More

    ಮೇಕೆದಾಟು ಅನುಷ್ಠಾನಕ್ಕೆ ಒಗ್ಗಟ್ಟಾಗಿ: ಅಧ್ಯಕ್ಷ ರಮೇಶ್‌ಗೌಡ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮನವಿ

    ಚನ್ನಪಟ್ಟಣ: ಮೇಕೆದಾಟು ಯೋಜನೆಯ ಅವಶ್ಯಕತೆ ಹೆಚ್ಚಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ರಾಜ್ಯದ ಎಲ್ಲ ರಾಜಕೀಯ ನಾಯಕರು ಹಾಗೂ ಕನ್ನಡ ಚಿತ್ರರಂಗದ ನಾಯಕನಟರು ಹೋರಾಟ ನಡೆಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್‌ಗೌಡ ಮನವಿ ಮಾಡಿದರು.

    ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ವೇದಿಕೆಯಿಂದ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಚಾಮರಾಜ ನಗರದಿಂದ- ಬೆಂಗಳೂರು ಚಲೋ ಜನಾಂದೋಲನ ರ‌್ಯಾಲಿ ಶನಿವಾರ ಚನ್ನಪಟ್ಟಣಕ್ಕೆ ಆಗಮಿಸಿದ ವೇಳೆ, ನಗರದ ಕಾವೇರಿ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಹುಟ್ಟಿ  ರಾಜ್ಯದಲ್ಲೇ ಹರಿದು ತಮಿಳುನಾಡಿನ ಮೂಲಕ ಪ್ರತಿ ವರ್ಷ ಸುಮಾರು 50 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿದೆ. ಈ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಮಾಡಿದರೆ ರಾಜ್ಯದ 6 ಜಿಲ್ಲೆಗಳ ನೀರಿನ ಬವಣೆ ನೀಗಿಸಬಹುದು. ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ನಷ್ಠ ಉಂಟಾಗುವುದಿಲ್ಲ.

    ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ :   ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು. ಮೇಕೆದಾಟು ಯೋಜನೆ ಆಗಲೇಬೇಕು ಎಂದು ನಮ್ಮ ವೇದಿಕೆಯಿಂದ 3 ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳ ಬಳಿ ಪ್ರಸ್ತಾವನೆ ಸಲ್ಲಿಸಿ ಹೋರಾಟಕ್ಕೆ ಅನುಮತಿ ಕೋರಲಾಗಿತ್ತು. ಇದನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಮ್ಮ ಸಂಘಟನೆಯಿಂದ ಪ್ರೇರೇಪಿತವಾಗಿ ತಮ್ಮ ಪಕ್ಷದಿಂದ ಜನವರಿಯಲ್ಲಿ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ.

    ಇದರಲ್ಲಿ ರಾಜಕೀಯ ಪ್ರಸ್ತಾಪ ಅಗತ್ಯ ಇಲ್ಲ. ಅವರ ಹೋರಾಟಕ್ಕೆ ನಮ್ಮ ಸಂಘಟನೆ ಸಹ ಬೆಂಬಲ ನೀಡಲಿದೆ. ಕೆಪಿಸಿಸಿ ಅಧ್ಯಕ್ಷರ ಹೋರಾಟಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ನೈತಿಕ ಬೆಂಬಲ ನೀಡಬೇಕು. ಆ ಮೂಲಕ ನಾವೆಲ್ಲಾ ರಾಜ್ಯದ ಹಿತದೃಷ್ಠಿಯಿಂದ ಒಂದು ಎಂಬುದನ್ನು ಕೇಂದ್ರಸರ್ಕಾರಕ್ಕೆ ಮುಟ್ಟಿಸಬೇಕು ಎಂದು ಮನವಿ ಮಾಡಿದರು. ಮೇಕೆದಾಟು ಯೋಜನೆಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಪೂರ್ವಗ್ರಹ ಪಿಡೀತವಾಗಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ತಕರಾರು ಮಾಡುವುದು ಸರಿಯಲ್ಲ. ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರಿಗೆ ಮನವರಿಕೆ ಮಾಡಲು ಮುಂದಿನ ತಿಂಗಳು ಚೆನ್ನೈಗೆ ತೆರಳಲು ಸಜ್ಜಾಗಿದ್ದೇವೆ. ಅಗತ್ಯ ಬಿದ್ದರೆ ಸಂಘಟನೆಯ ಸಾವಿರಾರು ಕಾರ್ಯಕರ್ತರ ಜತೆ ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೂ ತೆರಳುತ್ತೇವೆ ಎಂದು ರಮೇಶ್‌ಗೌಡ ತಿಳಿಸಿದರು.

    ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್ ಹಾಗೂ ರಾಮನಗರ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಮಾತನಾಡಿದರು. ನಗರದ ಸಾರ್ವಜನಿಕ ಒಕ್ಕಲಿಗರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಚನ್ನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷರಾದ ಬೆಂಕಿ ಶ್ರೀಧರ್, ರಂಜಿತ್‌ಗೌಡ, ಕಾರ್ಯಾಧ್ಯಕ್ಷ ಕೃಷ್ಣೇಗೌಡ, ಗ್ರಾಪಂ ಸದಸ್ಯ ಮತ್ತಿ ರವಿ ಸೇರಿ ವಿವಿಧ ಜಿಲ್ಲೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts