More

  ರಾಜಧರ್ಮ ರಾಜನೀತಿ ಅಂಕಣ: ಅಲ್ಪಸ್ವಲ್ಪ, ಜ್ಞಾನೋದಯದ ಲಕ್ಷಣ ಕಾಣುತ್ತಿದೆ!

  ಈ ಸಲ ಅರವಿಂದ ಕೇಜ್ರಿವಾಲರು ಮೋದಿಯವರನ್ನು ಟೀಕಿಸಲಿಲ್ಲ. ಬೈಗಳದ ನುಡಿಮುತ್ತುಗಳು ಉದರಲಿಲ್ಲ. ಮೋದಿಯವರ ಪರೋಕ್ಷ ಅನುಸರಣೆ ಅವರಂತೆ ಅಭಿವೃದ್ಧಿಗೆ ಆದ್ಯತೆ, ಗಾಂಭಿರ್ಯ ನಡತೆ, ಅನುಸರಣೆ, ಹೊಂದಿಕೊಂಡು ಹೋಗುವಂತಹ ಮನೋಭಾವ, ನೈಜ ಫೆಡರಲ್ ಎಂಬ ಗಣರಾಜ್ಯನೀತಿಯ ಪರಿಪಾಲನೆ, ಇವರ ಗೆಲುವಿಗೆ ಕಾರಣವಾಯ್ತು ಎಂದು ಎಲ್ಲ ಪತ್ರಿಕೆಗಳೂ ಬರೆಯುತ್ತಿವೆ.

  ರಾಜಧರ್ಮ ರಾಜನೀತಿ ಅಂಕಣ: ಅಲ್ಪಸ್ವಲ್ಪ, ಜ್ಞಾನೋದಯದ ಲಕ್ಷಣ ಕಾಣುತ್ತಿದೆ!ಆತ ಏನೂ ಜ್ಞಾನಿಯೋ, ವಿಜ್ಞಾನಿಯೋ, ಸಂತನೋ, ಸುಧಾರಕನೋ, ಸಮರ್ಥ ವಾಗ್ಮಿಯೋ, ಅರೋಗ ದೃಢಗಾತ್ರನೋ ಅಲ್ಲ. ಕೊರಳಿಗೊಂದು ಮಫ್ಲರ್, ತಲೆಗೊಂದು ಬಿಳೀ ಟೋಪಿ-ಅದರ ಮೇಲೆ ಬರಹ, ಕೈಯಲ್ಲಿ ಪೊರಕೆ, ಆಕೃತಿಯಲ್ಲಿ ವಾಮನ, ತ್ರಿವಿಕ್ರಮನಂತೆ, ಮೂರನೆಯ ಚರಣದಲ್ಲಿ ದೆಹಲಿ ಗದ್ದುಗೆ ಹಿಡಿತ ಸಾಧಿಸಿದ ಒಬ್ಬ ರಾಜಕಾರಣಿ. ಇದು ಬೈಗಳದ, ತಿರಸ್ಕಾರದ ಮಾತೇನಲ್ಲ. ಹತ್ತಿರದಲ್ಲೇ ಮೋದಿ ರಾಜಧಾನಿಯಿದ್ದೂ, ಅದ್ದೂರಿ ಭಾಜಪ ಭಾಷಣಗಳು ನಡೆದು, ಅಲ್ಲಿ ಭಾಜಪ ನಾಯಕರು ಉದ್ರೇಕ ಭಾಷಣಗಳನ್ನು ಬಾಯಿ ಬಿಗಿಯಿಲ್ಲದೆ ಮಾಡಿದರು. ಜನತೆ (ನಂಬೋಣವೇ?) ಈ ಪೊರಕೆವೀರನನ್ನೇ ಆರಿಸಿ ತಂದರಲ್ಲ? ಏನಿದರ ಯಕ್ಷಪ್ರಶ್ನೆಯ ಗರ್ಭ? ಮೊದಲ ಸಲ ಆರಿಸಿ ಬಂದಾಗಿನ ಸೊಕ್ಕು, ಬಿಮ್ಮು, ಸವಾಲಿನ ಶೈಲಿ, ಅಹಂಕಾರ ನುಡಿಗಳು ಎಲ್ಲಿ ಹೋದವು? ಎರಡನೆಯ ಸಲದ್ದೊ? ದೆಹಲಿಯನ್ನು ಯೂನಿಯನ್ ಟೆರಿಟರಿ ದರ್ಜೆಯಿಂದ ಪೂರ್ಣರಾಜ್ಯ, ಫೂಲ್ ಸ್ಟೇಟಸ್ ಆಫ್ ಸ್ಟೇಟ್ ಪರಿಗಣನೆಗೆ ಒತ್ತಾಯಿಸಿ ಮಾಡಿದ ಹಠ, ತಂತ್ರ, ಆರ್ಭಟ, ಅಬ್ಬರ, ವೈರದ ಮಾತುಗಳು ಎಲ್ಲಿ ಮಾಯವಾದವು?

  ದೆಹಲಿಯಲ್ಲಿ ವಿಚಿತ್ರ! ಪೊಲೀಸರು ಕೇಂದ್ರ ಸರ್ಕಾರದ ವಶ. ಸರ್ಕಾರವೋ ಕೇಂದ್ರಾಡಳಿತ ಪ್ರದೇಶ. ಮುಖ್ಯಮಂತ್ರಿಗೆ ಬರೀ ಮೇಯರನ ಪದವಿ ಹೋಲುವ ಸ್ಥಾನಮಾನ. ಇದು ಪ್ರಶ್ನಾತೀತ. ಏಕೆಂದರೆ, ರಾಷ್ಟ್ರ ರಾಜಧಾನಿಯೇ ಅದು ಇದ್ದು ರಕ್ಷಣೆ ಕೇಂದ್ರ ವಶದಲ್ಲೇ ಇರಬೇಕೆಂಬ ಸಾಮರಸ್ಯ. ಇದು ತಿಳಿಯಲು ಈ ವ್ಯಕ್ತಿಗೆ ಈಗ ಹತ್ತು ವರ್ಷಗಳೇ ಆದವು. ಕೊಟ್ಟಷ್ಟು ಅಧಿಕಾರದಲ್ಲೇ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ, ಕೇಂದ್ರದೊಡನೆ ಗುದ್ದಾಟಕ್ಕೆ ಇಳಿಯದೇ, ಹೆಸರು ಮಾಡಿ, ಅಧಿಕಾರ ಉಳಿಸಿಕೊಂಡೂ ಕೀರ್ತಿವಂತನಾಗುವುದಲ್ಲವೇ ಭಾಗ್ಯ? ಬಲಿ ಚಕ್ರವರ್ತಿಗೂ ಬಾರದ ತಿಳಿವಳಿಕೆಯಯ್ಯ!

  ದುರ್ಯೋಧನನಿಗೆ ತೊಡೆ ಮುರಿದ ಮೇಲೂ ಬಾರದ ಜ್ಞಾನ, ಬಾಳಲು ಬೇಕಾದ್ದು ಒಂದೇ, ಸಾಯಲೆಂದೇ ಹುಟ್ಟಿಕೊಂಡ ಅಜ್ಞಾನ, ದುರಹಂಕಾರಾದಿಗಳು, ಈ ದೆಹಲಿಯ ಆಡಳಿತಗಾರನಿಗೆ ಬರದದ್ದು ಜನತೆಯ ಭಾಗ್ಯವೋ? ಆಕಸ್ಮಿಕವೋ? ಏನು? ರನ್ನನ ಗದಾಯುದ್ಧದಲ್ಲಿ ಭೀಮ, ತೊಡೆಮುರಿದು ಸಾಯುವ ಮುನ್ನ, ಕೊಳದಲ್ಲಿದ್ದ ದುರ್ಯೋಧನನನ್ನು ಕಿವಿಮಾತುಗಳಿಂದ ಚುಚ್ಚುವ ವಾಕ್ ಸರಣಿ ನೆನಪಾಗುತ್ತದೆ. ದ್ರೌಪದಿಮಾನ ಹರಣದ ಸೊಕ್ಕು ಎಲ್ಲಿತ್ತೊ? ಪಾಂಡವರನ್ನು ಅಡ್ಡಗಟ್ಟಿ ಸುತ್ತಾಡಿಸಿದ ‘ತಿರ›ನೆತರುಪಿ’ ಸೊಕ್ಕು ಎಲ್ಲಿತ್ತೋ? ಇತ್ಯಾದಿ. (ಮೂರು ವಾಕ್ಯಗಳ ಛಾಯೆ ಮಾತ್ರ ಇದು). ಕೇಜ್ರಿವಾಲರಿಗೆ ಅಣ್ಣಾ ಹಜಾರೆ ಬೆಂಬಲ ಒಂದೊಮ್ಮೆ ಇತ್ತು. ಇವರ ಪ್ರಥಮ ಗೆಲುವಿನಲ್ಲಿ ಮೋದಿಶತ್ರುಗಳ, ಒಳ-ಹೊರ ಸಹಕಾರ ಬಹಳ ಇತ್ತು ಎಂಬ ಮಾತೂ ಇತ್ತು. ಬೊಕ್ಕಸ ಲೂಟಿಗಾಗಿ ಸಿಕ್ಕ ಸಿಕ್ಕ ‘ಉಚಿತ’ ಸೌಲಭ್ಯಗಳ (ನೀರು, ಲೈಟು, ತೆರಿಗೆ) ಭರವಸೆಯೂ ಆಗ ಕೆಲಸ ಮಾಡಿತ್ತು ಎಂಬ ಮಾತಿದೆ. ಈಗ ದೆಹಲಿಯ ಇಸ್ಲಾಮಿಯಾದ ಮೋದಿದ್ವೇಷವೂ, ಸಿಐಎ ಸಹಾಯವೂ, ಅಫ್ ಕೋರ್ಸ್ ಕಾಂಗ್ರೆಸ್ಸಿಗರ ಬೆಂಬಲವು ಇತ್ತು ಎಂಬ ಮಾತೂ ಆಗ ಕೇಳಿ ಬಂದಿತ್ತು.

  ಪ್ರಥಮಾವಕಾಶ ಮುಖ್ಯಮಂತ್ರಿಯಾದ ಮೇಲಂತೂ ದಿನಾ ಮೋದಿ ವಿರುದ್ಧ ಭಾಷಣ, ಉತ್ತರಕುಮಾರನನ್ನೂ ಮೀರಿಸಿ ನಾಚಿಸುವ ಶೈಲಿಯ-ಪತ್ರಿಕೆಗಳು ಟೀಕಿಸಿ ಅಪಹಾಸ್ಯ ಮಾಡಿದ್ದವಲ್ಲ? ಇನ್ನೂ ಹಿಂದೆ ಹೋಗಿ. ಸಾಹಿಬ್ ಸಿಂಗ್ ವರ್ವ ಭಾಜಪದ ಮುಖ್ಯಮಂತ್ರಿಯಾಗಿ-ಈರುಳ್ಳಿ ಬೆಲೆಏರಿಕೆ, ಕೃತಕಾಭಾವ ಸೃಷ್ಟಿಯಿಂದ, ಹಾಗೂ ಪ್ರತಿಸ್ಪರ್ಧಿ ಮದನಲಾಲ್ ಖುರಾನಾ ಅವರ ಅಸಹಕಾರದಿಂದ ಅಂದು ಅಧಿಕಾರ ಕಳಕೊಂಡರು. ನಂತರ ಶೀಲಾ ದೀಕ್ಷಿತರ ಶಾಂತ ಕಾಲ. ಕಾಂಗ್ರೆಸ್ಸಿಗೆ ಗೌರವ ತಂದವರು. ಸಾರಿಗೆಯಲ್ಲಿ ಸುಧಾರಣೆ ಮೊದಲು ಜನಪ್ರಿಯಕಾರ್ರ್ಯಗಳಿಂದ ಇವರು ಕೀರ್ತಿ ಭಾಜನರಾದದ್ದು ಅನೇಕ ಕಾಂಗ್ರೆಸ್ಸಿಗರಿಗೇ ಹೊಟ್ಟೆಯೂರಿ ತಂದರೂ, ಈಕೆ ನಿಭಾಯಿಸಿದರು, ಈಸಿದರು. ಅದು ಕಾಂಗ್ರೆಸ್ ಜಾಯಮಾನವಾಗಿರಲಿಲ್ಲ.

  ನಿಜ ಕಾಂಗ್ರೆಸ್ ಜಾಯಮಾನವೇನು? ಉದಾಹರಣೆ ಕಾಣುತ್ತಿದ್ದೀರಲ್ಲ? ರಾಹುಲರ ಮಾತು, ಕೃತಿ, ಹಾರಾಟ, ಚೀರಾಟ, ಒದರಾಟ, ಪ್ರಮಾಣರಹಿತ ಆರೋಪಗಳು, ಕೋರ್ಟಿನಲ್ಲಿ ಆಗಾಗ ತಪ್ಪೊಪ್ಪಿಗೆ, ಹೊರಗೆ ಮಾತ್ರ ನಿಜವೇಷ, ಆವೇಷ, ಹಗೆತನದ ಕೆಡಿ ಮಾತುಗಳು, ಸುಳ್ಳಿನ ಕಂತೆಗಳ ಮಾತುಗಳು, ಸೋನಿಯಾ ಮತ್ತು ಭಂಟರ ರೀತಿಗಳು, ಒಂದು ಬಗೆ. ಕರ್ನಾಟಕದ ಅಬ್ದುಲ್ಲಾ ಅಯ್ಯನವರದು ಇನ್ನೊಂದು ನಮೂನೆ. ಇದು ವೋಟು ತರುವುದಿಲ್ಲ ಎಂಬುದು ಬಹಿರಂಗ ಸತ್ಯ. ಕಾಂಗ್ರೆಸ್ ಸಾಯಲು ಮೋದಿ ಏನೂ ಮಾಡಬೇಕಿಲ್ಲ. ಅದನ್ನು ರಾಹುಲ್ ‘ಜೀ’ ಅವರೇ ಮಾಡುತ್ತಿದ್ದಾರೆ. ಕರ್ನಾಟಕದ ಅಯ್ಯನವರ ಮಾತು ನೋಡಿ: ‘ಕಾಂಗ್ರೆಸ್ಸು ಸೋತರೂ ಪರವಾಗಿಲ್ಲ. ಭಾಜಪ ಅಧಿಕಾರಕ್ಕೆ ಬರಲಿಲ್ಲ, ಅದೇ ಸಾಧನೆ’ ಎಂಬುದು ಹೇಗಿದೆ. ದುರ್ಯೋಧನನ ವೈಶಂಪಾಯನ ಕೊಳದ ಬಳಿಯ ಸಾಯುವ ಮಾತಿನಂತೆಯೇ ಇದೆ. ‘ಪಾಂಡವರೇ, ಹೇ ಕೃಷ್ಣ ನಾನು ಸತ್ತರೂ, ನಿಮ್ಮ ಮೋಸದಿಂದ ಸತ್ತೆ. ಮೂವತ್ತಾರು ವರ್ಷ ನಿಮ್ಮ ತಲೆಮೆಟ್ಟಿ ಹಸ್ತಾನವತಿಯ ಗದ್ದುಗೆಯ ಮೇಲಿದ್ದು, ನಿಮಗೆ ಕೊಡಬಾರದ ಹಿಂಸೆಗಳನ್ನೆಲ್ಲ ಕೊಟ್ಟು, ಅಧಿಕಾರ ಅನುಭವಿಸಿದೆನಲ್ಲ? ಅದು ಸಾಕು’ ಎಂದು ಸಾವಿನಲ್ಲೂ ಸೋಲೊಪ್ಪದ ಸರದಾರನಾದನಲ್ಲ? ಅದು ಅಂದಿನ ಕಾಂಗ್ರೆಸ್ಸಿನ ಜಾಯಮಾನ-ಬಾಯಿಬಡಕುತನ, ಜಂಭ, ಅಸೂಯೆ, ಸೇಡು, ಸೊಕ್ಕು, ಹಿಂಸಾವಿಹಾರ ಇಂಥ ಹೇಯಗುಣಗಳಿಂದ ತುಂಬಿದ ನಡತೆ.

  ಈಗಣ ಕರ್ನಾಟಕ ಕಾಂಗ್ರೆಸ್ಸಿನ ವೀರರೂ ಇನ್ನೂ ಪಾಠ ಕಲಿತಿಲ್ಲ. ಜನತೆಗೆ ಬೇಕಾದ್ದು ಶಾಂತ, ನಿಷ್ಪಕ್ಷಪಾತ ಆಡಳಿತ, ಸಮರಸ ಸೂತ್ರದ ನ್ಯಾಯನಿರ್ವಹಣೆ, ಆರ್ಥಿಕ ಸುಧಾರಣೆಗಳಲ್ಲಿ ಜಾತೀಯತೆ ತೂರದ ಉದಾರ ನೀತಿ, ಕಿತಾಪತಿ, ವಂಚನೆ, ಕ್ಷುಲ್ಲಕತನವಿಲ್ಲದ ಸರ್ವಸಮ ಭಾವ-ಇವು ನೆಹ್ರೂ ಕಾಲದಿಂದ, ಇಂದಿರಾ, ರಾಜೀವ, ಸೋನಿಯಾ ಸೋಲಿನ ತನಕ ಎಲ್ಲೂ ಕಾಣಬಾರದ ಆಡಳಿತ ಲಕ್ಷಣಗಳು. ಅಯ್ಯನವರು ಸೋತು, ಪಕ್ಷವನ್ನೂ ಹಾಳುಗೆಡಹಿಯೂ ಇನ್ನೂ ಬೀಗುತ್ತಿರುವ ಅವರ ದರ್ಪದ, ಹಗೆತನ ತುಂಬಿದ, ಹಿಂದೂದ್ವೇಷದ ಮಾತುಗಳನ್ನು ಗಮನಿಸಿ ಪ್ರಮಾಣೀಕರಿಸಿಕೊಳ್ಳಿ! ಇತ್ತೀಚಿನ ಮಾತು-‘ನಾನು ಬಸವಣ್ಣನವರ ನಿಜ ಅನುಯಾಯಿ!’ ಹೌದೆ? ವೀರಶೈವ ಲಿಂಗಾಯಿತರೇ ಒಪ್ಪದ ಮಾತಿಗೆ ನನ್ನ ಭಾಷ್ಯವೇಕಯ್ಯ? ‘ಮತಧರ್ಮ ಒಡೆದು ಅಧಿಕಾರ ಹಿಡಿ’ ಎಂದು ಬಸವಣ್ಣನವರು ಒಂದಾದರೂ ವಚನದಲ್ಲಿ ಕರೆ ಕೊಟ್ಟಿದ್ದಾರೆಯೇ? ಬಿಡಿ. ಬುದ್ಧಿ ಬರುವುದಿಲ್ಲ. ವೈರ ಬರಗೊಡಿಸುವುದೂ ಇಲ್ಲ. ಸಿಕ್ಕ ಸಿಕ್ಕ ‘ಭಾಗ್ಯ’ ‘ಅಭಾಗ್ಯ’ಗಳಿಗೆ ಜನ ಮರುಳಾಗುವುದಿಲ್ಲ. ಆಗಿಲ್ಲ. ಅದು ಸತ್ಯ. ಯಾರ ಷಡ್ಯಂತ್ರವೂ ಇಲ್ಲಿರಲಿಲ್ಲ ಅವರ ಸೋಲಿನಲ್ಲಿ. ‘ನಾನೇಕೆ ಸೋತೆ’ ಎಂದರೆ, ‘ಅವರು ಗೆದ್ದರು, ಅದಕ್ಕೆ ನಾನು ಸೋತೆ’ ಎಂಬುದು ಬಾಲಿಶ, ಕ್ಷುಲ್ಲಕ ಕ್ಷುದ್ರ. ಅಲ್ಲಿ ಬುದ್ಧಿಯ ಸೋಲಿದೆ. ಅಹಂಕಾರದ ಗೆಲುವು ಇದೆಯಯ್ಯ. ಈ ಪರೀಕ್ಷೆಯಲ್ಲೇ ದೆಹಲಿಯ ಕೇಜ್ರಿವಾಲ್ ಮಹಾಶಯ ಗೆದ್ದದ್ದು. ಈ ಸಲ ಮೋದಿಯವರನ್ನು ಟೀಕಿಸಲಿಲ್ಲ. ಬೈಗಳದ ನುಡಿಮುತ್ತುಗಳು ಉದರಲಿಲ್ಲ. ಮೋದಿಯವರ ಪರೋಕ್ಷ ಅನುಸರಣೆ ಅವರಂತೆ ಅಭಿವೃದ್ಧಿಗೆ ಆದ್ಯತೆ, ಗಾಂಭಿರ್ಯ ನಡತೆ, ಅನುಸರಣೆ, ಹೊಂದಿಕೊಂಡು ಹೋಗುವಂತಹ ಮನೋಭಾವ, ನೈಜ ಫೆಡರಲ್ ಎಂಬ ಗಣರಾಜ್ಯನೀತಿಯ ಪರಿಪಾಲನೆ, ಇವರ ಗೆಲುವಿಗೆ ಕಾರಣವಾಯ್ತು ಎಂದು ಎಲ್ಲ ಪತ್ರಿಕೆಗಳೂ ಬರೆಯುತ್ತಿವೆ. ಕೊಟ್ಟ ನೆರೆ ಪರಿಹಾರವನ್ನು ಇಲ್ಲಿ ‘ಗುಳುಂ’ ಮಾಡಿದ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಕೊಟ್ಟದ್ದು ತಿಂದು ‘ಮೋದಿ ಏನೂ ಕೊಡಲಿಲ್ಲ! ಪರಿಹಾರವನ್ನು ಭಾಜಪ ನಾಯಕರು ಕೊಡಿಸಲಿಲ್ಲ’ ಎನ್ನುತ್ತ ಲೊಡ್ಡೆ, ಲೊಸಕುಗಳಲ್ಲಿ ವಿಷ ಕಾರುತ್ತ ಅಯ್ಯನವರು ಕಾಂಗ್ರೆಸ್ಸಿಗೂ ಮುಜುಗರವನ್ನೇ ತರ್ತಾ ಇದ್ದಾರೆ. ನುಂಗಲೂ ಉಗುಳಲೂ ಬಾರದ ಸ್ಥಿತಿ. ಅದನ್ನು ಕೇಜ್ರಿವಾಲರು ಪರಿಹರಿಸಿಕೊಂಡರು. ಮೋದಿ, ಭಾಜಪ ಮಾಡಿರಬಹುದಾದನ್ನೇ ಮಾಡಿದರೆ ಶಹಬ್ಬಾಸ್.

  ಅಲ್ಲೊಬ್ಬ ಇಲ್ಲೊಬ್ಬ ಕಾಂಗ್ರೆಸ್ ನಾಯಕರು ಜಾಡು ಬದಲಾಯಿಸಿ ಈಗೀಗ ಮಾತು ಹೊರಳಿಸಿ, ಮಾಡುತ್ತಿರುವ ಭಾಷಣಗಳ ಹಿನ್ನೆಲೆ ತಿಳಿಯಬೇಕಾಗಿದೆ. ಕೇರಳದ ಎ.ಕೆ.ಆಂಟೋನಿ ಅಂದೇ ಹೇಳಿದರು, ‘ಕಾಂಗ್ರೆಸ್ಸಿನ ಸೋಲಿಗೆ ಅದರ ಹಿಂದೂವಿರುದ್ಧ ನಿಲುವು, ನೀತಿಯೇ ಕಾರಣವಾಗಿರಲು ಸಾಕು’ ಅಂತ. ಈಚೆಗೆ ಜನಾರ್ದನ ಪೂಜಾರಿಯವರ ಬಾಯಲ್ಲಿ ‘ಕಾಂಗ್ರೆಸ್ಸು ತಪು್ಪ ಮಾಡಿತ್ತು’ ಎಂಬ ಮಾತು ಬಂದಿದೆ. ಸೋನಿಯಾ ಬೆಂಬಲಿಗ ಜನಾರ್ದನ ದ್ವಿವೇದಿಯವರಂತೂ ಈಗ ಮೋದಿ ಪ್ರಶಂಸಕರಾಗಿ, ಸೋನಿಯಾ ದೂರರಾಗಿದ್ದಾರೆ. ಆಶ್ಚರ್ಯವೆಂದರೆ, ಕರ್ನಾಟಕ ಮೂಲದ ಜೈರಾಂ ರಮೇಶ ಅವರಿಗೂ ಜ್ಞಾನೋದಯವಾದಂತಿದೆ. ಅವರ ಮಾತು, ‘ಈ ಮೈನಾರಿಟಿ ತುಷ್ಟೀಕರಣ ಕಾಂಗ್ರೆಸ್ಸನ್ನು ಎಲ್ಲೆಲ್ಲೂ ಬಲಿ ತೆಗೆದುಕೊಳ್ಳುತ್ತಿದೆ’. ಅಬ್ಬಾ! ಇದು ಪಕ್ಷಾಂತರದ ಪೂರ್ವವೇದಿಕೆಯೋ? ಇನ್ನೂ ತಿಳಿಯದು.

  ಸ್ವಲ್ಪವೇ ಹಿಂದೆ ಕೇರಳದ ಶಶಿ ತರೂರರು ಮೋದಿಯವರನ್ನು ಹೊಗಳಿ ಮಾತನಾಡಿದರು. ಬದುಕಬೇಕಲ್ಲ? ಕೇಸುಗಳಿಂದ ಪಾರಾಗಬೇಕಲ್ಲ? ಆಂಧ್ರದ ನಾಯ್ಡು ಅವರ ಮೌನ ಅರ್ಥವಾಗುತ್ತಿಲ್ಲ! ಕರ್ನಾಟಕದ ಗೌಡರ ಪಾಳ್ಯದ ರೀತಿಯೇ ಬೇರೆ! ಕೇಜ್ರಿವಾಲರ ಜಯದ ಪ್ರಶಂಸೆಯ ಪ್ರಸಂಗದಲ್ಲಿ ಇವರ ಕುಹಕ ಮಾತು-‘ಭಾಜಪ ವಿರೋಧಿಗಳೆಲ್ಲ ಒಗ್ಗೂಡಿದರೆ ಎಂಥ ಜಯವನ್ನೂ ಸಾಧಿಸಬಹುದು’. ಅಷ್ಟೇ ಅಲ್ಲ, ‘ರಾಷ್ಟ್ರೀಯ ಪಕ್ಷಗಳು ಸಾಕು. ಇನ್ನು ಬರೀ ಪ್ರಾಂತೀಯ ಪಕ್ಷಗಳೇ ಬೇಕು’. ಅಬ್ಬಾ! ಇಲ್ಲಿ ನನಗೆ ಬುದ್ಧಿ ಕಾಣಿಸುತ್ತಿಲ್ಲ. ರಾಷ್ಟ್ರೀಯತೆಯ ವ್ಯಾಪ್ತಿ, ವಿಜನ್ ಇಲ್ಲದವರ ಹಿಂದೆ ಕಾಂಗ್ರೆಸ್ಸಿನ ಹಿಡಿತದಲ್ಲಿ ಆಳಿದ್ದು ಇದ್ದು, ಅದರ ನೆನಪಿರಬೇಕು. ಚಂದ್ರಶೇಖರ್, ಗುಜ್ರಾಲ್, ವಿ.ಪಿ.ಸಿಂಗ್ ಇನ್ನೂ ಹಿಂದೆ ಚರಣ ಸಿಂಗರ ಕಾಲದ ನೆನಪಿನಲ್ಲಿ, ಇಲ್ಲಿ ತಾವೂ ಒಂದೊಮ್ಮೆ ಪ್ರಧಾನಿಯಾಗಿದ್ದರೆ ಬೆನ್ನು ಚಪ್ಪರಿಸುವ ಸಮಾಧಾನ ಮಾತೋ? ಆತ್ಮಶ್ಲಾಘನೆಯೊ? ‘ಅದೇ ಬರಲಿ’ ಎಂಬ ಹತಾಶೆಯೋ? ವಿಧಿ ನಿರ್ಧರಿಸಲಿದೆ. ಒಂದು ರಾಷ್ಟ್ರೀಯ ಪಕ್ಷದ ದ್ವೇಷ ‘ಅದನ್ನು ಹೊರಗಿಡುವುದೇ ಗುರಿ’ ಎಂಬ ನೆಗೆಟಿವ್ ಚಿಂತನೆ, ಕಮ್ಯುನಿಸ್ಟರ ಮಾವೋಭಾವ! ಜ್ಯೋತಿ ಬಸು ಏನು ಸಾಧಿಸಿದರು? ಇಎಂಎಸ್ ನಂಬೂದ್ರಿಪಾದರೋ? ಈಚೆಗೆ ವಿಜಯ್ ಪೀಣರಾಯರ ಬಾಯಲ್ಲೂ ಟೆರರಿಸ್ಟ್ ಸಂಘಟನೆಗಳ ಬಗ್ಗೆ ಟೀಕಾತ್ಮಕ ಮಾತುಗಳು ಬರುತ್ತಿವೆ. ಅಬ್ದುಲ್ಲಾ ಅಯ್ಯನವರ ಬಾಯಲ್ಲಿ ಸಾಧ್ಯವಿಲ್ಲ! ಕಮ್ಯುನಿಸ್ಟರು ದಾರಿಗೆ ಬಂದರೂ ಇವರು ಬರುವುದಿಲ್ಲ.

  ಸುಪ್ರೀಂ ಕೋರ್ಟ್ ಹೇಳಿದೆ-‘ಕ್ರಿಮಿನಲ್ ಹಿನ್ನೆಲೆ ಇರುವವರನ್ನು ಹೊರಗಿಡಿ’ ಎಂದು. ಅದು ಭಾಜಪ ಸೇರಿದಂತೆ ಎಲ್ಲ ಪಕ್ಷಗಳಿಗೂ ಆದೇಶ. ಮೋದಿ ದಾರಿಯಲ್ಲಿ ಅವರು ಮಾಡಬೇಕಾದ್ದನ್ನೇ ರಾಜ್ಯ ಸರ್ಕಾರಗಳೂ ಸಹಕಾರದಿಂದ ಮಾಡಿದರೆ ಇಡೀ ದೇಶಕ್ಕೇ ನೆಮ್ಮದಿ, ಶಾಂತಿ, ಪ್ರಗತಿ, ಸೌಹಾರ್ದ. ಈ ದಾರಿಯಲ್ಲಿ ಕೇಜ್ರಿವಾಲರು ವಾಸಿ, ಅಬ್ದುಲ್ಲಾ ಅಯ್ಯನವರು ಎಲ್ಲೂ ಸಲ್ಲರಯ್ಯ!

  (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts