More

    ಟೂರಿಸಂ ಹಬ್ ಆಗಿ ರಾಮನಗರ: ಸಚಿವ ಡಾ.ಅಶ್ವತ್ಥನಾರಾಯಣ ಒತ್ತಾಯ

    ರಾಮನಗರ: ಭೌಗೋಳಿಕ, ಪ್ರಾಕೃತಿಕವಾಗಿ ಸಂಪದ್ಭರಿತವಾಗಿರುವ ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವಂತೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ ಪ್ರವಾಸೋದ್ಯಮ ಸಚಿವರನ್ನು ಒತ್ತಾಯಿಸಿದ್ದಾರೆ.

    ಈ ಸಂಬಂಧ ಪ್ರವಾಸಿ ಸಚಿವರಿಗೆ ಪತ್ರ ಬರೆದಿರುವ ಸಚಿವರು, ಸಂಗಮ, ಮೇಕೆದಾಟುಗಳಂತಹ ನದಿತೀರ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟ ಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿದೆ. ಅಲ್ಲದೆ ಕಾವೇರಿಯಂತಹ ದೊಡ್ಡ ನದಿ, ಶಿಂಷಾ, ಅರ್ಕಾವತಿ ಸೇರಿ ಸಣ್ಣ-ಪುಟ್ಟ ನದಿಗಳು ಹರಿಯುತ್ತಿದ್ದು, ವನ್ಯ ಸಂಪತ್ತಿನಿಂದ ಕಂಗೊಳಿಸುತ್ತಿದೆ. ಕಣ್ವ, ಇಗ್ಗಲೂರು ಮಂಚನಬೆಲೆ, ತಿಪ್ಪಗೊಂಡನಹಳ್ಳಿಗಳಂತಹ ಜಲಾಶಯಗಳು ಇಲ್ಲಿವೆ. ಹೀಗೆ ಹತ್ತು ಹಲವು ಬಗೆಯಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಜಿಲ್ಲೆಯನ್ನು ಪ್ರವಾಸಿ ತಾಣವನ್ನಾಗಿಸುವಂತೆ ಕ್ರಮಕೈಗೊಳ್ಳಲು ಪತ್ರದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅವರನ್ನು ಕೋರಿದ್ದಾರೆ.

    ರಾಮನಗರವು ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು ಒಂದು ಗಂಟೆಯಲ್ಲಿ ಪ್ರಯಾಣದ ಅಂತರದಲ್ಲಿದೆ. ಜಿಲ್ಲೆಯಲ್ಲಿರುವ ಹಲವು ಪ್ರವಾಸಿತಾಣಗಳನ್ನು ಒಂದು ಯೂನಿಟ್‌ನಂತೆ ರೂಪಿಸಿ ಒಂದು ದಿನದ ಕಿರುಪ್ರವಾಸ ಹಮ್ಮಿಕೊಳ್ಳಲು ಹೇಳಿ ಮಾಡಿಸಿದಂತಹ ಜಿಲ್ಲೆಯಾಗಿದೆ. ಪ್ರವಾಸೋದ್ಯಮದಲ್ಲಿ ವಿುಲ ಅವಕಾಶಗಳಿಗೆ ರಾಮನಗರವು ತೆರೆದುಕೊಂಡಿದೆ. ಹೀಗಾಗಿ ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಸಚಿವರು ಕೋರಿದ್ದಾರೆ.

    ಪ್ರವಾಸಿ ಸಮಾವೇಶ: ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ತೆರೆದಿಡಲು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಭಾಗಿದಾರರನ್ನು ಒಳಗೊಂಡ ಪ್ರವಾಸೋದ್ಯಮ ಸಮಾವೇಶವನ್ನು ಜುಲೈ 29 ರಂದು ಆಯೋಜಿಸುವಂತೆ ಡಾ. ಅಶ್ವತ್ಥನಾರಾಯಣ ಕೋರಿದ್ದಾರೆ.

    ಟೂರಿಸಂ ಹಬ್: ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿಸಲು ಕೋರಿರುವ ಹಿನ್ನೆಲೆಯಲ್ಲಿ ಜು.15ರಂದು ನಡೆದ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಯಿತು. ಈ ವೇಳೆ ಜಿಲ್ಲೆಗೆ ಬರುವಂತಹ ಪ್ರವಾಸಿಗರನ್ನು ಸೆಳೆಯಲು ಸೈಕಲ್ ಸವಾರಿ, ಹಲವು ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ವಿವಿಧ ಚಟುವಟಿಕೆ, ಗುಡ್ಡಗಾಡು ಪ್ರದೇಶದಲ್ಲಿ ಬೈಕಿಂಗ್ ಹಾಗೂ ಚಾರಣಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ ಎಂದೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಅದೇ ರೀತಿ ಜಿಲ್ಲೆ ಕಲೆಗೆ ಹೆಸರುವಾಸಿಯಾಗಿದ್ದು, ಪಾರಂಪರಿಕ ವಸ್ತು ಸಂಗ್ರಹಾಲಯ ಸಿದ್ಧಪಡಿಸಲು ಕ್ರಮ, ಜಿಲ್ಲೆಯಲ್ಲಿರುವ ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.


    ಇದರ ಜೊತೆಗೆ ಮೈಕ್ರೋಲೈಟ್ ಏರ್‌ಕ್ರಾಫ್ಟ್, ಮ್ಯಾರಥಾನ್, ವಾಕಥಾನ್, ಪ್ಲೋಟಿಂಗ್ ಹೌಸ್, ಹೀಲಿಂಗ್ ಸೆಂಟರ್ ಹಾಗೂ ಮೂಲಸೌಕರ್ಯಗಳು ಲಭ್ಯವಿರುವ ಮಾಹಿತಿ ಒದಗಿಸುವ ತಂತ್ರಾಂಶ ಅಭಿವೃದ್ಧಿಪಡಿಸಬೇಕು ಎಂದರು. ಒಟ್ಟಾರೆಯಾಗಿ ಜಿಲ್ಲೆಯ ಸುತ್ತಮುತ್ತ ಇರುವ ವಿವಿಧ ಪ್ರವಾಸಿ ತಾಣಗಳನ್ನು ಜೋಡಿಸಿ ಜಿಲ್ಲೆಯನ್ನು ಟೂರಿಂಗ್ ಹಬ್ ರೂಪಿಸಬಹುದಾಗಿದೆ ಎಂದು ಸಭೆಗೆ ತಿಳಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಮಾರುತಿ ಪ್ರಸನ್ನ, ವಿಶೇಷ ಕರ್ತವ್ಯ ಅಧಿಕಾರಿ ಅಂಜಿನಪ್ಪ, ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಮ್ಮ ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts