More

    ದಾಖಲೆಗಳೊಂದಿಗೆ ಮಾತನಾಡಲಿ: ಬೆಂ-ಮೈ ಹೆದ್ದಾರಿ ಕಾಮಗಾರಿಯಲ್ಲಿ ಹಗರಣ ಆರೋಪಕ್ಕೆ ಡಾ. ಸಿಎನ್‌ಎ ಪ್ರತಿಕ್ರಿಯೆ

    ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದಲ್ಲಿ ಬಹುಕೋಟಿ ಹಗರಣ ನಡೆದಿದ್ದರೆ ಅದರ ದಾಖಲೆಗಳನ್ನು ನೀಡಲಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.


    ರಾಮನಗರದ ನೆರೆ ಪೀಡಿತ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ನಡೆದಿದೆ ಎನ್ನುವುದಾದರೆ ದಾಖಲೆಗಳನ್ನು ನೀಡಲಿ, ಅದೇ ರೀತಿ ಸದನ ಇದೆ. ಇಲ್ಲಿಗೆ ಬಂದು ದಾಖಲೆಗಳೊಂದಿಗೆ ಮಾತನಾಡಲಿ, ಖಂಡಿತವಾಗಿ ತಪ್ಪಿಸ್ಥತರ ವಿರುದ್ಧ ಕ್ರಮವಾಗಲಿದೆ ಎಂದು ಸಚಿವರು ಹೇಳಿದರು.


    ಹೆದ್ದಾರಿ ನಿರ್ಮಾಣ ಮಾಡಿರುವುದೇ ಸಾರ್ವಜನಿಕರ ಅನುಕೂಲಕ್ಕಾಗಿ. ಇದರಿಂದ ಯಾವುದೇ ಕಾರಣಕ್ಕೂ ತೊಂದರೆ ಆಗಲು ಬಿಡುವುದಿಲ್ಲ, ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಭವಿಷ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಶಾಶ್ವತ ಪರಿಹಾರ ಕೈಗೊಳ್ಳಲಾಗುವುದು. ಈ ಮೂಲಕ ಈ ಭಾಗದ ಆರ್ಥಿಕ ಪರಿಸ್ಥಿತಿಯೂ ವೃದ್ಧಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

    ನೆರವಿಗೆ ಧಾವಿಸಿದೆ: ವಿಶೇಷ ಪ್ಯಾಕೇಜ್ ೋಷಣೆ ಸಂಬಂಧ ಯಾವುದೇ ಸ್ಪಷ್ಟ ಉತ್ತರ ನೀಡದ ಸಚಿವರು, ಸರ್ಕಾರ ಈಗಾಗಲೇ ನೆರೆ ಪೀಡಿತರ ನೆರವಿಗೆ ಧಾವಿಸಿದೆ. ಹಿಂದೆ ಮನೆ ಕಳೆದುಕೊಂಡವರಿಗೆ ಕೇವಲ 1 ಲಕ್ಷ ರೂ.ಪರಿಹಾರ ನೀಡಲಾಗುತ್ತಿತ್ತು. ಆದರೆ ಇದನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮನೆಗೆ ನೀರು ನುಗ್ಗಿದರೆ ಕೇವಲ 2 ಸಾವಿರ ರೂ. ಕೊಡಲಾಗುತ್ತಿತ್ತು. ಈಗ 10 ಸಾವಿರಕ್ಕೆ ಏರಿಸಲಾಗಿದೆ. ಒಟ್ಟಾರೆ ಪರಿಹಾರ ನೀಡಿಕೆ ಪ್ರಮಾಣವನ್ನು ಕನಿಷ್ಠ 2 ಪಟ್ಟು ಹೆಚ್ಚಳ ಮಾಡಲಾಗಿದೆ. ಇತರ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವೈಯಕ್ತಿಕ ನಷ್ಟದ ಪರಿಹಾರಕ್ಕೂ ಸರ್ಕಾರ ಬರಲಿದೆ ಎಂದು ಅಶ್ವತ್ಥನಾರಾಯಣ ಭರವಸೆ ನೀಡಿದರು. ಇದರ ಜತೆಗೆ ರಾಮನಗರ ನಗರ ಪ್ರದೇಶ ವ್ಯಾಪ್ತಿಯಲ್ಲಿ 200 ಮೀಟರ್ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

    ಸಂತ್ರಸ್ತರ ಅಳಲು: ನಗರದ ಅರ್ಕೇಶ್ವರ ಕಾಲೀನಿ, ಟಿಪ್ಪು ನಗರ ಸೇರಿ ಮುಂತಾದ ಕಡೆಗಳಲ್ಲಿ ಸಚಿವರು ಭಾನುವಾರ ರೌಂಡ್ಸ್ ನಡೆಸಿದರು. ಈ ವೇಳೆ ಮನೆ ಕಳೆದುಕೊಂಡವರು, ಇನ್ನು ಪರಿಹಾರ ದೊರೆಯದವರು ಅಳಲು ತೋಡಿಕೊಂಡರು. ಕೆಲವರು ವಾಣಿಜ್ಯ ಪ್ರದೇಶಗಳಲ್ಲಿ ಆಗಿರುವ ಹಾನಿಗೂ ಪರಿಹಾರ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವತ್ಥನಾರಾಯಣ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಲು ಬೇಕಾದ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ನಿಮ್ಮ ಜೊತೆ ಇರಲಿದೆ ಎಂದು ಭರವಸೆ ನೀಡಿದರು.

    ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಪ್ರಾಧಿಕಾರದ ಅಧ್ಯಕ್ಷ ಶಿವಮಾದು, ಮುಖಂಡರಾದ ಎಸ್.ಆರ್.ನಾಗರಾಜು, ನರೇಂದ್ರ, ಗೌತಮ್‌ಗೌಡ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ನಗರಸಭೆ ಆಯುಕ್ತ ನಂದಕುಮಾರ್ ಮುಂತಾದವರು ಇದ್ದರು.

    ನಿಸ್ವಾರ್ಥ ಸೇವೆ: ಸಾಷ್ಠಾಂಗ ನಮಸ್ಕಾರ ಮಾಡುತ್ತೇನೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕುಡಿಯುವ ನೀರಿನ ಯೋಜನೆ, ಆಸ್ಪತ್ರೆ ಸೇರಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ನಮ್ಮ ಸರ್ಕಾರದಿಂದ ಕೆಲಸವನ್ನು ಅಚ್ಚುಕಟ್ಟಾಗಿ, ಕೈ ಗಲೀಜು ಮಾಡಿಕೊಳ್ಳದೆ, ಸ್ವಾರ್ಥವಿಲ್ಲದೆ ಮಾಡುತ್ತಿದ್ದೇನೆ. ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಬೇಕು, ನೀರಾವರಿ ಯೋಜನೆಗಳಾದ ಸತ್ತೇಗಾಲ, ಎತ್ತಿನಹೊಳೆ, ಶ್ರೀರಂಗ ಯೋಜನೆಗಳನ್ನು ಕೈ ಬಿಡದೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ತಿರುಗೇಟು ನೀಡಿದರು.


    ಒತ್ತುವರಿ ತಡೆಗೆ ಕ್ರಮ ಕೈಗೊಂಡಿಲ್ಲ: ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರ ನೀಡದ ಸಚಿವರು, ಹಿಂದಿನಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳ ತಪ್ಪು ನಿರ್ಧಾರದಿಂದ ಸಮಸ್ಯೆ ಉಂಟಾಗಿದೆ. ಇದಕ್ಕೆ ಯಾರನ್ನು ದೂರಬೇಕು. ಕಾಲುವೆ, ನಾಲೆಗಳು ಒತ್ತುವರಿ ಆದರೂ ಇದನ್ನು ತಡೆದು ಸೂಕ್ತ ಕ್ರಮವನ್ನು ಹಿಂದೆಯೇ ಕೈಗೊಳ್ಳಬೇಕಿತ್ತು. ಆದರೆ ಇದು ಆಗಿಲ್ಲ, ಆದರೆ ಈಗ ನಾವು ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಡಾ. ಅಶ್ವತ್ಥನಾರಾಯಣ ಮಾರ್ಮಿಕವಾಗಿ ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts