More

    ಅಧಿಕಾರದ ದುರಹಂಕಾರ ಬೇಡ, ರಾಜಕೀಯ ಕಾಲಚಕ್ರ ಬದಲಾಗುತ್ತೆ

    ಶ್ರೀನಿವಾಸಪುರ: ದೇಶದಲ್ಲಿ ರಾಜಕೀಯ ವಾತಾವರಣ ಉತ್ತಮವಾಗಿಲ್ಲ. ಅಧಿಕಾರದ ದುರಹಂಕಾರದಿಂದ ಬಿಜೆಪಿ ಜಾತಿ, ಧರ್ಮ, ಭಾಷೆಯ ಮೇಲೆ ಆಡಳಿತ ನಡೆಸಲು ಹೊರಟಿದೆ. ಆದರೆ, ಇದು ಹೀಗೆ ಇರೋದಿಲ್ಲ ಕಾಲಚಕ್ರ ಬದಲಾಗುತ್ತದೆ ಎಂದು ಮಾಜಿ ಸ್ಪೀಕರ್, ಶಾಸಕ ಕೆ.ಆರ್.ರಮೇಶ್‌ಕುಮಾರ್ ಭವಿಷ್ಯ ನುಡಿದರು.

    ಪಟ್ಟಣದ ಹೈದರಾಲಿ ಮೊಹಲ್ಲಾದಲ್ಲಿ ಡಿಸಿಸಿ ಬ್ಯಾಂಕ್ ನೇತೃತ್ವದಲ್ಲಿ ಕಸಬಾ ರೇಷ್ಮೆ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಬುಧವಾರ 120 ಸ್ತ್ರೀ ಶಕ್ತಿ ಸಂಘಗಳಿಗೆ 5.80 ಕೋಟಿ ರೂ. ಸಾಲ ವಿತರಿಸಿ ಮಾತನಾಡಿದರು.

    ಜನಪ್ರತಿನಿಧಿಗಳು ಜನರ ಆರ್ಶೀವಾದದಿಂದ ಅಧಿಕಾರಕ್ಕೆ ಬಂದಿದ್ದು, ಅವರ ಜೀವನಕ್ಕೆ ಬೆಳಕಾಗಬೇಕೇ ಹೊರತು ಬೆಂಕಿ ಹಚ್ಚುವ ಕೆಲಸ ಮಾಡಬಾರದು. ನಾವು ಬಡವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಅವರ ಕುಟುಂಬಗಳ ಆರೋಗ್ಯ, ಮಕ್ಕಳ ಶಿಕ್ಷಣಕ್ಕೆ ಅಗತ್ಯ ಆರ್ಥಿಕ ನೆರವು ನೀಡುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಜನರ ಕಷ್ಟ ಅರ್ಥ ಮಾಡಿಕೊಳ್ಳದೆ ಮೇರಾ ಭಾರತ್ ಹಿಂದುಸ್ತಾನ್ ಎಂದು ಭಾಷಣ ಮಾಡುವುದು ಬಿಟ್ಟರೆ 6 ವರ್ಷಗಳಿಂದ ಏನೂ ಸಾಧನೆ ಮಾಡಿಲ್ಲ. ಆದರೆ, ಪ್ರಧಾನಿ ಸ್ಥಾನಕ್ಕೆ ಗೌರವವಿದೆ. ಆ ಸ್ಥಾನದ ವ್ಯಕ್ತಿಯನ್ನು ನಾನು ಟೀಕಿಸುವುದಿಲ್ಲ ಎಂದರು.

    ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಸಾಲ ನೀಡುವ ದೃಢ ನಂಬಿಕೆ ನನಗಿದೆ. ಆದರೆ, ಪಡೆದ ಸಾಲ ಮನ್ನಾ ಆಗುವುದಿಲ್ಲ. ಯಾರ ಮಾತು ಕೇಳದೆ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಬೇಕು ಎಂದರು.
    ಸಾಲ ಮರುಪಾವತಿ ಮಾಡುವ ಮೂಲಕ ಮಹಿಳೆಯರು ಬ್ಯಾಂಕ್ ಉಳಿಸಿದ್ದಾರೆ. ಆದರೆ, ಇಂತಹವರಿಗೆ ಸಾಲ ನೀಡಲು ಮೇಲಿರುವ ಅಧಿಕಾರಿಗಳ ಹೃದಯ ಸತ್ತು ಹೋಗಿದೆ. ಬ್ಯಾಂಕಿಗೆ ಅಡಚಣೆ ಮಾಡುವ ಮೂಲಕ ವ್ಯವಸ್ಥೆಯ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಇದನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಇಲ್ಲಿನ ಶಾಸಕರು ಬ್ಯಾಂಕಿಗೆ ಆಧಾರಸ್ತಂಭದಂತೆ ನಿಂತಿರುವುದರಿಂದ ಎಲ್ಲರಿಗೂ ಸಾಲ ನೀಡಲು ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರೂ ಸಾಲಕ್ಕಾಗಿ ಡಿಸಿಸಿ ಬ್ಯಾಂಕಿಗೆ ಬರುತ್ತಾರೆ. ಆದರೆ, ಠೇವಣಿ ಇಡಲು ಮಾತ್ರ ಯಾರೂ ಮುಂದಾಗದಿರುವುದು ಬೇಸರ ತರಿಸುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಸಾಧ್ಯವಾದಷ್ಟು ವಹಿವಾಟನ್ನು ಬ್ಯಾಂಕಿನಲ್ಲಿ ಮಾಡಿದರೆ ಇನ್ನಷ್ಟು ಚೇತರಿಕೆಯಾಗುತ್ತದೆ ಎಂದರು.

    ಇತ್ತೀಚೆಗೆ ಕೋಲಾರ ಹಾಲು ಒಕ್ಕೂಟಕ್ಕೆ ಹಾಲಿನ ಸರಬರಾಜು ಕುಸಿದಿದೆ. ಇದನ್ನು ಹೆಚ್ಚಿಸಲು ಮಹಿಳೆಯರು ಪಡೆದ ಸಾಲದಲ್ಲಿ ರಾಸುಗಳನ್ನು ಖರೀದಿಸಿ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು. ಬ್ಯಾಂಕ್‌ನಿಂದ ಗೃಹೋಪಯೋಗಿ ವಸ್ತುಗಳನ್ನು ಶೂನ್ಯಬಡ್ಡಿ ದರದಲ್ಲಿ ಮನೆ ಬಾಗಿಲಿಗೆ ನೀಡುವ ಜತೆಗೆ ತಾಲೂಕಿನಲ್ಲಿ 100 ಕೋಟಿ ರೂ.ಗಳ ಸಾಲವನ್ನು ಹಂತ-ಹಂತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ನಿರ್ದೇಶಕ ಕೋಡಿಪಲ್ಲಿ ಸುಬ್ಬಾರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ, ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ, ಮುಖಂಡರಾದ ಕೆ.ಕೆ. ಮಂಜುನಾಥರೆಡ್ಡಿ, ಕೊಂಡಾಮರಿ ಅಪ್ಪಿರೆಡ್ಡಿ, ಸೋಸೈಟಿಯ ನಿರ್ದೇಶಕರಾದ ದ್ವಾರಸಂದ್ರದ ನಾರಾಯಣಸ್ವಾಮಿ, ಶಬ್ಬೀರ್ ಅಹಮದ್ ಇದ್ದರು.

    ನನ್ನ ಮೇಲೆ ಆರ್ಶೀವಾದ ಇರಲಿ: ರಾಜಕಾರಣಿಗಳಿಗೆ ಜವಾಬ್ದಾರಿ ಇರಬೇಕು. ಇಲ್ಲಿ ರಾಮನಂತಹವರು ಇದ್ದಾರೆ. ರಾವಣನಂತಹವರು ಇದ್ದಾರೆ. ನಾವು ಕೇವಲ ಚುನಾವಣೆಗಾಗಿ ಬದುಕುತ್ತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ಕೊಟ್ಟಿರುವ ಭಿಕ್ಷೆಯಲ್ಲಿ ಇದ್ದೇವೆ. ನಾನು ಯಾವ ಮೂಲೆಯಲ್ಲಿದ್ದರೂ ನನ್ನ ಕಣ್ಣಿಗೆ ಕ್ಷೇತ್ರದ ಜನ ಕಾಣುತ್ತಾರೆ. ಇದು ನಿಮ್ಮ, ನಮ್ಮ ಋಣ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಆರ್ಶೀವಾದ ಸದಾ ನನ್ನ ಮೇಲಿರಲಿ ಎಂದು ರಮೇಶ್ ಕುಮಾರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts