More

    ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ…?

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
    ವಿಧಾನಸಭೆ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಇದೀಗ ಸೋತ ಅಭ್ಯರ್ಥಿಗಳು ತಮ್ಮ ಸೋಲಿನ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುತ್ತಿದ್ದಾರೆ. ಅತಿಯಾದ ಆತ್ಮವಿಶ್ವಾಸವೇ ಬಿಜೆಪಿ ಹಾಗೂ ಇತರ ಅಭ್ಯರ್ಥಿಗಳ ಸೋಲಿಗೆ ಕಾರಣ ಎನ್ನುವುದು ಕ್ಷೇತ್ರದ ಜನಸಾಮಾನ್ಯರ ಅಭಿಪ್ರಾಯವಾಗಿದೆ.
    ಕಾಂಗ್ರೆಸ್‌ನಿಂದ ಪ್ರಕಾಶ ಕೋಳಿವಾಡ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಹಾಗೂ ಅವರ ಪರವಾಗಿ ಡಿ.ಕೆ. ಶಿವಕುಮಾರ ಹೊರತು ಪಡಿಸಿ ಯಾರೋಬ್ಬರು ರಾಷ್ಟ್ರ, ರಾಜ್ಯ ನಾಯಕರು ಪ್ರಚಾರಕ್ಕೆ ಬರದಿರುವ ಕಾರಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತೆ ಬಿಟ್ಟಿತ್ತು ಎಂದು ಬಿಜೆಪಿ ಹಾಗೂ ಆರ್. ಶಂಕರ ಮಾತನಾಡಿಕೊಳ್ಳಲು ಶುರು ಮಾಡಿದ್ದರು. ಆದರೆ, ಪ್ರಕಾಶ ಕೋಳಿವಾಡ ತಾವು ಮಾಡಿದ ಸಾಧನೆ ಕುರಿತು ಮತದಾರರಿಗೆ ಮನವೊರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಇದೇ ಅವರ 9,800 ಮತಗಳ ಅಂತರದಿಂದ ಗೆಲುವಿಗೆ ಅನುಕೂಲ ಮಾಡಿಕೊಟ್ಟಿತು.
    ಬಿಜೆಪಿ ಸೋತರೂ ಮತಗಳಿಗಾಗಿಲ್ಲ ದಕ್ಕೆ…
    ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಸೋತರೂ 62,030 ಮತಗಳನ್ನು ಪಡೆದುಕೊಂಡಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ಮತಗಳಿಗೆ ದಕ್ಕೆಯಾಗಿಲ್ಲ. ಬಿಜೆಪಿ ಅಭ್ಯರ್ಥಿ ಪರ ಅಮಿತ್ ಷಾ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನಟ ಕಿಚ್ಚ ಸುದೀಪ ಕೂಡ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದ್ದರು. ಹೀಗಾಗಿ ಬಿಜೆಪಿ ಮತಗಳು ವಿಭಜನೆಯಾಗಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ, ಅರುಣಕುಮಾರ ಪೂಜಾರ ಗೆಲುವು ನನ್ನದೆ ಎನ್ನುವ ಅತಿಯಾದ ಆತ್ಮವಿಶ್ವಾಸವಿಟ್ಟು ಕೇವಲ ರೋಡ್ ಶೋ ಮೂಲಕ ಮತಯಾಚನೆ ಮಾಡಿದರೆ ಹೊರತು ಮನೆ ಮನೆಗೆ ತೆರಳುವುದನ್ನು ಮರೆತು ಬಿಟ್ಟಿದ್ದರು.
    ಬಿಜೆಪಿಗೆ ಶೆಡ್ಡು ಹೊಡೆದು ನವಯುಗ ಆರಂಭಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂತೋಷಕುಮಾರ ಪಾಟೀಲ ಈ ಬಾರಿ ನನ್ನ ಗೆಲುವು ಖಚಿತ ಎಂತಲೇ ಎಲ್ಲರ ಬಳಿ ಹೇಳಿಕೊಂಡು ಓಡಾಡುತ್ತಿದ್ದರು. ಆದರೆ, ಮತದಾರ ಅವರಿಗೆ ನೀಡಿದ್ದು 11,395 ಮತಗಳನ್ನು ಮಾತ್ರ.
    ಸೀಟಿ ಹೊಡೆಯಲೇ ಇಲ್ಲ ಕುಕ್ಕರ್…
    ಆರ್. ಶಂಕರ ಚುನಾವಣೆಗೂ ಮುನ್ನವೇ ಮತದಾರರಿಗೆ ಭರ್ಜರಿಯಾಗಿ ಕುಕ್ಕರ್, ಸೀರೆ, ತಟ್ಟೆ, ಲೋಟವನ್ನು ಉಡುಗೊರೆಯಾಗಿ ಕೊಡುವ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದರು. ಆದರೆ, ಅವರಿಂದ ಉಡುಗೊರೆ ಪಡೆದುಕೊಂಡ ಜನತೆ ಮಾತ್ರ ಮತದಾರರಾಗಿ ಪರಿವರ್ತನೆಯಾಗಿಲ್ಲ. ಅಲ್ಲದೆ ಪ್ರಕಾಶ ಕೋಳಿವಾಡ ಹಾಗೂ ಅರುಣಕುಮಾರ ಪೂಜಾರ ಸೇರಿ ಎಲ್ಲ ಅಭ್ಯರ್ಥಿಗಳು ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಿ ಎಂದು ಪ್ರಚಾರ ಮಾಡಿದ್ದರು. ಹೀಗಾಗಿ 2018ರಲ್ಲಿ ಭಾರಿ ಜಯಗಳಿಸಿದ್ದ ಆರ್. ಶಂಕರ ಈ ಬಾರಿ 37,559 ಮತ ಪಡೆದು ಹೀನಾಯವಾಗಿ ಸೋಲು ಕಾಣಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts