More

    ರಾಜಧರ್ಮ: ಬದಲಾಗದ ಜೀವನ ವೈಚಿತ್ರ್ಯದ ಅವಲೋಕನ

    ರಾಜಧರ್ಮ: ಬದಲಾಗದ ಜೀವನ ವೈಚಿತ್ರ್ಯದ ಅವಲೋಕನ

    ಕಾಂಗ್ರೆಸ್ಸು ಹಠಸಾಧಕವಾಗಿ ಮೋದಿ ಸರ್ಕಾರದ ಅಭಿವೃದ್ಧಿಪರ ಮಸೂದೆಗಳನ್ನು ಸಾರಾಸಗಟಾಗಿ ವಿರೋಧಿಸುತ್ತ, ಚಳವಳಿ ಮಾಡುತ್ತ, ಕೂಗಾಡುತ್ತ, ಕಲಾಪಗಳಿಗೆ ಅರ್ಥಹೀನ ಅಡ್ಡಿ ಮಾಡುತ್ತ, ರಾಜ್ಯಸಭೆಯಲ್ಲಿ ಒಂದು ವೇಳೆ ಪಾಸಾದರೂ, ಹೊರಗಡೆ ಪ್ರತಿಭಟಿಸುತ್ತ ವಿರೋಧಕ್ಕಾಗಿ ವಿರೋಧ ಎಂಬಂತೆ, ದ್ವೇಷ ಸಾಧಿಸುವ ಒಂದು ಸಂಸ್ಥೆಯಾಗಬೇಕೆ?

    ನಾನು ಬರೆಯುವುದರಲ್ಲಿ ಹೊಸತೇನೂ ಇಲ್ಲವಾದರೂ ಸಾಂರ್ದಭಿಕ ನೆನಪು, ಅಚ್ಚರಿ, ಎಚ್ಚರಿಕೆಗಳಿಗಾಗಿ ನೀವು ಓದಬೇಕು. ‘ರಾಜ್ಯಸಭೆ’- ‘ಮೇಲ್ಮನೆ’ ಎಂಬುದೊಂದಿಯಷ್ಟೆ. ಇದು ಇಂಗ್ಲೆಂಡಿನ ‘ಹೌಸ್ ಆಫ್ ಲಾರ್ಡ್ಸ್’ನ

    ಅಂಧಾನುಕರಣೆ. ಇಲ್ಲಿ ‘ಲಾರ್ಡ್ಸ್’ ಇಲ್ಲ. ಅಲ್ಲಿ ಒಂದೊಮ್ಮೆ ಪಟ್ಟಭದ್ರರು, ಊಳಿಗಮಾನ್ಯ ವ್ಯವಸ್ಥೆಯ ಭೂಮಿಹಾರರು, ಧನಿಕರು, ಪರಂಪರೆಯ ಪಳೆಯುಳಿಕೆಗಳ ವರ್ಗದ ಹಲವರಿಗೆ ಸ್ಥಾನ ಇರುತ್ತ, ಬ್ರಿಟಿಷರ ಕಾಲದಲ್ಲಿ ಇಲ್ಲಿ ವೈಸರಾಯರಾಗಿ ಬಂದಿದ್ದವರುಂಟು. ಲಾರ್ಕ್ ಕಾರ್ನ್​ವಾಲೀಸ್, ಲಾರ್ಡ್ ಕರ್ಜನ್, ಲಾರ್ಡ್ ವೆಲ್ಲೆಸ್ಲಿ, ಲಾರ್ಡ್ ಡಾಲ್ ಹೌಸಿ, ಲಾರ್ಡ್ ಹಾರ್ಡಿಂಗ್, ಲಾರ್ಡ್ ಇರ್ವಿನ್, ಸರ್ ಲಾರ್ಡ್ ಜಾರ್ಜ್ ಮುಂತಾದವರು. ಬ್ರಿಟಿಷರದು ಒಂದು ಬಗೆಯ ‘ಮಾರ್ನಾ’-ರಾಜಾಡಳಿತ. ಬೇರೊಂದು ಬಗೆಯಲ್ಲಿ ಪ್ರಜಾಪ್ರಭುತ್ವ. ಅಲ್ಲಿ ಅಪ್ಪರ್ ಹೌಸ್ ಆಲಂಕಾರಿಕವೋ? ಔಪಚಾರಿಕವೋ? ಅಥವಾ ಬಿಸಾಡಲಾಗದ ಬಾಟಲಿಯಂತಹ ಪ್ರಹಸನವೋ, ಬ್ರಿಟಿಷರು ನಿರ್ಣಯಿಸಲಿ.

    ಇಲ್ಲಿ ಆ ಬಗೆಯ ಮೇಲ್ಮನೆಯ ಉದ್ದೇಶ, ಜನತಂತ್ರದಲ್ಲಿ ಮಂಕು ಜನರಿಂದ ಆರಿಸಿ ಬರಲಾಗದ ಕವಿಗಳು, ಗಾಯಕರು, ಶ್ರೇಷ್ಠ ಚಿಂತಕರು, ನಾನಾ ಶಾಸ್ತ್ರ ಪರಿಣತರು, ನಿವೃತ್ತ ನ್ಯಾಯಾಧೀಶರು, ಉದ್ಯೋಗಪತಿಗಳು, ದೇಶಾಭ್ಯುದಯಕ್ಕೆ ದುಡಿದ ವಿಜ್ಞಾನಿಗಳು, ಗ್ರಂಥಕರ್ತರು, ಕೀರ್ತಿ ತಂದವರು-ಇಂಥವರ ಸಲಹೆ ಪಡೆಯಲು, ಉಪಯೋಗಿಸಿಕೊಳ್ಳಲು, ಅನುಭವಸ್ಥ, ವಿವೇಕಿ, ರಾಷ್ಟ್ರ ಹಿರಿಯರ ಪ್ರಾತಿನಿಧ್ಯಕ್ಕಾಗಿ ಏರ್ಪಟ್ಟ ಸಂಸ್ಥೆ ಈ ಮೇಲ್ಮನೆ ಹೆಸರಿಗೆ! ಆ ಉದ್ದೇಶ ಆಗಾಗ ನೆಹ್ರೂ ಕಾಲದಲ್ಲಿ ಅದೆಷ್ಟು ಅನ್ವರ್ಥವಾಗಿತ್ತು. ಇಂದಿರಾ ಕಾಲದಿಂದೀಚೆಗೆ, ಯುಪಿಎ 1 ಮತ್ತು 2ರ ಕಾಲದಲ್ಲೂ ಅದು ಹಾಸ್ಯಾಸ್ಪದವಾಗಿ, ಸೋತು ಬಂದವರ, ಪಾರ್ಟಿಗೆ ಗಂಟಲು ಕೊಡುವ, ಅಬ್ಬರಿಸುವ ‘ಕುಟುಂಬನಿಷ್ಠ’ರನ್ನು ತುಂಬುವ ‘ಕೊಂಡಿವಾಡ’ವಾಗಿ ಪರಿಣಮಿಸಿತ್ತು.

    ಈ ‘ಕೊಂಡಿವಾಡ’ ಎಂಬುದು ಮೈಸೂರು ಪ್ರಾಂತ್ಯದ ‘ತೊಂಡಿನಮನೆ’-ಅಂದರೆ ಪೋಲಿ ದನಗಳನ್ನು ಅವರಿವರ ಹೊಲಗದ್ದೆಗಳಲ್ಲಿ ಅತಿಕ್ರಮಿಸಿ, ಮೇಯ್ದು, ನಷ್ಟ ಮಾಡಿ, ಯಜಮಾನರು ದಂಡ ತೆತ್ತು ಬಿಡಿಸಿಕೊಳ್ಳಬೇಕಾದ ದನಗಳ ದೊಡ್ಡಿಯಂತೆ ಆಗಬೇಕೆ? ಎಲ್ಲೋ ಒಬ್ಬರು ಸಿ.ಡಿ.ದೇಶಮುಖ್, ಎಲ್ಲೋ ಒಬ್ಬರು ಎಂ.ಸಿ.ಛಾಗ್ಲಾ, ಎಲ್ಲೋ ಒಬ್ಬರು ಡಾ.ರಾಧಾಕೃಷ್ಣನ್, ಇಂಥವರು ಬಿಟ್ಟರೆ, ಅಧಿಕಾರಾರೂಢರ ಬಾಲ ಹಿಡಿಯುವವರಿಗೆ-ಸಿಬಲ್, ಸಿಂಗ್ವಿ, ಮಣಿಶಂಕರ, ಆನಂದ ಶರ್ಮಾ ಇಂಥವರ ಸ್ಥಾನ ಭದ್ರತೆಗೆ ಅವಕಾಶವಾಗಿ ಪರಿಣಮಿಸಿದ್ದು ವಿಪರ್ಯಾಸ. ಅದು ಕಾಂಗ್ರೆಸ್ಸೇತರರಿಗೂ ಆದರ್ಶವಾಯ್ತು. ‘ಆದರ್ಶ’ ಎಂದರೆ ಕನ್ನಡಿ, ಅಮಾವಾಸ್ಯೆ ಏನೂ ಆಗುತ್ತದೆ. ಕರ್ನಾಟಕದ ಇಂದಿನ ಶೋಚನೀಯ ಪರಿಸ್ಥಿತಿಯ ಅನ್ವಯಕ್ಕಾಗಿ ಈ ಪರಿಶೀಲನೆ ಮಾಡಬೇಕಾಗಿದೆ. ಕಾಂಗ್ರೆಸ್ ಇಲ್ಲಿ ನಾಮಾವಶೇಷ ಆಯ್ತು. ಅದಕ್ಕೆ ಅರಿವಿಲ್ಲ, ಅವಮಾನ ಪ್ರಜ್ಞೆಯೂ ಇಲ್ಲ. ಅದೇನೋ ಲೆಕ್ಕದಲ್ಲಿ-ಇದು ‘ಅರ್ಥ-ಮಿಟಿಕ್’- Arithmetic ಅಂತ ನಾನೂ ಹಿಂದೆ ಹಾಸ್ಯ ಮಾಡಿದ್ದೆ.

    ಕೆಳಗಿನ ಮನೆಯಲ್ಲಿ ಒಂದು ಮಸೂದೆ ಪಾಸಾಗಿಯೂ ಮೇಲ್ಮನೆಗೆ ಹೋಗಿ ಅಲ್ಲಿ ‘ಅಸ್ತು’ ಪಡೆಯಬೇಕಾದ ನಿರ್ಬಂಧ, ಅದಕ್ಕೆ ‘ವಿವೇಕಿಗಳ’ (ಸಂದರ್ಭವಾದಿಗಳಲ್ಲದವರ, ನಿಷ್ಪಕ್ಷಪಾತಿಗಳ, ಸ್ವತಂತ್ರ ಚಿಂತಕರ) ಮುದ್ರೆ ಬೀಳಲಿ, ಬಿದ್ದರೆ ಗೌರವಾರ್ಹ ನಿರ್ಣಯ ಆಗಲಿ ಎಂಬುದು ಈ ಮೇಲ್ಮನೆಯ ಅಸ್ತಿತ್ವದ ಸಮರ್ಥನೆ.

    ಅಲ್ಲಿ ಮುದ್ರೆ ಬೀಳಲಿಲ್ಲವಾಗಿ ಮತ್ತೆ ಕೆಳಗಿನ ಮನೆಗೆ ಬಂದು ಪುನಃ ಪರಿಶೀಲಿತವಾಗಲಿ ಎಂಬುದು ವಿವೇಕ. ಆದರೆ ಈಗ ಆಗಿರುವುದೇನು? ಕಾಂಗ್ರೆಸ್ಸು, ಹಠಸಾಧಕವಾಗಿ, ಮೋದಿ ಸರ್ಕಾರದ ಅಭಿವೃದ್ಧಿಪರ ಮಸೂದೆಗಳನ್ನು ಸಾರಾಸಗಟಾಗಿ ವಿರೋಧಿಸುತ್ತ, ಚಳವಳಿ ಮಾಡುತ್ತ, ಕೂಗಾಡುತ್ತ, ಕಲಾಪಗಳಿಗೆ ಅರ್ಥಹೀನ ಅಡ್ಡಿ ಮಾಡುತ್ತ, ಅಲ್ಲಿ ಒಂದು ವೇಳೆ ಪಾಸಾದರೂ, ಹೊರಗಡೆ ಪ್ರತಿಭಟಿಸುತ್ತ Oppose for Opposition Sake ಎಂಬಂತೆ, ದ್ವೇಷ ಸಾಧಿಸುವ ಒಂದು ಸಂಸ್ಥೆಯಾಗಬೇಕೆ? ಇದನ್ನು ಪತ್ರಿಕೆಗಳು, ಟಿ.ವಿ.ಗಳು ನಗೆಯಾಡಿದ್ದೂ ಉಂಟು. ಸಿಕ್ಕಾಪಟ್ಟೆ ಟೀಕಿಸಿದ್ದೂ ಉಂಟು. ಅದಕ್ಕೆ ಉತ್ತರ? ಈ ಪತ್ರಿಕೆಗಳನ್ನೂ, ಟಿ.ವಿ.ಗಳನ್ನೂ ‘ಕೊಂಡು’ ಬಿಡುವುದು. ಸೋನಿಯಾ ದರ್ಬಾರಿನಲ್ಲಿ ವಿದೇಶಿ ಜಾಹೀರಾತು ಸಂಸ್ಥೆಗಳನ್ನು ಹಣ ಕೊಟ್ಟು ಕೊಂಡು, ಭಾರತ ಸರ್ಕಾರಕ್ಕೆ ಛೀಮಾರಿ ಹಾಕಿಸಿದ್ದೂ ಉಂಟು. ಒಂದು ಉದಾಹರಣೆ. 1998ರಲ್ಲಿ ವಾಜಪೇಯಿ ಸರ್ಕಾರ ಪೋಖ್ರಾನ್ ಅಣು ಪರೀಕ್ಷೆ ನಡೆಸಿದಾಗ, ದಕ್ಷಿಣ ಆಫ್ರಿಕೆಗೆ ರಾಯಭಾರಿ ಆಗಿದ್ದವರು ಲಕ್ಷ್ಮೀ ಚಂದ್ ಜೈನ್ ಎಂಬ ಕಾಂಗ್ರೆಸ್​ನವರು! ಅವರು ಅಲ್ಲಿದ್ದೇ ನಮ್ಮ ಸರ್ಕಾರದ ಅಣುಶಕ್ತಿ ವೃದ್ಧಿಯ ಕ್ರಮವನ್ನು ಬಹಿರಂಗವಾಗಿ ವಿರೋಧಿಸಿದರು. ಆಗ, ಈ ದಕ್ಷಿಣ ಆಫ್ರಿಕಾವನ್ನು ಮುಂದಿಟ್ಟು, ಐರೋಪ್ಯರು, ಅಮೆರಿಕನ್ನರು, ಭಾರತದ ಕ್ರಮಕ್ಕೆ ವಿರೋಧಿಗಳಾಗಿದ್ದರು. ವಾಜಪೇಯಿ ಈ ಲಕ್ಷ್ಮೀ ಚಂದ್ ಜೈನ್​ರನ್ನು ‘ವಾಪಸ್ ಬನ್ನಿ’ ಅಂತ ‘ಗೌರವಾನ್ವಿತ ನಿವೃತ್ತಿ’ಗೆ ಆಜ್ಞೆ ಮಾಡಿದರು. ಜೈನ ಮಹಾಶಯರು ಆಜ್ಞೆಯನ್ನು ಧಿಕ್ಕರಿಸಿದರು. ವಾಜಪೇಯಿ ಅವರನ್ನು ‘ಅನಧಿಕಾರಸ್ಥರು’ ಎಂದು ಘೋಷಿಸಬೇಕಾಯ್ತು, ಉದ್ಧಟತನ ವರ್ತನೆಗಾಗಿ.

    ಇಂಥ ಉದ್ಧಟ ರಾಯಭಾರಿಯ ಪುತ್ರ ಎನ್​ಡಿಟಿವಿಯ ಶ್ರೀನಿವಾಸನ್ ಜೈನ್! ತಿಳಿಯಿತೆ? ಇನ್ನೊಬ್ಬ ಪತ್ರಿಕಾಕರ್ತ ರಾಜೀವ್ ಮಂತ್ರಿ ಇದನ್ನು ಬಹಿರಂಗ ಪಡಿಸಿ, ಛೀಮಾರಿ ಹಾಕಿದಾಗ ಅವರಿಗೆ ಕಾಂಗ್ರೆಸ್ ಬೆದರಿಕೆ ಹಾಕಿತು. ದೈಹಿಕವಾಗಿ ಹಿಂಸಿಸುವುದಾಗಿ ಕರೆಯಿತ್ತು ಬಾಯಿ ಮುಚ್ಚಿಸಿದರು. ಈಗಲೂ ಇಂಥವರು ಧೀರರು ಇದ್ದರೂ ರಕ್ಷಣೆ ಕಡಿಮೆ-ಈಗಿನ ಅರ್ನಾಬ್ ಗೋಸ್ವಾಮಿ, ನಾವಿಕಾ ಕುಮಾರ್ ಇಂಥವರುಂಟು. ಜೈನ್ ಅವರ ಸಂದರ್ಭದಲ್ಲಿ ಡರ್ಬಾನ್ ನಗರದಲ್ಲಿ ಒಂದು ಶೃಂಗ ಸಮ್ಮೇಳನ ಇದ್ದು, ವಿಶ್ವರಾಷ್ಟ್ರಗಳು ಭಾರತಕ್ಕೆ ಛೀಮಾರಿ ಹಾಕುವ ಸಂದರ್ಭದಲ್ಲಿ ನಮ್ಮ ರಾಯಭಾರಿಯ ಚೇಷ್ಟೆ! ಇದೇ ಜೈನ್ ಸಾಹೇಬರಿಗೆ 2011ರಲ್ಲಿ ಈ ದೇಶಹಿತಾಸಕ್ತಿ ವಿರೋಧಿ ನಡವಳಿಕೆಗಾಗಿ ಆಗಿನ ಕಾಂಗ್ರೆಸ್ ಸರ್ಕಾರ ‘ಪದ್ಮವಿಭೂಷಣ’ ಪ್ರಶಸ್ತಿ ಇತ್ತು ಗೌರವಿಸಿತ್ತು-ಭಾರತರತ್ನಕ್ಕೆ ಒಂದೇ ಸ್ತರ ಕೆಳಗೆ. ಇದನ್ನು ಬರೆಯುತ್ತಿರುವುದು ಏಕೆಂದರೆ, ಕಾಂಗ್ರೆಸ್ಸು ಯಾರನ್ನು ಗೌರವಿಸಿತು, ಯಾವ ಸರ್ಕಾರಿ ಅಧಿಕಾರಿಯನ್ನೂ ವಶ ಮಾಡಿಕೊಂಡೀತು, ಇಂಥವರನ್ನು ಮೇಲ್ಮನೆಯಲ್ಲಿ ತುಂಬೀತು ಎಂದು ತೋರಿಸಲು.

    ‘ಸೋಲಿಲ್ಲದ ಸರದಾರ’ರೊಬ್ಬರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತರು. ಅವರು ‘ನಿಷ್ಠಾವಂತ’ ಕಾಂಗ್ರೆಸ್ ಕಾರ್ಯಕರ್ತರು. ಇದು ಸಾಮಾನ್ಯ ಸೋಲೆ? ಎಂಥದು ಮಾರಾಯ್ರೆ! ಲೋಕಸಭೆಯಲ್ಲಿ ವಾದಮಾಡಬಲ್ಲ ಪ್ರಬಲ ಸ್ಥಾನ ತೆರವಾಯ್ತು. ಅದು ನಷ್ಟ! ಆ ನಷ್ಟವನ್ನು ಕೇರಳದ ವೈನಾಡು ಮೈನಾರಿಟಿ ವೋಟಿನಿಂದ ಆರಿಸಿ ಬಂದ ರಾಹುಲರೋ ಅಥವಾ ಉತ್ತರ ಪ್ರದೇಶದಿಂದಲೇ ‘ಆರಿಸಿ’ ಬಂದ ಸೋನಿಯಾರೋ, ತುಂಬುವಂತೆ ಇರಲಿಲ್ಲ. ಹೀಗಾಗಿ ಇವರನ್ನು ಈಗ ರಾಜ್ಯಸಭೆಗೆ ‘ತುಂಬುವ’ ಗೃಹಪ್ರವೇಶ ಸಂದರ್ಭ. ಇನ್ನೊಬ್ಬರು ಬೇರೆ ಪಕ್ಷದಿಂದ ಸ್ಪರ್ಧಿಸಿದ್ದವರೂ ಸೋತವರು-ಕಾಮನ್ ಫ್ಯಾಕ್ಟರ್ (ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಸಂಪನ್ನಗೊಂಡಿದೆ).

    ಇವರು ಅಲ್ಲಿ ಮಾತಾಡಿದ್ದನ್ನು ಒಮ್ಮೆಯೂ ನಾನು ನೋಡಿದಂತಿಲ್ಲ. ಯಾವ ಮಹತ್ವದ ರಾಷ್ಟ್ರೀಯ ಚಿಂತನೆಯೂ ಇಲ್ಲದ, ಕೇವಲ ಪ್ರಾದೇಶಿಕ, ಕೌಟುಂಬಿಕ ಹಿತಾಸಕ್ತಿಯ ಇಂಥವರು ಸಾಧಿಸುವ ಪ್ರತಿಷ್ಠೆಯಾದರೂ ಏನು?

    ಈ ಪಕ್ಷದಲ್ಲಿ ಹಿಂದೆ ಒಮ್ಮೆಯೂ ಅ ಸಭೆಯಲ್ಲಿ ಧ್ವನಿ ಎತ್ತದ ಹಲವರು ಆಲಂಕರಿಕವಾಗಿ ಹೋದರು. ಬಿಡಿ. ಇದು ಪಕ್ಷದ ಪ್ರಶ್ನೆ ಅಲ್ಲ. ಸಮರ್ಥ ವಾಗ್ಮಿತ್ವ, ಸಮರ್ಥ ವ್ಯಕ್ತಿತ್ವ, ರಾಷ್ಟ್ರನಿಷ್ಠೆಯ ಪ್ರಶ್ನೆ. ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಕೇಂದ್ರದಿಂದ ಆಗಾಗ ಕಡಿವಾಣ ಬೀಳುತ್ತ, ‘ಕೇಂದ್ರಕ್ಕೆ ಇಲ್ಲಿನ ಸಮಸ್ಯೆಗಳ ಅರಿವು ಇದೆಯೇ?’ ಎಂಬ ಪ್ರಶ್ನೆ ನನ್ನಂಥವರನ್ನು ಕಾಡುವಾಗ, ಕೆಲವರು ಹೇಳುವುದುಂಟು- ‘ಅಲ್ಲಿ ಅನಿವಾರ್ಯ ನಿರ್ಬಂಧಗಳಿವೆ’ ಅಂತ. ರಾಷ್ಟ್ರಹಿತಕ್ಕಿಂತ ಜಾತಿಹಿತ, ಪ್ರಾದೇಶಿಕಹಿತ ಅಥವಾ ಹೇಳಲಾಗದ ‘ಲಾಭದಾಯಕ’ ಅಂಶಗಳು ಮುಖ್ಯ ಅಂತ ನಾನು ಭಾವಿಸುವುದಿಲ್ಲ. ರಾಷ್ಟ್ರಹಿತನಿಷ್ಠ ಕನ್ನಡ ಪತ್ರಿಕಾಕರ್ತರೂ ಇದ್ದಾರೆ, ಎಲೆಮರೆ ಕಾಯಿಯಂತಹ ವಿವೇಕಿ ತಜ್ಞರೂ, ಚಿಂತಕರೂ ಇದ್ದಾರೆ. ಮೇಲಿನವರಿಗೆ ಕಣ್ಣು ಬೇಕು. ಕಾಂಗ್ರೆಸ್ಸಿಗೆ ಕಣ್ಣು ಇದೆ ಎಂದು ತಿಳಿಯುವುದು ಮೂಢನಂಬಿಕೆ. ಬೇರೆ ಪಕ್ಷಗಳದೂ ಇದೇ ಮಾತು. ಸ್ವಾರ್ಥಕ್ಕೆ ಕಣ್ಣು, ತಲೆ, ಹೃದಯ ಇರುವುದಿಲ್ಲ. ಒಂದೆಡೆ ಆರ್ಥಿಕ ಹಿಂಜರಿತ, ಮತ್ತೊಂದೆಡೆ ಕರೊನಾ ಮಾರಿ, ಇದರಿಂದ ಕಂಗೆಟ್ಟ ಜನತೆ, ಸಾಯುತ್ತಿರುವ ವೃತ್ತಿಗಳು, ಜನರಿಗೆ ಬೇಕಾದ ಆರ್ಥಿಕ ಸಹಾಯ, ವೃತ್ತಿ ಅವಕಾಶ ಹಿಗ್ಗು, ಉದ್ಯೋಗ, ಉದ್ದಿಮೆಗಳ ಪುನಶ್ಚೇತನ, ಆರೋಗ್ಯ ರಕ್ಷಣೆ ಇವುಗಳ ಬಗ್ಗೆ ತಿಳಿವಳಿಕೆ, ಸಹಕಾರ, ಉಪಯುಕ್ತ ಯೋಜನೆಗಳ ತಲೆ ಇರುವ ಮಹಾನುಭಾವರು ರಾಜ್ಯಸಭೆಗೆ ಬಂದರೆ ದೇಶಕ್ಕೆ ಪ್ರಯೋಜನವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts