More

    ಸಾಕಿ ಬೆಳೆಸಿದ ಕಾರ್ಯಕರ್ತರೇ ಆಸ್ತಿ

    ಹಾರೋಹಳ್ಳಿ: ನಾನು ಮಣ್ಣಲ್ಲಿ ಮಣ್ಣಾಗುವವರೆಗೂ ರಾಮನಗರ ಜಿಲ್ಲೆಯ ಜನತೆಯ ಪ್ರೀತಿ ಅಭಿಮಾನ ಮರೆಯುವುದಿಲ್ಲ. ನನ್ನನ್ನು ಸಾಕಿ ಬೆಳೆಸಿದ ಕಾರ್ಯಕರ್ತರೇ ನನ್ನ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
    ಹಾರೋಹಳ್ಳಿಯ ಬಸ್ ನಿಲ್ದಾಣ ವೃತ್ತ ಹಾಗೂ ಮರಳವಾಡಿಯ ಬಸ್ ನಿಲ್ದಾಣ ವೃತ್ತದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ಭಾನುವಾರ ಮತಯಾಚನೆ ನಡೆಸಿ ಮಾತನಾಡಿ, ಜಿಲ್ಲೆಯ ಜನತೆ ನನ್ನನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದು, ಅವರ ಪ್ರೀತಿ, ಅಭಿಮಾನಕ್ಕೆ ನಾವೆಂದೂ ಚಿರಋಣಿ, ನಿಮ್ಮ ಆಶೀರ್ವಾದಿಂದ ರಾಜಕೀಯವಾಗಿ ನಮ್ಮ ಕುಟುಂಬ ಎತ್ತರಕ್ಕೆ ಬೆಳೆದಿದೆ ಎಂದರು.


    ಕಾರ್ಯಕರ್ತರು, ಜನರ ಕಷ್ಟ-ಸುಖಗಳಿಗೆ ಎಂದಿಗೂ ಜತೆಗೆ ನಿಲ್ಲುತ್ತೇನೆ. ಈ ಬಾರಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬರುವುದು ಖಚಿತ. ಯಾರು ಏನೇ ಅಪಪ್ರಚಾರ ನಡೆಸಿದರೂ ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.
    ದೇವೇಗೌಡರು ಮತ್ತು ನನ್ನನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದೀರಿ. ಅದೇ ಪ್ರೀತಿ ಅಭಿಮಾನವನ್ನು ನಿಖಿಲ್ ಕುಮಾರಸ್ವಾಮಿ ಮೇಲೆ ಇಟ್ಡಿದ್ದೀರಿ. ನಮ್ಮನ್ನು ಬೆಳೆಸಿದ್ದು ರಾಮನಗರ ಜಿಲ್ಲೆಯ ಜನತೆ. ಅದರಲ್ಲೂ ಹಾರೋಹಳ್ಳಿ, ಮರಳವಾಡಿ ಜನರು ಶಕ್ತಿ ನೀಡಿದ್ದೀರಿ. ನಾವಿಂದು ಹೆಮ್ಮರವಾಗಿ ಬೆಳೆದು ಹಲವರಿಗೆ ನೆರಳಾಗಿದ್ದೇವೆ ಎಂದರೆ ಅದಕ್ಕೆ ಜಿಲ್ಲೆಯ ಜನತೆಯೇ ಕಾರಣ ಎಂದರು.

    ವಿರೋಧ ಪಕ್ಷಗಳಲ್ಲಿ ನಡುಕ: ರಾಜ್ಯದಲ್ಲಿ ಜೆಡಿಎಸ್‌ಗೆ ದೊರೆತ ಬೆಂಬಲ ಕಂಡು ವಿಪಕ್ಷಗಳು ವಿಚಲಿತವಾಗಿದೆ. ಪ್ರಧಾನಿ ಸೇರಿ ಹಲವು ನಾಯಕರು ದಂಡೆತ್ತಿ ಬರುತ್ತಿದ್ದಾರೆ. ಯಾರೇ ಬಂದರೂ ರಾಜ್ಯದ ಜನತೆ ಜೆಡಿಎಸ್‌ಗೆ ಬಹುಮತ ನೀಡುವ ವಿಶ್ವಾಸವಿದೆ ಎಂದು ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಬಿಜೆಪಿಯವರು ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದ ಅಲ್ಪಸಂಖ್ಯಾತ ಮೀಸಲಾತಿ ರದ್ದು ಮಾಡಿದ್ದಾರೆ. ಅದಕ್ಕೆಲ್ಲ 10 ದಿನಗಳ ನಂತರ ಉತ್ತರ ನೀಡಲಾಗುವುದು. ನಮ್ಮ ಸರ್ಕಾರದಲ್ಲಿ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲಾಗುವುದು. ರೈತರು, ಯುವಕರು ಸೇರಿ ಮಹಿಳೆಯರು, ಸ್ವಾಭಿಮಾನದಿಂದ ಬದುಕು ನಡೆಸಲು ಯೋಜನೆ ರೂಪಿಸಲಾಗುವುದು ಎಂದರು.

    ಮಾಜಿ ಜಿಪಂ ಅಧ್ಯಕ್ಷ ಎಂ.ಎನ್.ನಾಗರಾಜು ಜೆಡಿಎಸ್ ಸೇರ್ಪಡೆಗೊಂಡರು. ಶಾಸಕಿ ಅನಿತಾ ಕುಮಾರಸ್ವಾಮಿ, ಸಮಾಜ ಸೇವಕ ಅನಿಲ್ ಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಾಮಕೃಷ್ಣ, ಹಾರೋಹಳ್ಳಿಯ ಪುರೊಷೋತ್ತಮ್, ಅನಂತು, ಮೇಡಮಾರನಹಳ್ಳಿ ಕುಮಾರ್, ರಾಮು ಲಕ್ಷ್ಮಣ್ ಮಲ್ಲಯ್ಯ, ಪ್ರವೀಣ್, ನಾಗೇಶ್, ಮಹದೇವ್ ಇದ್ದರು.

    ಕಳೆದ ಬಾರಿ ಅಪಪ್ರಚಾರ: ಕಳೆದ ಬಾರಿ ಅಪಪ್ರಚಾರ ನಡೆಸಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿತ್ತು. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹಾಲಿಗೆ ಪ್ರೋತ್ಸಾಹಧನ ನೀಡುವ ಜತೆಗೆ ಪಶು ಆಹಾರವನ್ನು ನೀಡಲಾಗುತ್ತದೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಹಲವು ಯುವಕರ ಒತ್ತಾಯದ ಮೇರೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿದಿದ್ದಾರೆ. ಮಂಡ್ಯದಲ್ಲಾದ ರೀತಿ ಇಲ್ಲಾಗುವುದಿಲ್ಲ. ನಾನು ಯಾವುದೇ ರೀತಿಯ ಬಂಡೆ ಗ್ರಾನೈಟ್ ಲೂಟಿ ಮಾಡಿ ಹಣ ಸಂಪಾದಿಸಿಲ್ಲ. ನನ್ನ ಸಂಪಾದನೆ ಏನಿದ್ದರೂ ಜಿಲ್ಲೆಯ ಜನತೆಯ ಪ್ರೀತಿ ಮಾತ್ರ. ನಿಮ್ಮ ಮಡಿಲಿಗೆ ನನ್ನ ಮಗನನ್ನು ಹಾಕಿದ್ದೇನೆ. ನೀವೇ ಸಾಕಿ ಸಲಹಬೇಕು ಎಂದು ಹೇಳಿದರು.


    ಅನೈತಿಕ ರಾಜಕಾರಣಕ್ಕೆ ಜಿಲ್ಲೆಯ ಜನ ಆಸ್ಪದ ನೀಡಲ್ಲ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಈ ಕ್ಷೇತ್ರದ ಜನರು ನಾನು ಅಭ್ಯರ್ಥಿಯಾಗಬೇಕೆಂದು ಬಯಸಿದ್ದಾರೆ. 1994ರಲ್ಲಿ ದೇವೇಗೌಡರು ರಾಮನಗರ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಬಳಿಕ ಕುಮಾರಣ್ಣ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2006ರಲ್ಲಿ ನಿಮ್ಮ ಆಶೀರ್ವಾದದಿಂದ ಸಿಎಂ ಆದರು. ಕೆಂಗಲ್ ಹನುಮಂತಯ್ಯನವರು ಈ ಕ್ಷೇತ್ರದಿಂದ ಗೆದ್ದು ಸಿಎಂ ಆಗಿದ್ದರು. ಇಂತಹ ಮಹಾನ್ ನಾಯಕರ ಪ್ರತಿನಿಧಿಸಿದ್ದ ಕ್ಷೇತ್ರ ರಾಮನಗರ. ಈ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾ ಇರೋದು ನನ್ನ ಸೌಭಾಗ್ಯ. ಇಲ್ಲಿಯೂ ಮಂಡ್ಯ ಕ್ಷೇತ್ರದಲ್ಲಿ ನಡೆದ ಅನೈತಿಕ ರಾಜಕೀಯ ನಡೆಯುತ್ತಿದೆ. ಅದಕ್ಕೆ ಈ ಕ್ಷೇತ್ರದ ಜನತೆ ಆಸ್ಪದ ನೀಡುವುದಿಲ್ಲ ಎಂದರು. ಇನ್ನು ಹಾರೋಹಳ್ಳಿಯಲ್ಲಿ ನಿಖಿಲ್ ಭಾಷಣದ ಮಧ್ಯದಲ್ಲಿ ಬಂದ ಅನಿತಾ ಕುಮಾರಸ್ವಾಮಿ ಅವರನ್ನು ಕಂಡು ಕಾರ್ಯಕರ್ತರು ಜಯಘೋಷ ಮೊಳಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts