More

    ಖಾತೆಗಾಗಿ ವೃದ್ಧೆ ಏಕಾಂಗಿ ಹೋರಾಟ: ತಾಪಂ ಎದುರು ಅಹೋರಾತ್ರಿ ಧರಣಿ

    ಚನ್ನಪಟ್ಟಣ: ಪಿತ್ರಾಜಿರ್ತ ಆಸ್ತಿಗೆ ಪೌತಿ ಖಾತೆ ಮಾಡಿಕೊಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೃದ್ಧೆಯೊಬ್ಬರು ನಗರದ ತಾಲೂಕು ಪಂಚಾಯಿತಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
    ತಾಲೂಕಿನ ಹೊಸೂರುದೊಡ್ಡಿ ಗ್ರಾಮದ ರೇವಮ್ಮ ಧರಣಿನಿರತ ವೃದ್ಧೆ. ಈಕೆ ಗ್ರಾಮದಲ್ಲಿರುವ ತಂದೆ ಬೀರಯ್ಯ ಎಂಬುವವರ ಆಸ್ತಿಯನ್ನು ನಿಯಮಾನುಸಾರವಾಗಿ ತಮ್ಮ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಮತ್ತೀಕೆರೆ ಗ್ರಾಪಂ ಅಧಿಕಾರಿಗಳಿಗೆ ಅಜಿರ್ ಸಲ್ಲಿಸಿದ್ದಾರೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದರೂ ಖಾತೆ ಮಾಡಿಕೊಡದೇ ಅನ್ಯಾಯ ಎಸಗಲಾಗುತ್ತಿದೆ ಎಂದು ಆರೋಪಿಸಿ, ಸೋಮವಾರ ಬೆಳಗ್ಗೆಯಿಂದ ತಾಪಂ ಎದುರು ಧರಣಿ ನಡೆಸುತ್ತಿದ್ದಾರೆ. ಈಕೆಯ ಹೋರಾಟಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಸಾಥ್​ ನೀಡಿದೆ.


    ಗ್ರಾಮದ ಮನೆ ನಂ.63ರ ಆಸ್ತಿಗೆ ತಂದೆಯ ಹೆಸರಿನ ಡಿಮ್ಯಾಂಡ್​, ತಂದೆ ಮರಣ ಪ್ರಮಾಣಪತ್ರ, ವಿದ್ಯುತ್​ ಬಿಲ್​, ಕಂದಾಯದ ರಸೀದಿ ಸೇರಿ ಪೂರಕ ದಾಖಲೆಗಳು ಇದ್ದರೂ, ತಂದೆಯ ಹೆಸರಿನಲ್ಲಿರುವ ಸ್ವತ್ತನ್ನು ನನ್ನ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಹಾಗೂ ಇ&ಖಾತೆ ಮಾಡಿಕೊಡಲು ಗ್ರಾಪಂ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಎರಡು ವರ್ಷಗಳಿಂದ ಡಿಮ್ಯಾಂಡ್​ ಕೂರಿಸಿ ಖಾತೆ ಮಾಡಿಕೊಡದೆ ಸತಾಯಿಸಲಾಗುತ್ತಿದೆ. ಮತ್ತಿಕೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಎಲ್ಲ ದಾಖಲೆ ನೀಡಿದ್ದರೂ ವಿಧವಾ ವೇತನ ತೆಗೆದುಕೊಂಡು ಜೀವನ ನಡೆಸುತ್ತಿರುವ ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದ ಕಾರಣ ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ರೇವಮ್ಮ, ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ತಾಪಂ ಕಚೇರಿಯಲ್ಲಿ ಕಾಲಕಳೆದ ವೃದ್ಧೆ: ಖಾತೆ ಮಾಡಿಕೊಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ತಾಪಂ ಕಚೇರಿಯ ಎದುರು ಧರಣಿ ಕುಳಿತಿರುವ ರೇವಮ್ಮಗೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಅಂಕಪ್ಪ, ತಾಲೂಕು ಅಧ್ಯಕ್ಷ ಚನ್ನಪ್ಪಾಜಿ, ಕಾರ್ಯದಶಿರ್ ಶಿವರಾಜು ಬೆಂಬಲ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಆರಂಭವಾದ ಧರಣಿ ರಾತ್ರಿಯೂ ಮುಂದುವರಿದಿದ್ದು, ಸುರಿವ ಮಳೆಯಲ್ಲೂ ಸಹೋದರ ರೇವಣ್ಣ ಜತೆ ತಾಪಂ ಕಚೇರಿ ಆವರಣದಲ್ಲೇ ವೃದ್ಧೆ ಪ್ರತಿಭಟನೆ ಮುಂದುವರಿಸಿದ್ದಾರೆ.

    ಸಂಧಾನ ವಿಫಲ: ಕಚೇರಿ ಮುಂಭಾಗ ವೃದ್ಧೆ ಪ್ರತಿಭಟನೆಗೆ ಕುಳಿತ ಕೂಡಲೇ ತಾಪಂ ಇಒ ಶಿವಕುಮಾರ್​ ಆಕೆಯ ಮನವಿ ಆಲಿಸಿ, ಇರುವ ಸಮಸ್ಯೆಯನ್ನು ತಿಳಿಹೇಳುವ ಪ್ರಯತ್ನ ನಡೆಸಿದರು. ಆದರೆ, ಇದಕ್ಕೆ ಒಪ್ಪದ ರೇವಮ್ಮ ಪ್ರತಿಭಟನೆ ಮುಂದುವರಿಸಿದರು. ಮಂಗಳವಾರ ತಹಸೀಲ್ದಾರ್​ ಸುದರ್ಶನ್​ ಸಹ ಇವರ ಆಹವಾಲು ಆಲಿಸಿದರು. ನನ್ನ ಕಚೇರಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ವಿಚಾರ ನಡೆಸುವುದಾಗಿ ತಿಳಿಸಿ, ಅದರಂತೆ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ಜತೆ ತಮ್ಮ ಕಚೇರಿಯಲ್ಲಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು. ಆದರೆ, ಖಾತೆಗೆ ತಕರಾರು ಇರುವ ಕಾರಣ ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮಾತುಕತೆ ವಿಫಲವಾಯಿತು. ಹೀಗಾಗಿ, ರೇವಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts