More

    ರಾಜಸ್ಥಾನ ರಾಯಲ್ಸ್‌ಗೆ ಇಂದು ಸಿಎಸ್‌ಕೆ ಸವಾಲು

    ಶಾರ್ಜಾ: ಪ್ರಮುಖರ ಅನುಪಸ್ಥಿತಿ ಎದುರಿಸುತ್ತಿರುವ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಹಾಗೂ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್-13ರ ಪಂದ್ಯದಲ್ಲಿ ಮಂಗಳವಾರ ಎದುರಾಗಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಎಂಎಸ್ ಧೋನಿ ಬಳಗ ಸತತ 2ನೇ ಜಯದ ನಿರೀಕ್ಷೆಯಲ್ಲಿದೆ.
    ರಾಜಸ್ಥಾನ ರಾಯಲ್ಸ್ ತಂಡ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಸೇವೆಯನ್ನು ಮೊದಲ ಪಂದ್ಯಕ್ಕೆ ಕಳೆದುಕೊಂಡಿದೆ. ಕುಟುಂಬ ಸದಸ್ಯರೊಂದಿಗೆ ಇಂಗ್ಲೆಂಡ್‌ನಿಂದ ಬಂದ ಬಟ್ಲರ್ 6 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿರುವುದರಿಂದ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಆಲ್ರೌಂಡರ್ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್‌ನಿಂದ ಇನ್ನೂ ಯುಎಇಗೆ ಆಗಮಿಸಿಲ್ಲ.
    ಕನ್ನಡಿಗರಾದ ರಾಬಿನ್ ಉತ್ತಪ್ಪ, ಆಲ್ರೌಂಡರ್‌ಗಳಾದ ಶ್ರೇಯಸ್ ಗೋಪಾಲ್ ಹಾಗೂ ಅನಿರುದ್ಧ ಜೋಷಿ ಹೊಂದಿರುವ ರಾಜಸ್ಥಾನ ರಾಯಲ್ಸ್ ಬಲಿಷ್ಠ ಸಿಎಸ್‌ಕೆ ಸವಾಲಿಗೆ ಸಜ್ಜಾಗಿದೆ. ಟೂರ್ನಿಯ ಮುಂದಿನ ಪಂದ್ಯಗಳಿಗೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಈ ಪಂದ್ಯ ರಾಜಸ್ಥಾನ ಪಾಲಿಗೆ ಮಹತ್ವ ಪಡೆದಿದೆ. ಟೂರ್ನಿಯಲ್ಲಿ ಇದುವರೆಗೂ ಸಿಎಸ್‌ಕೆ ತಂಡವೇ ಮೇಲುಗೈ ಹೊಂದಿದ್ದರೂ ರಾಜಸ್ಥಾನ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.
    ಮತ್ತೊಂದೆಡೆ, ಅನುಭವಿಗಳಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಹಾಗೂ ಡ್ವೇನ್ ಬ್ರಾವೊ ಅನುಪಸ್ಥಿತಿ ನಡುವೆಯೂ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಸಿಎಸ್‌ಕೆ ಗೆಲುವಿನ ಲಯ ಕಾಯ್ದುಕೊಳ್ಳುವ ಕನಸಿನಲ್ಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಲ್ರೌಂಡರ್ ಬ್ರಾವೊ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಇನ್ನೂ 2 ಪಂದ್ಯಗಳಿಗೆ ಲಭ್ಯರಾಗುವುದಿಲ್ಲ ಎಂದು ಕೋಚ್ ಸ್ಟೀನ್ ಫ್ಲೆಮಿಂಗ್ ಈಗಾಗಲೆ ತಿಳಿಸಿದ್ದಾರೆ.

    ಟೀಮ್ ನ್ಯೂಸ್:
    ರಾಜಸ್ಥಾನ ರಾಯಲ್ಸ್: ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ನಾಯಕ ಸ್ಟೀವನ್ ಸ್ಮಿತ್ ಸಂಪೂರ್ಣ ಗುಣಮುಖರಾಗಿದ್ದು, ಸಿಎಸ್‌ಕೆ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ತಂಡದ ಕೋಚ್ ಆಂಡ್ರ್ಯೋ ಮೆಕ್‌ಡೊನಾಲ್ಡ್ ಖಚಿತಪಡಿಸಿದ್ದಾರೆ. ಸ್ಮಿತ್ ಲಭ್ಯರಾಗುತ್ತಿರುವುದು ತಂಡದ ಪಾಲಿಗೆ ಸಮಾಧಾನಕರ ಸಂಗತಿ. ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಸ್ಟೀವನ್ ಸ್ಮಿತ್ ತಂಡದ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ. ಬಟ್ಲರ್ ಅನುಪಸ್ಥಿತಿಯಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸುವ ಅವಕಾಶವಿದೆ. ಜೈದೇವ್ ಉನಾದ್ಕತ್ ಹಾಗೂ ಜ್ರೋಾ ಆರ್ಚರ್ ವೇಗದ ಬೌಲಿಂಗ್ ವಿಭಾಗದ ಸಾರಥ್ಯದ ವಹಿಸಲಿದ್ದಾರೆ. ಕನ್ನಡಿಗರಾದ ಶ್ರೇಯಸ್ ಗೋಪಾಲ್ ಹಾಗೂ ರಾಬಿನ್ ಉತ್ತಪ್ಪ ಕಣಕ್ಕಿಳಿಯಲಿದ್ದಾರೆ.        ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ರಾಬಿನ್ ಉತ್ತಪ್ಪ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ಟಾಮ್ ಕರ‌್ರನ್/ಆಂಡ್ರ್ಯೋ ಟೈ, ಜ್ರೋಾ ಆರ್ಚರ್, ಜೈದೇವ್ ಉನಾದ್ಕತ್, ಅಂಕಿತ್ ರಜಪೂತ್/ವರುಣ್ ಆರನ್.

    ಚೆನ್ನೈ ಸೂಪರ್ ಕಿಂಗ್ಸ್: ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಸಿಎಸ್‌ಕೆ ತಂಡದಲ್ಲಿ ಬದಲಾವಣೆ ನಿರೀಕ್ಷೆ ಕಷ್ಟ. ಡ್ವೈನ್ ಬ್ರಾವೊ ಸ್ಥಾನವನ್ನು ಸ್ಯಾಮ್ ಕರ‌್ರನ್ ಸಮರ್ಥವಾಗಿ ತುಂಬಿದ್ದಾರೆ. ಆರಂಭಿಕರು ಮೊದಲ ಪಂದ್ಯದಲ್ಲಿ ವಿಲರಾದರೂ ಬದಲಾವಣೆ ಸಾಧ್ಯತೆ ಕಡಿಮೆ. ಕೋವಿಡ್-19ರಿಂದ ಋತುರಾಜ್ ಗಾಯಕ್ವಾಡ್ ಚೇತರಿಸಿಕೊಂಡಿದ್ದು, ಮುರಳಿ ವಿಜಯ್ ಅಥವಾ ಕೇದಾರ್ ಜಾಧವ್ ಬದಲಿಗೆ ಸ್ಥಾನ ಪಡೆಯಬಹುದು.
    ಸಂಭಾವ್ಯ ತಂಡ: ಮುರಳಿ ವಿಜಯ್, ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್ ಧೋನಿ (ವಿಕೀ, ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರ‌್ರನ್, ಕೇದಾರ್ ಜಾಧವ್, ಪೀಯುಷ್ ಚಾವ್ಲಾ, ಲುಂಗಿ ಎನ್‌ಗಿಡಿ,

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಮುಖಾಮುಖಿ: 21
    ಸಿಎಸ್‌ಕೆ: 14
    ರಾಜಸ್ಥಾನ: 7

    =========================
    *ತರಬೇತಿಗೆ ಹಾಜರಾದ ಋತುರಾಜ್ ಗಾಯಕ್ವಾಡ್
    ದುಬೈ: ಕೋವಿಡ್-19 ರಿಂದ ಸಂಪೂರ್ಣ ಗುಣಮುಖರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ತರಬೇತಿಗೆ ಹಾಜರಾದರು. ಎರಡು ಕೋವಿಡ್-19ರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಋತುರಾಜ್ ತಂಡ ಸೇರಿಕೊಂಡರು. 23 ವರ್ಷದ ಮಹಾರಾಷ್ಟ್ರ ಋತುರಾಜ್‌ಗೆ ಕರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 2 ವಾರಗಳಿಂದ ಕ್ವಾರಂಟೈನ್‌ನಲ್ಲಿದ್ದರು. ಇದರಿಂದ ಶನಿವಾರ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಿಂದಲೂ ದೂರ ಉಳಿದಿದ್ದರು. ಋತುರಾಜ್ ಗಾಯಕ್ವಾಡ್, ದೀಪಕ್ ಚಹರ್ ಸೇರಿದಂತೆ ಚೆನ್ನೈ ತಂಡದ 13 ಮಂದಿಗೆ ಕೋವಿಡ್-19 ವೈರಸ್ ಕಾಣಿಸಿಕೊಂಡಿತ್ತು.
    =========================

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts