

ನವದೆಹಲಿ: ದೇಶದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕಣೆ ನೀತಿ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದು, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಕ್ಕು 'ಓಟ್ ಚೋರಿ' ಎಂಬ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
ಈಗ ಈ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳನ್ನು ಲಂಚದ ರೂಪದಲ್ಲಿ ನೀಡಿದ್ದಾಗಿ ಗಂಭೀರ್ ಆರೋಪ ಮಾಡಿದ್ದಾರೆ.
ಮಂಗಳವಾರ (ಅ.13) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್, ಈ ಹಿಂದೆ ಕಾಂಗ್ರೆಸ್ ಸರ್ಕಾರ ಚುನಾವಣಾ ಆಯುಕ್ತರನ್ನು ಯಾವ ರೀತಿ ಬಳಸಿಕೊಂಡಿದೆ ಎನ್ನುವುದನ್ನು ಮರೆತಂತೆ ಕಾಣುತ್ತಿದೆ. ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸುವ, ಚುನಾವಣೆಗೆ ಸ್ಪರ್ಧಿಸದಂತೆ ಮಾಡುತ್ತಿದ್ದ ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷದಿಂದ ಟಿಕೆಟ್ ಅನ್ನು ಮತ್ತು ಪದ್ಮ ಪ್ರಶಸ್ತಿಗಳನ್ನು ಹಂಚುತ್ತಿದ್ದರೆಂದು ಗಂಭೀರ ಆರೋಪ ಹೊರೆಸಿದ್ದಾರೆ.
ಎಲ್.ಕೆ. ಅಡ್ವಾನಿ ವಿರುದ್ಧ ಟಿ.ಎನ್. ಸೆಶನ್ ಅವರನ್ನು ಇದೇ ಕಾಂಗ್ರೆಸ್ ಚೂಬಿಟ್ಟಿತ್ತು. ನಂತರ ಅವರನ್ನು ಗುಜರಾತ್ನ ಗವರ್ನರ್ನಾಗಿ ಮಾಡಲಾಗಿತ್ತು. ಎಂ.ಎಸ್.ಗಿಲ್ರಿಗೆ ಪದ್ಮ ವಿಭೂಷಣ ಪ್ರಶಸ್ತಿ ಮೂಲಕ ಗೌರವಿಸಲಾಗಿತ್ತು ಎಂದಿದ್ದಾರೆ. 2005 ರಲ್ಲಿ ನವೀನ್ ಚಾವ್ಲಾ ಅವರನ್ನು ಸೋನಿಯಾ ಗಾಂಧಿಯೇ ನೇಮಕ ಮಾಡಿದ್ದು, ಅವರ ನಿರ್ದೇಶನದಂತೆ ಅಂದಿನ ದಿನಗಳಲ್ಲಿ ಎಲ್ಲಾ ನಡೆಯುತ್ತಿತ್ತು. ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಏನು ಕ್ರಮ ಕೈಗೊಳ್ಳದ ಪರಿಸ್ಥಿತಿಯಲ್ಲಿದ್ದರೆಂದು ಗೋಯಲ್ ಆರೋಪಿಸಿದ್ದಾರೆ.
ನಂತರ, 2009 ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಎನ್. ಗೋಪಾಲಸ್ವಾಮಿ, ಹಿಂದಿನ ಆಯುಕ್ತ ನವೀನ್ ಚಾವ್ಲಾ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಾಗಿ ಆರೋಪಿಸಿದ್ದರು. ಆಗ ಅಂದಿನ ಪ್ರಧಾನಿ ಏನು ಕ್ರಮ ತೆಗೆದುಕೊಂಡಿರಲಲ್ಲ. ಅವರ ಕಾಂಗ್ರೆಸ್ ಅಧಿನಾಯಕಿ ಹೇಳಿದಂತೆ ಕೇಳುತ್ತಿದ್ದರು ಎಂದಿದ್ದಾರೆ.
ಆದರೆ, 2023 ರಲ್ಲಿ ನರೇಂದ್ರ ಮೋದಿ ಸರ್ಕಾರ ಆಯುಕ್ತರ ನೇಮಕಾತಿಯಲ್ಲಿ ಬದಲಾವಣೆ ತಂದಿತು. ಪ್ರಧಾನಿಗಳ ಜೊತೆ ವಿರೋಧ ಪಕ್ಷದ ನಾಯಕ ಕೂಡ, ಈ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆಂದು ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ಈಗ, ಚುನಾವಣಾ ಆಯುಕ್ತರ ಆಯ್ಕೆ ಮೊದಲಿನಂತೆ ಯಾವುದೋ ಒಂದು ಕುಟುಂಬದ ನಾಲ್ಕು ಜನ ಸೇರಿ ಆಯ್ಕೆ ಮಾಡುವುದಿಲ್ಲ. ಇದು ಈಗ ಪ್ರಜಾಪ್ರಭುತ್ವದ ತತ್ವದ ಆಧಾರದ ಮೇಲೆಯೇ ನಡೆಯುತ್ತಿದೆ. ಕೇವಲ ಆಡಳಿತ ಪಕ್ಷದವರು ಮಾತ್ರವಲ್ಲ, ವಿರೋಧ ಪಕ್ಷದ ನಾಯಕರು ಸೇರಿಕೊಂಡು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುತ್ತಾರೆಂದು ಕೇಂದ್ರ ಸಚಿವರು ಹೇಳಿದ್ದಾರೆ, (ಏಜೆನ್ಸೀಸ್).