More

    ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಹೇಗೆಂದರೆ…; ಸ್ಫೂರ್ತಿಯಿಂದ ರಮೇಶ್​…

    ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಹೇಗೆಂದರೆ...; ಸ್ಫೂರ್ತಿಯಿಂದ ರಮೇಶ್​...ಒಮ್ಮೊಮ್ಮೆ ನಮ್ಮ ಮೇಲೇ ನಮಗೆ ವಿಶ್ವಾಸ ಕುಸಿಯುತ್ತದೆ. ಇದು ಸಹಜ ಕೂಡ. ಹಾಗೆಂದು ಅಧೀರರಾಗಬಾರದು. ಸಣ್ಣಪುಟ್ಟ ಸೋಲುಗಳಿಗೆ ತಲೆಕೆಡಿಸಿಕೊಳ್ಳದೆ ಸತತ ಯತ್ನದ ಮೂಲಕ ನಮ್ಮ ಕೆಲಸದಲ್ಲಿ ಸಾಧನೆಗೈದರೆ ಆತ್ಮವಿಶ್ವಾಸ ತಾನೇತಾನಾಗಿ ವರ್ಧಿಸುತ್ತದೆ.

    ‘ಸಾರ್, ನೀವು ಹೇಳ್ತಾನೆ ಇರ್ತೀರಿ, ನಿಮ್ಮ ಕೈಲಿ ಆಗುತ್ತೆ ಅಂತ ಅಂದ್ಕೊಂಡರೆ ಎಲ್ಲವೂ ಆಗುತ್ತೆ, ಆಗಲ್ಲ ಅಂತ ನೀವೇ ಅಂದುಕೊಂಡ್ರೆ ದೇವ್ರಾಣೆ ಆಗಲ್ಲ ಅಂತ. ಜತೆಗೆ, ಈ ಜೀವನ ಎನ್ನುವುದು confidence game (ಆತ್ಮವಿಶ್ವಾಸದ ಆಟ) ಅಂತ, ಈ ಆತ್ಮವಿಶ್ವಾಸ ಹೇಗೆ ಬೆಳೆಸಿಕೊಳ್ಳೋದು?’ ಅಂತ ಬಹಳಷ್ಟು ಜನ ಕೇಳುತ್ತಲೇ ಇರುತ್ತಾರೆ. ಹೌದು, ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳೋದು? ಇದು ಎಲ್ಲರಲ್ಲೂ ಇರುವ ಒಂದು ಪ್ರಮುಖ ಪ್ರಶ್ನೆ. ನನಗೆ ಅನಿಸಿದ ಕೆಲವು ವಿಷಯಗಳನ್ನು ಹೇಳಿಬಿಡ್ತೀನಿ. ಮೊದಲನೆಯದಾಗಿ, ನಿಮ್ಮ ಹೆಸರೇನು? ಅಂತ ಯಾರಾದರೂ ಕೇಳಿದರೆ ಥಟ್ ಅಂತ ಹೆಸರು ಹೇಳಿಬಿಡುತ್ತೀರಿ. ಊರು ಯಾವುದು ಅಂದರೆ, ಪ್ರಶ್ನೆ ಕೇಳಿ ಮುಗಿಯೋಕೆ ಮುಂಚೆಯೇ ಉತ್ತರ ಕೊಟ್ಟಿರುತ್ತೀರಿ. ಅದೇ Newton’s Third Law of Motion ಯಾವುದು ಅಂತ ಕೇಳಿದರೆ, ಒಂದು ಕ್ಷಣ ಯೋಚನೆ ಮಾಡುತ್ತೀರಿ. ಅದಕ್ಕೆ ಕಾರಣ, ನಿಮ್ಮ ಹೆಸರು, ಊರು ಎಲ್ಲ ನಿಮಗೆ ಗೊತ್ತು. ಆದರೆ, ಬೇರೆ ವಿಷಯಗಳ ಬಗ್ಗೆ ಓದಿದ್ದರೂ, ಆ ಕ್ಷಣಕ್ಕೆ ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ.

    ಒಂದು ವಿಷಯದ ಬಗ್ಗೆ ಆತ್ಮವಿಶ್ವಾಸ ಬರಬೇಕು ಅಂದರೆ, ಆ ವಿಷಯದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರಬೇಕು. ಹಾಗಾಗಿ ನೀವು ಏನು ಕೆಲಸ ಮಾಡುತ್ತಿದ್ದೀರೋ, ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೀರೋ, ಆ ಕ್ಷೇತ್ರದ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ನೇರವಾಗಿ ನೀವು ಮಾಡುವ ಕೆಲಸಕ್ಕೆ ಸಹಾಯ ಆಗುವ ವಿಷಯಗಳನ್ನು ತಿಳಿದುಕೊಳ್ಳಿ. ಎಷ್ಟೋ ಸಲ, ನಾವು ಬೇಡದಿರುವ ವಿಷಯಗಳ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತೀವಿ ಅಂತ ನನಗೆ ಅನಿಸುತ್ತದೆ. ನಾನೊಬ್ಬ ಮೆಕ್ಯಾನಿಕ್ ಅಂದರೆ, ಚೀನಾದಲ್ಲಿ ಒಂದು ಕಿಲೋಮೀಟರ್ ಟ್ರಾಫಿಕ್ ಜಾಮ್ ಆಯ್ತಂತೆ ಎನ್ನುವ ವೀಡಿಯೋ ನೋಡುವ ಬದಲು, Automatic Transmission ಅಂದರೆ ಏನು ಅಂತ ತಿಳಿದುಕೊಂಡರೆ, ನಾಳೆೆ ನನ್ನ ಕೆಲಸದಲ್ಲಿ ಅದು ಸಹಾಯಕ್ಕೆ ಬರುತ್ತದೆ. ನಾವು ನೋಡುವ ವಿಡಿಯೋದಿಂದ ನಾವು ಮಾಡುವ ಕೆಲಸಕ್ಕೆ ಸಹಾಯವಾದರೆ, ಅದಕ್ಕಿಂತ ಅದ್ಭುತ ಇನ್ನೊಂದಿಲ್ಲ. ಏಕೆಂದರೆ, ನಮಗೆ ದುಡ್ಡು, ಆದಾಯ ಸಿಗುತ್ತಿರುವುದು ಅದೇ ಕೆಲಸದಿಂದ. ಹಾಗಾಗಿ ಆ ಕೆಲಸವನ್ನು ಇನ್ನೂ ಶ್ರೇಷ್ಠವಾಗಿ ಮಾಡೋದಕ್ಕೆ ಸಾಧ್ಯವಾದರೆ, ಅದರಿಂದ ನಮಗೇ ಅನುಕೂಲವಾಗುತ್ತದೆ. ಒಂದು ವಿಷಯದ ಬಗ್ಗೆ ಎಷ್ಟು ತಿಳಿದುಕೊಳ್ಳುತ್ತೀವೋ, ಆ ಕ್ಷೇತ್ರದ ಬಗ್ಗೆ ಆತ್ಮವಿಶ್ವಾಸ ನಿಜಕ್ಕೂ ಜಾಸ್ತಿಯಾಗುತ್ತದೆ.

    ಎರಡನೆಯದಾಗಿ, ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ಬಾಸ್ ಏನು ಹೇಳುತ್ತಾರೋ ಅದನ್ನೇ ನೀವು ಮಾಡಬೇಕು. ನಿಮ್ಮ ತಲೆಯಲ್ಲಿ ಏನೇ ಐಡಿಯಾ ಇದ್ದರೂ, ನಿಮಗೆ ಆ ಕೆಲಸ ಮಾಡುವ ಸ್ವಾತಂತ್ರ್ಯ ಇರುವುದಿಲ್ಲ. ಬೆಳೆಯುತ್ತಾ ಬೆಳೆಯುತ್ತಾ ಒಂದು ಅದ್ಭುತವಾದ ಹಂತಕ್ಕೆ ನೀವು ಹೋಗುತ್ತೀರಿ. ಆಗ ನೀವು ಇಷ್ಟಪಡುವ ವಿಷಯಗಳನ್ನು, ಇಷ್ಟಪಡುವ ಜನರ ಜತೆಗೆ, ಇಷ್ಟಪಡುವ ಜಾಗದಲ್ಲಿ ಮತ್ತು ನಿಮ್ಮ ಇಷ್ಟದಂತೆ ಮಾಡಬಹುದು. ಒಂದಲ್ಲ ಒಂದು ದಿನ ಆ ಸ್ವಾತಂತ್ರ್ಯ ನಿಮಗೆ ಸಿಕ್ಕೇಸಿಗುತ್ತದೆ. ಅದು ಸಿಗಬೇಕು ಎಂದರೆ, ನೀವು ಈಗೇನು ಮಾಡುತ್ತಿದ್ದೀರೋ, ಈಗ ಏನು ಜವಾಬ್ದಾರಿಗಳಿವೆಯೋ ಅದನ್ನು ಪರಿಪೂರ್ಣವಾಗಿ ನಿಭಾಯಿಸಬೇಕು. ಅಂದರೆ, ನಿಮಗೆ ಟೈಪ್ ಮಾಡುವುದಕ್ಕೆ 10 ಪುಟಗಳನ್ನು ಕೊಟ್ಟರೆ, 12 ಪುಟಗಳನ್ನು ಟೈಪ್ ಮಾಡುವ ಸಾಮರ್ಥ್ಯ ತೋರಿಸಬೇಕು. ಆಗ ಬಾಸ್ ಖುಷಿಯಾಗಿ ಇನ್ನೊಂದು ದೊಡ್ಡ ಜವಾಬ್ದಾರಿಯನ್ನು ನಿಮಗೆ ಒಪ್ಪಿಸಬೇಕು. ಒಂದು ವಿಷಯ ಗಮನದಲ್ಲಿರಲಿ. ಜವಾಬ್ದಾರಿಗಳನ್ನು ಸ್ವೀಕರಿಸುವ ಹೆಗಲುಗಳಿಗೆ ಮಾತ್ರ ಸ್ವಾತಂತ್ರ್ಯ ಸಿಗುತ್ತದೆ. ನೀವು ಎಷ್ಟು ಚೆನ್ನಾಗಿ ಜವಾಬ್ದಾರಿಗಳನ್ನು ಸ್ವೀಕರಿಸುತ್ತೀರೋ, ಎಷ್ಟು ಅಚ್ಚುಕಟ್ಟಾಗಿ ನಿಮಗೆ ಕೊಟ್ಟ ಕೆಲಸಗಳನ್ನು ಮಾಡುತ್ತೀರೋ, ಅಷ್ಟು ಚೆನ್ನಾಗಿ ಏಳ್ಗೆಯಾಗುತ್ತದೆ. ಒಂದು ಜವಾಬ್ದಾರಿಯನ್ನು ಸ್ವೀಕರಿಸುವುದರ ಜತೆಗೆ, ಅದನ್ನು ಅಚ್ಚುಕಟ್ಟಾಗಿ ಮಾಡಿದಾಗ, ಅದರಲ್ಲಿ ಸಿಗುವ ಆತ್ಮವಿಶ್ವಾಸ ಬೇರೆ ಯಾವ ವಿಷಯದಲ್ಲೂ ಸಿಗುವುದಿಲ್ಲ. ಆತ್ಮವಿಶ್ವಾಸ ಬೆಳೆಯಬೇಕು ಅಂದರೆ, ನಿಮಗೆ ಕೊಟ್ಟಿರುವ ಜವಾಬ್ದಾರಿಗಳನ್ನು ಚೆನ್ನಾಗಿ ಪೂರೈಸಿ.

    ಮೂರನೆಯದಾಗಿ, ನಾನು ಹೇಳಿಕೊಂಡೇ ಬಂದಿದ್ದೇನೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ Personal Integrity. ಅಂದರೆ ವೈಯಕ್ತಿಕ ನೈತಿಕತೆ. ನಮ್ಮ ಆದರ್ಶಗಳು ಕೆಲವೊಮ್ಮೆ ಕಷ್ಟ ಆದಾಗ, ಯಾವ ವಿಷಯದಲ್ಲಿ ರಾಜಿ ಆಗುತ್ತೀವಿ ಎನ್ನುವುದು ಬಹಳ ಮುಖ್ಯ. ನಮ್ಮ ಮೂಲಭೂತ ನಂಬಿಕೆಗಳು ಮತ್ತು ಮೌಲ್ಯಗಳ ವಿಚಾರದಲ್ಲಿ ರಾಜಿಯಾಗಬಾರದು. ಆ ಮೌಲ್ಯಗಳನ್ನು ಬಿಟ್ಟುಕೊಡದಿರುವುದೇ ನಿಜವಾದ Integrity. ಒಂದು ವೇಳೆ ನೀವು ಯಾರಿಗಾದರೂ ಅನ್ಯಾಯ ಮಾಡಿದರೆ, ಆ ವ್ಯಕ್ತಿಗೆ ಅದು ಗೊತ್ತಾಗದಿದ್ದರೂ ನಿಮಗೆ ಗೊತ್ತಿರುತ್ತದೆ ತಾನೇ? ಹಾಗಾಗಿ ಈ ವ್ಯಕ್ತಿಯನ್ನು ಎದುರಿಸಿದಾಗ ನಿಮ್ಮಲ್ಲಿ ಆತ್ಮವಿಶ್ವಾಸ ತನ್ನಿಂತಾನೇ ಕಡಿಮೆಯಾಗುತ್ತದೆ. ಹಾಗಾಗಿ ವ್ಯಕ್ತಿತ್ವ ನೇರವಾಗಿದ್ದಷ್ಟೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

    ನಮ್ಮ ಕೆಲಸಕ್ಕೆ ಉಪಯೋಗವಾಗುವಂತಹ ವಿಷಯಗಳನ್ನು ತಿಳಿದುಕೊಳ್ಳೋದು, ವಹಿಸಿಕೊಂಡ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸೋದು, ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆಯದೇ ಇರೋದು … ಆತ್ಮವಿಶ್ವಾಸದ ಗುಟ್ಟುಗಳು. ಹಾಗಂತ, ಈ ಮೂರನ್ನು ಅನುಸರಿಸಿದಾಕ್ಷಣ ಒಂದೇ ದಿನದಲ್ಲಿ ಆತ್ಮವಿಶ್ವಾಸ ತುಂಬಿಕೊಳ್ಳುತ್ತದೆ ಅಂತಲ್ಲ. ಅದೊಂದು ನಿರಂತರ ಪ್ರಕ್ರಿಯೆ. ನಾನು ‘ವೀಕೆಂಡ್ ವಿಥ್ ರಮೇಶ್’, ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮಗಳನ್ನು ನಡೆಸಿಕೊಡೋದನ್ನು ನೀವು ನೋಡಿ ಖುಷಿಪಡಬಹುದು. ಅದು ಶುರುವಾಗಿದ್ದು ಇತ್ತೀಚೆಗಿಂದಲ್ಲ. ನಾನು ಎಂಟನೇ ಕ್ಲಾಸ್​ನಲ್ಲಿದ್ದಾಗಲೇ ಶುರುವಾಗಿದ್ದು. ಆಗ ಮೊದಲನೇ ಸಲ ಮೈಕಿನ ಮುಂದೆ ನಿಂತು ಭಾಷಣ ಕೊಟ್ಟಾಗ, ನಂತರ ಪ್ರತಿಯೊಂದು ಅವಕಾಶ ಸಿಕ್ಕಿದಾಗಲೂ ವೇದಿಕೆ ಹತ್ತಿ ಭಾಷಣ ಮಾಡುವ ಪ್ರಯತ್ನ ಮಾಡುತ್ತಿದ್ದೆ. ಮೊದಲ ಬಾರಿಗೆ ಮಾತನಾಡಿದಾಗ ಭಯವಿತ್ತು. ಕ್ರಮೇಣ ಆತ್ಮವಿಶ್ವಾಸ ಬಂತು. ಮಧ್ಯದಲ್ಲಿ ಚೆನ್ನೈನಲ್ಲಿದ್ದಾಗ ಯಾವ ವೇದಿಕೆಯನ್ನೂ ಹತ್ತಿರಲಿಲ್ಲ. ಹಾಗಾಗಿ ದಿಢೀರನೆ ವೇದಿಕೆ ಮೇಲೆ ಮಾತಾಡಬೇಕು, ಮೈಕ್ ಮುಂದೆ ನಿಲ್ಲಬೇಕು ಎಂದರೆ ಕಾಲು ನಡುಕ ಶುರುವಾಗುತ್ತಿತ್ತು. ಕೊನೆಗೆ, Stage Functionಗೆ ಹೋಗೋದು, ಮುಖ್ಯ ಅತಿಥಿಯಾಗಿ ಭಾಗವಹಿಸೋದು, ಇವನ್ನೆಲ್ಲ ತಪ್ಪಿಸಿಕೊಳ್ಳೋಕೆ ಶುರು ಮಾಡಿದೆ. ನನ್ನ ಆತ್ಮವಿಶ್ವಾಸದ ಲೆವೆಲ್ ಕಡಿಮೆಯಾಗುತ್ತಾ ಬಂತು.

    ಇಂಥ ಪರಿಸ್ಥಿತಿಯಲ್ಲಿ ಒಮ್ಮೆ ಪಕ್ಕದ ಸ್ಕೂಲ್​ನಲ್ಲಿ ಗಣರಾಜ್ಯ ದಿನಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದರು. ಆಗ ಮತ್ತೆ ಪ್ರಯತ್ನಪಡೋಣ ಎಂದು ತೀರ್ವನಿಸಿದೆ. ಒಂದು ಪಕ್ಷ ಫ್ಲಾಪ್ ಆದರೂ, 150 ಮಕ್ಕಳ ಮುಂದೆ ತಾನೆ ಅಂತ ಹೋಗಿ ಮಾತಾಡಿದೆ. ಅಂದು ನನ್ನ ಮಾತು ಕೇಳಿ ಜನ ಜಪ್ಪಾಳೆ ತಟ್ಟಿದರು. ಆಗ ನನ್ನಲ್ಲಿ ಆತ್ಮವಿಶ್ವಾಸ ತುಂಬಿಕೊಂಡಿತು. ಆಗಾಗ ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಆಗೋದು ಬಹಳ ಸಹಜ. ಆಗ ನಮ್ಮಲ್ಲಿ ನಮಗೇ ಇರುವ ಅನುಮಾನಗಳನ್ನು ಮೀರುವ ಪ್ರಯತ್ನ ಮಾಡಬೇಕಾಗುತ್ತದೆ. ಎಷ್ಟು practical ಆಗಿ ಮಾಡುತ್ತೀವೋ, ಎಷ್ಟು ಸಲ ಒಂದೇ ಕೆಲಸವನ್ನು ಪದೇಪದೆ ಮಾಡುತ್ತೀವೋ, ಆ ಕೆಲಸ ಇನ್ನೂ ಸುಲಭವಾಗುತ್ತದೆ ಮತ್ತು ಅದರಿಂದ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಹಾಗಾಗಿ ಒಂದು ಕೆಲಸದಲ್ಲಿ ಎಡವಿದರೆ ಆ ಸೋಲನ್ನು ಸುಲಭದಲ್ಲಿ ಒಪ್ಪಿಕೊಳ್ಳದೇ, ಎಡವಿದ್ದಕ್ಕೆ ಕಾರಣಗಳನ್ನು ತಿಳಿದುಕೊಂಡು ಮತ್ತೆ ಪ್ರಯತ್ನಪಟ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.

    ಹಿಂದಿನ ಎರಡು ಅಂಕಣಗಳಲ್ಲಿ ನಾನು ರ್ಚಚಿಸಿದ ಏಕಾಗ್ರತೆ, ಸಂಬಂಧಗಳು ಮತ್ತು ಆತ್ಮವಿಶ್ವಾಸ ನಮಗಿರುವ ನಿಜವಾದ Super powers. ಜೀವನದ ಎಲ್ಲ ಹಿತವಾದ ಮತ್ತು ಸುಂದರವಾದ ವಿಷಯಗಳಿಗೆ ನಮಗೆ ಅರ್ಹತೆ ಇದೆ ಅಂತ ಮೊದಲು ನಾವು ನಂಬಬೇಕು. ಆ ನಂಬಿಕೆಗೆ ಪೂರಕವಾಗಿ ನಮ್ಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಸಿಗಬಲ್ಲ ಈ Super powersನ ನಾವೆಲ್ಲರೂ ಬೆಳೆಸಿಕೊಳ್ಳಬೇಕು.

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts