More

    ಸ್ವದೇಶಿ ಚಿಂತನೆಯ ಪ್ರಖರ ಶಕ್ತಿ ರಾಜೀವ್ ದೀಕ್ಷಿತ್​

    ಪಾಶ್ಚಾತ್ಯ ಜೀವನಶೈಲಿಯನ್ನು ಕುರುಡಾಗಿ ಅನುಕರಿಸುತ್ತ ಭಾರತೀಯರು ತಮ್ಮತನವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಹುತೇಕ ಮರೆತೇ ಹೋಗಿದ್ದ ಸ್ವದೇಶೀ ಚಿಂತನೆಯನ್ನು ಪುನರುತ್ಥಾನಗೊಳಿಸಿ ನಮ್ಮ ಪರಂಪರೆಯನ್ನೂ ಮೌಲ್ಯಗಳನ್ನೂ, ಈ ದೇಶದ ಘನತೆ, ಹಿರಿಮೆ ಹಾಗೂ ವಾಸ್ತವತೆಯನ್ನು ನಮ್ಮ ಅರಿವಿನ ಹರವಿಗೆ ತಂದಿತ್ತ ಸಾಧಕ ರಾಜೀವ್ ದೀಕ್ಷಿತ್.

    ಭಾರತದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಸಾವಿರಾರು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸಿದ್ದಲ್ಲದೆ, ಸಾವಿನ ಹಾದಿ ಕಾಣುತ್ತಿದ್ದ ನಮ್ಮ ರೈತರ ಜೀವ ಉಳಿಸುವ ಸಲುವಾಗಿ ವಿದೇಶೀ ಆಚರಣೆ ಜೀವನಶೈಲಿಗಳನ್ನು ತಿರಸ್ಕರಿಸುವ ಕರೆ ನೀಡಿ ಸ್ವಾತಂತ್ರ್ಯ ಉಳಿಸುವ ಹಾದಿಯಲ್ಲೇ ಆಜಾದಿ ಬಚಾವೋ ಆಂದೋಲನವನ್ನು ಮುನ್ನಡೆಸಿದರು. ನಮ್ಮದೇ ಪ್ರಾಚೀನ ಗುರುಕುಲ ಪದ್ಧತಿಯನ್ನು ಉತ್ತೇಜಿಸುವ ಶಾಲೆಗಳನ್ನು ಪ್ರೋತ್ಸಾಹಿಸಿದರು.

    ವಿದೇಶಿ ಸಾಲದಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮಗಳು, ನಮ್ಮ ಕೃಷಿ, ಉದ್ಯೋಗ, ಸೇವಾಕ್ಷೇತ್ರ, ಬ್ಯಾಂಕಿಂಗ್ ಮುಂತಾದ ಎಲ್ಲ ಮುಖ್ಯ ಕ್ಷೇತ್ರಗಳಲ್ಲೂ ಆಗುತ್ತಿರುವ ಭ್ರಷ್ಟಾಚಾರದ ಅಟ್ಟಹಾಸಕ್ಕೆ ಕಾರಣ ನಾವು ಅನುಸರಿಸುತ್ತಿರುವ ಅವೈಜ್ಞಾನಿಕ ತೆರಿಗೆ ಪದ್ಧತಿಯೆಂದೂ, ಇದಕ್ಕೆ ಪರಿಹಾರ ನಮ್ಮದೇ ಆದ ರೀತಿಯಲ್ಲಿನ ವಿಕೇಂದ್ರೀಕರಣ ಮತ್ತು ಚಾಣಕ್ಯನಂತಹ ದಾರ್ಶನಿಕರು ತೋರಿಸಿಕೊಟ್ಟ ಸಶಕ್ತ ಭಾರತೀಯ ರೀತಿಯಲ್ಲಿನ ಪರಿವರ್ತನೆ ಎಂಬುದೂ ಅವರ ಸ್ಪಷ್ಟ ನಿಲುವಾಗಿತ್ತು.

    ‘ಆಜಾದಿ ಬಚಾವೋ ಆಂದೋಲನ’ ಸಂಘಟನೆ ಸ್ಥಾಪಿಸಿ ಈಸ್ಟ್ ಇಂಡಿಯಾ ಕಂಪನಿಯಿಂದ ಹಿಡಿದು ಇಂದಿಗೂ ವ್ಯಾಪಾರದ ಹೆಸರಲ್ಲಿ ವಿದೇಶಿ ಕಂಪನಿಗಳು ಮಾಡುತ್ತಿರುವ ಅನೇಕ ಮೋಸಗಳನ್ನು ಜನರಿಗೆ ಸರಳವಾಗಿ ದೇಶಸಂಚಾರದ ಮೂಲಕ ತಮ್ಮ 15,000ಕ್ಕೂ ಹೆಚ್ಚಿನ ಉಪನ್ಯಾಸಗಳಿಂದ ತಿಳಿಸಿದರು. ಭಾರತದಲ್ಲಿ ಆಗತಾನೆ ಶುರುವಾಗಿದ್ದ ಹೊಸ ಮುಕ್ತ ಆರ್ಥಿಕ ನೀತಿಯ ದುಷ್ಟರಿಣಾಮಗಳಾದ ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ, ಸಣ್ಣ ಕೈಗಾರಿಕೆಗಳಿಗಾಗಿರುವ ಹೊಡೆತ ಇವುಗಳನ್ನು ಎಲ್ಲರಿಗೂ ತಿಳಿಸುತ್ತ, ಸಮಸ್ಯೆಗಳಿಗೆ ಪರಿಹಾರವೆಂಬಂತೆ ಸ್ವದೇಶಿ ಚಿಂತನೆ, ಸ್ವಾವಲಂಬನೆ, ಸ್ವತಂತ್ರ ಆರ್ಥಿಕತೆ, ವಿಕೇಂದ್ರಿಕರಣ ಎಂಬ ವಿಚಾರಧಾರೆಗಳನ್ನು ಬಿತ್ತುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ ದೇಶದಾದ್ಯಂತ ಹೊಸ ಅಲೆಯನ್ನು ಸೃಷ್ಟಿ ಮಾಡಿ ಅವರು 17ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ‘ಆಜಾದಿ ಬಚಾವೋ ಆಂದೋಲನ’ವನ್ನು ಹುಟ್ಟು ಹಾಕಿದರು.

    ರಾಜೀವ್ ದೀಕ್ಷಿತರು ಇಡಿಯ ಭಾರತದ ಸಮಸ್ಯೆಗಳನ್ನು ಕುಲಂಕಶವಾಗಿ ಅಧ್ಯಯನ ಮಾಡಿದ ಪರಿಣಾಮವಾಗಿ ಹಲವು ವಿಷಯಗಳ ಬಗ್ಗೆ ಹೊಸಬೆಳಕು ಚೆಲ್ಲಿದರು. ಭಾರತದ ನೈಜ ಇತಿಹಾಸ, ಸ್ವಾತಂತ್ರ್ಯ ಎಂಬ ಹೆಸರಲ್ಲಾದ ಅಧಿಕಾರದ ಹಸ್ತಾಂತರ, ಗೋ ಸಂರಕ್ಷಣೆ, ರಾಜಕಾರಣಿಗಳು ಮಾಡುತ್ತಿರುವ ಲೂಟಿ, ವಿಜ್ಞಾನ, ಭಾರತದ ಗತವೈಭವ, ದೇಶದ ಆರ್ಥಿಕತೆ, ಸಾವಯವ ಕೃಷಿ, ವಾಗ್ಭಟ ಮಹರ್ಷಿಯ ಆರೋಗ್ಯ ಸೂತ್ರಗಳು, ದೇಶಿಯ ಚಿಂತನೆಗಳು, ಅಂತಾರಾಷ್ಟ್ರಿಯ ಒಪ್ಪಂದಗಳು, ಆಯುರ್ವೇದ ಚಿಕಿತ್ಸೆ, ಹೋಮಿಯೋಪಥಿ ಚಿಕಿತ್ಸೆ, ಸ್ವಾತಂತ್ರ್ಯಯೋಧರ ಬಲಿದಾನ, ಕಾರ್ಗಿಲ್ ವೀರಗಾಥೆ, ಗ್ರಾಮ ಆಧಾರಿತ ಜೀವನ ವ್ಯವಸ್ಥೆ, ಪರಿಸರ ಸಂರಕ್ಷಣೆ, ಮಾತೃಭಾಷೆಯ ಮಹತ್ವ, ವಿದೇಶಿ ಕಂಪನಿಗಳ ಹುನ್ನಾರ… ಹೀಗೆ ಹಲವು ವಿಷಯಗಳಲ್ಲಿ ಅವರು ಮಂಡಿಸಿದ ವಿಚಾರಗಳು ವಾಸ್ತವವನ್ನು ತೆರೆದಿಟ್ಟು, ಅರಿವನ್ನು ಹೆಚ್ಚಿಸಿದವು. ರಾಜೀವ್ ದೀಕ್ಷಿತರು 2010 ನವೆಂಬರ್ 30ರಂದು ಛತ್ತೀಸ್​ಗಢದ ಭಿಲಾಯನಲ್ಲಿ 42ನೇ ವಯಸ್ಸಿನಲ್ಲಿ ಭಾರತ ಪುನರ್​ನಿರ್ವಣದ ಯಜ್ಞಕ್ಕೆ ಆಹುತಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts