾಸದಲ್ಲಿ ರಂಗಭೂಮಿ ಪ್ರಮುಖ ಪಾತ್ರವನ್ನು ವಹಿಸಿದೆ. ಗ್ರೀಸ್‌ನಲ್ಲಿ ನಾಟಕ ಪ್ರದರ್ಶನಗಳು ಸಮಾಜದ ಅವಿಭಾಜ್ಯ ಅಂಗವಾಗಿತ್ತು. ಇದು ಭಾಷೆ, ಸಂಸ್ಕೃತಿ ಮತ್ತು ಗಡಿಗಳನ್ನು ಮೀರಿದ ಕಲಾ ಪ್ರಕಾರ. ಜನರಿಗೆ ಶಿಕ್ಷಣ, ಮನರಂಜನೆ ಮತ್ತು ಸ್ಫೂರ್ತಿ ನೀಡುವ ಶಕ್ತಿಯನ್ನು ಹೊಂದಿದೆ ಎಂದು ಅಭಿಪ್ರಾಯಿಸಿದರು.
    ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್, ರಂಗಭೂಮಿ ನಿರ್ದೇಶಕ ಕಾರಸವಾಡಿ ಸುರೇಶ್, ಕೆಂಚೇಗೌಡ, ವೀರಪ್ಪ ಕೀಲಾರ, ಸಾತನೂರು ವೆಂಕಟೇಶ್ ಇತರರಿದ್ದರು.
    ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಬಚ್ಚಿ ಲಿಂಗೇಗೌಡ, ಕೆ.ಆರ್.ಲಿಂಗಪ್ಪ, ಮಹೇಶ್, ನಿಂಗಣ್ಣ, ಎಚ್.ಎನ್.ಅಂಕರಾಜು, ವೆಂಕಟೇಶಚಾರಿ, ಎ.ಎಸ್.ಜಯಲಕ್ಷ್ಮೀ, ಎನ್.ನಿರ್ಮಲಾ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts