More

    ಮತ್ತೆ ಮುನ್ನೆಲೆಗೆ ಬಂದ ಆರೋಗ್ಯ ವಿವಿ

    ರಾಮನಗರ: ಹದಿಮೂರು ವರ್ಷಗಳ ಹಿಂದೆ ಘೊಷಣೆಯಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿರ್ಮಾಣ ಕಾಮಗಾರಿ ಕನಸಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತೊಮ್ಮೆ ನೀರೆರೆದ್ದಾರೆ.

    ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಘೊಷಣೆಯಾದ ಈ ಯೋಜನೆ ಇನ್ನೂ ಜಾರಿಗೆ ಬರದೆ ಇರುವುದು ಈ ಭಾಗದ ಜನರ ಕನಸು ಕಮರುವಂತೆ ಮಾಡಿತ್ತು. ಆದರೆ ಇದೀಗ ಇದೇ ಕನಸಿಗೆ ಸಚಿವರು ಮತ್ತೊಮ್ಮೆ ರೆಕ್ಕೆ ಕಟ್ಟಿದ್ದು, ಇನ್ನೆಷ್ಟು ದಿನ ಹಾರುವುದೋ ಕಾದು ನೋಡಬೇಕಿದೆ.

    ಏನಿದು ಯೋಜನೆ?: 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ರಾಮನಗರದ ಅರ್ಚಕರಹಳ್ಳಿ ಬಳಿ ಸುಮಾರು 216.16 ಎಕರೆ ವಿಸ್ತೀರ್ಣದಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಯೋಜನೆಯನ್ನು ಘೋಷಿಸಲಾಗಿತ್ತು. ಇದಕ್ಕಾಗಿ ಬಜೆಟ್​ನಲ್ಲಿ ಸುಮಾರು 330 ಕೋಟಿ ರೂ. ಮಂಜೂರು ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು.

    ಯೋಜನೆಯಂತೆ ಇಲ್ಲಿ ಆಡಳಿತ ಭವನ, ವೈದ್ಯಕೀಯ, ದಂತ, ನರ್ಸಿಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿನಿಲಯ, ವಸತಿ ಗೃಹಗಳು ಸೇರಿದಂತೆ 16 ಬೃಹತ್ ಕಟ್ಟಡಗಳು ತಲೆ ಎತ್ತಬೇಕಿತ್ತು. ಈ ಯೋಜನೆ ಜಾರಿಯಿಂದ ಹಳೇ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳ ಜನತೆಗೆ ವೈದ್ಯಕೀಯ ಸೇವೆಗೆ ಹೆಚ್ಚು ಅನುಕೂಲವಾಗಲಿದೆ.

    ನನೆಗುದಿಗೆ: ವಿವಿ ನಿರ್ವಣಕ್ಕೆ ವಶಪಡಿಸಿಕೊಳ್ಳಲಾದ ಖಾಸಗಿ ಜಮೀನಿನ ಮಾಲೀಕರಿಗೆ ನೀಡಲಾಗಿರುವ ಪರಿಹಾರದ ಮೊತ್ತ ಕಡಿಮೆ ಎಂದು ಸುಮಾರು 72 ಎಕರೆ ಪ್ರದೇಶದ 17 ಭೂ ಮಾಲೀಕರು ಸವೋಚ್ಚ ನ್ಯಾಯಾಲಯದವರೆಗೂ ಹೋರಾಟ ಮಾಡಿದ್ದಾರೆ. ಕಳೆದ 10 ವರ್ಷಗಳಿಂದಲೂ ಇವರನ್ನು ಮನವೊಲಿಸುವ ಕಾರ್ಯ ನಡೆಯುತ್ತಲೇ ಇದೆ. ಆದರೆ, ಎಲ್ಲ ಪ್ರಯತ್ನಗಳ ಹೊರತಾಗಿಯೂ ಪರಿಹಾರ ವಿಚಾರದಲ್ಲಿ ಯಾವುದೇ ರಾಜಿಗೆ ಒಪ್ಪದ ರೈತರು ಪಟ್ಟು ಹಿಡಿದು ಕಾನೂನು ಹೋರಾಟ ಮುಂದುವರಿಸಿರುವುದರಿಂದ ಯೋಜನೆ ಜಾರಿಯಾಗಿಲ್ಲ.

    ಕೋವಿಡ್ ಕೇಂದ್ರವಾಯ್ತು?: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಪರಿಶ್ರಮದ ಫಲವಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಡಳಿತ ಕಚೇರಿಯನ್ನು ರಾಮನಗರದ ಕಂದಾಯ ಭವನಕ್ಕೆ ವರ್ಗಾವಣೆ ಮಾಡುವ ಆದೇಶ ನೀಡಿದ್ದರು. ಆದರೆ, ಇದು ಆದೇಶ ಪತ್ರದಲ್ಲಿ ಮಾತ್ರವೇ ಉಳಿದಿದೆ. ರಾಜೀವ್ ಗಾಂಧಿ ಆರೋಗ್ಯ ಕೇಂದ್ರದ ಆಡಳಿತ ಕಚೇರಿ ಆಗಬೇಕಿದ್ದ ಕಂದಾಯ ಭವನ ಸದ್ಯ ಕೋವಿಡ್ ರೆಫರಲ್ ಆಸ್ಪತ್ರೆಯಾಗಿ ಬದಲಾಗಿದೆ.

    ಮೆಡಿಕಲ್ ಕಾಲೇಜು ಕೈತಪ್ಪಿತು

    ರಾಮನಗರಕ್ಕೆ ಆರೋಗ್ಯ ವಿವಿ ಮಂಜೂರಾಗಿದೆ ಎನ್ನುವ ವಾದವನ್ನೇ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಥಳಾಂತರ ಮಾಡಿತು. ಇದರಿಂದಾಗಿ ಅತ್ತ ವಿವಿಯೂ ಇಲ್ಲ, ಇತ್ತ ಮೆಡಿಕಲ್ ಕಾಲೇಜೂ ಇಲ್ಲ ಎನ್ನುವಂತಾಗಿದ್ದು, ಸರ್ಕಾರ ಈಗಲಾದರೂ ವಿವಿ ನಿರ್ವಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

    ಕಚೇರಿ ನಿರ್ಮಾಣ ಆಗಲಿಲ್ಲ

    ಒಂದೆಡೆ ವಿವಿ ಸ್ಥಳಾಂತರಕ್ಕೆ ಇದ್ದ ತೊಡಕುಗಳು ಹಾಗೇ ಇದ್ದರೂ, ಮತ್ತೊಂದೆಡೆ ವಿವಿಯ ಆಡಳಿತ ಕಚೇರಿ ನಿರ್ವಣದ ಮಾತುಗಳನ್ನು ಆಡಳಿತ ಮಂಡಳಿ ಹೇಳಿತ್ತು. ಈ ಸಂಬಂಧ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದ ವಿವಿ ಕುಲಸಚಿವ ಡಾ. ಎಸ್. ಸಚ್ಚಿದಾನಂದ, ರಾಮನಗರದಲ್ಲಿ 71 ಎಕರೆ ಪ್ರದೇಶದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ವಣವಾಗಲಿದೆ ಎಂದು ತಿಳಿಸಿದ್ದರು. ಆದರೆ ಇದೂ ಕಾರ್ಯರೂಪಕ್ಕೆ ಬರದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

    ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಆದಷ್ಟು ಶೀಘ್ರದಲ್ಲೇ ವಿವಿ ಕಾರ್ಯಾರಂಭ ಮಾಡಲಿದೆ.

    | ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts