More

  ರಾಮಚರಿತಮಾನಸ ಕೆಮಿಕಲ್​​ ಇದ್ದಂತೆ; ವಿವಾದಾತ್ಮಕ ಹೇಳಿಕೆ ನೀಡಿದ ಇಂಡಿಯಾ ಒಕ್ಕೂಟದ ಮತ್ತೊಬ್ಬ ನಾಯಕ

  ಪಟ್ನಾ: ಸಂತ ತುಳಸಿದಾಸರು ಬರೆದಿರುವ ರಾಮಚರಿತ ಮಾನಸ ಪೊಟ್ಯಾಸಿಯಮ್​ ಸೈನಡ್​​ ಇದ್ದಂತೆ ಎಂದು ಹೇಳುವ ಮೂಲಕ ಬಿಹಾರದ ಶಿಕ್ಷಣ ಸಚಿವ, ರಾಷ್ಟ್ರೀಯ ಜನತಾ ದಳದ ಪ್ರಭಾವಿ ನಾಯಕ ಚಂದ್ರಶೇಖರ್​ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.

  ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ಇಂಡಿಯಾ ಒಕ್ಕೂಟದ ನಾಯಕರು ಪದೇ ಪದೇ ಹಿಂದೂಗಳ ಭಾವನೆಗಳಿಗೆ ಯಾಕೆ ಈ ರೀತಿ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

  ಸೈನಡ್​ಗೆ ಹೋಲಿಸಿದ ಸಚಿವ

  ವೈರಲ್​ ಆಗಿರುವ ವಿಡಿಯೋದಲ್ಲಿ ರಾಮಚರಿತ ಮಾನಸದಲ್ಲಿ ಪ್ರತಿಗಾಮಿ ಚಿಂತನೆಗಳು ಒಳಗೊಂಡಿವೆ. ಇದು ನನ್ನೊಬ್ಬನ ದೃಷ್ಟಿಕೋನವಲ್ಲ. ಹಿಂದಿಯ ಪ್ರಸಿದ್ದ ಲೇಖಕ ನಾಗಾರ್ಜುನ ಮತ್ತು ಸಮಾಜವಾದಿ ಚಿಂತಕ ರಾಮ್​ಪ್ರಸಾದ್​ ಲೋಹಿಯಾ ಅವರು ಸಹ ಇದನ್ನೇ ಹೇಳಿದ್ದರು. ಈ ಕೃತಿಯಲ್ಲಿ ಹಲವು ಮಹತ್ವದವಾದ ವಿಚಾರಗಳು ಅಡಗಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, 55 ಬಗೆಯ ಖಾದ್ಯಗಳಿರುವ ಹಬ್ಬದೂಟದ ಮೇಲೆ ಪೊಟ್ಯಾಸಿಯಂ ಸೈನೈಡ್​ ಸಿಂಪಡಿಸಿದರೆ ಅದು ಸೇವಿಸಲು ಯೋಗ್ಯವಾಗಿರುವುದಿಲ್ಲ.

  ಜಾತಿ ತಾರತಮ್ಯ ಹಾಗೂ ಪದ್ದತಿ ವಿರುದ್ಧ ನಾನು ಮಾತನಾಡಿದರೆ ನನಗೆ ಬೆದರಿಕೆಗಳು ಬರಲು ಶುರು ಆಗುತ್ತವೆ. ಆದರೆ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ ಅವರು ಈ ವಿಚಾರವಾಗಿ ಕಳವ?ಳ ವ್ಯಕ್ತಪಡಿಸಿದರೆ ಏನು ಆಗುವುದಿಲ್ಲ. ಸಮಾನತೆಯ ಸಮಾಜವನ್ನು ಸ್ಥಾಪಿಸಲು ಜಾತಿಗಣತಿ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

  ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ; ಅಂಜುಮನ್​ ಅರ್ಜಿ ತಿರಸ್ಕರಿಸಿದ ಹೈಕೋರ್ಟ್: ಹೋರಾಟಕ್ಕೆ ಸಂದ ಜಯವೆಂದ ಅರವಿಂದ ಬೆಲ್ಲದ

  ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನೀರಜ್ ಕುಮಾರ್​ ಬಿಹಾರದ ಶಿಕ್ಷಣ ಸಚಿವರು ಸಂತ ತುಳಸಿದಾಸ, ಸ್ವಾಮಿ ವಿವೇಕಾನಂದ ಅವರಂತಹ ಪ್ರಗತಿಪರ ವ್ಯಕ್ತಿಗಳನ್ನು ಒಳಗೊಂಡಿರುವ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಏಕಿಷ್ಟು ಮೌನ ವಹಿಸಿದ್ದಾರೆ. ಈ ಕೂಡಲೇ ಅವರು ಈ ಬಗ್ಗೆ ಪ್ರತಿಕ್ರಿಯಿಸಬೇಕು ಇಲ್ಲವಾದಲ್ಲಿ ಹೇಳಿಕೆ ನೀಡಿದವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  ನಮ್ಮ ದೇಶದ ಸಂವಿಧಾನದಲ್ಲಿ ಎಲ್ಲಾ ಜಾತಿ ಹಾಗೂ ಧರ್ಮಗಳಿಗೆ ಸಮಾನ ಗೌರವ ನೀಡಬೇಕು ಎಂದು ಹೇಳುತ್ತದೆ. ಕೆಲವರು ಪ್ರಚಾರದ ಗೀಳಿಗಾಗಿ ಏನೇನೋ ಮಾತನಾಡುತ್ತಾರೆ. ಅದನ್ನೆಲ್ಲಾ ಒಪ್ಪಲು ಸಾಧ್ಯವಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರ ವಕ್ತಾರ ನಿಖಿಲ್​ ಝಾ ತಿಳಿಸಿದ್ದಾರೆ.

  ಇತ್ತ ಸಚಿವ ಚಂದ್ರಶೇಖರ್​ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ರಾಷ್ಟ್ರೀಯ ಜನತಾ ದಳ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ವಿವರಣೆ ಪಡೆದು ಆ ನಂತರ ಕ್ರಮ ಜರುಗಿಸಬಹುದು ಎಂದು ಹೇಳಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts