More

    ಪರ್ಯಾಯ ಜಾಗದಲ್ಲೂ ಕಾಡಿದ ವರುಣ

    ಪರ್ಯಾಯ ಜಾಗದಲ್ಲೂ ಕಾಡಿದ ವರುಣ

    ಬಣಕಲ್ (ಮೂಡಿಗೆರೆ ತಾ.): ಅತಿವೃಷ್ಟಿ ಸಂತ್ರಸ್ತ ಮಧುಗುಂಡಿ, ಹಲಗಡಕ, ದುರ್ಗದಹಳ್ಳಿ, ಬಿದಿರುತಳ ಗ್ರಾಮದ ನಿರಾಶ್ರಿತರನ್ನು ಈ ವರ್ಷವೂ ವರುಣ ಬೆಂಬಿಡದೆ ಕಾಡುತ್ತಿದ್ದಾನೆ. ಪರ್ಯಾಯ ಜಾಗದಲ್ಲಿ ಮನೆ ಕಟ್ಟಲು ನಿರ್ವಿುಸಿದ ತಳಪಾಯದಲ್ಲಿ ಮಳೆಯಿಂದ ಹೂಳು ತುಂಬಿಕೊಂಡಿದೆ.

    ಬಿ.ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಸುಣ್ಣದಗೂಡಿನ ಸಮೀಪ ಪರ್ಯಾಯ ಜಾಗದಲ್ಲಿ ನಿರ್ವಿುಸಿದ್ದ ಮನೆಯ ತಳಪಾಯದ ತುಂಬ ಮಳೆಯಿಂದ ಹೂಳು ತುಂಬಿದ್ದು, ಮನೆ ಕಟ್ಟಲು ಹಾಕಿದ್ದ ಎಂ.ಸ್ಯಾಂಡ್ ಕೊಚ್ಚಿ ಹೋಗಿದೆ.

    ಕಳೆದ ವರ್ಷದ ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಕೊಚ್ಚಿಹೋಗಿ ನೆಲೆ ಕಳೆದುಕೊಂಡಿದ್ದ ಮಧುಗುಂಡಿ, ಹಲಗಡಕ, ದುರ್ಗದಹಳ್ಳಿ, ಬಿದಿರುತಳ ಗ್ರಾಮದ 40 ಕುಟುಂಬಗಳಿಗೆ ಸುಣ್ಣದಗೂಡಿನ ಸಮೀಪ ಮನೆ ನಿರ್ವಿುಸಲು ಪರ್ಯಾಯ ಜಾಗವನ್ನು ಕೆಲ ತಿಂಗಳು ನೀಡಲಾಗಿತ್ತು. 40 ಕುಟುಂಬಗಳಿಗೂ ಸರ್ಕಾರದ ಮೊದಲ ಹಂತದ ಅನುದಾನವಾಗಿ 1 ಲಕ್ಷ ರೂ. ಬಂದಿದ್ದು 20ಕ್ಕೂ ಹೆಚ್ಚು ಕುಟುಂಬಗಳು ಈ ಜಾಗದಲ್ಲಿ ತಳಪಾಯ ನಿರ್ವಿುಸಿದ್ದರು. ಮತ್ತೆ ಕೆಲವರು ತಳಪಾಯ ನಿರ್ವಿುಸತೊಡಗಿದ್ದರು. ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆ ಮತ್ತೆ ಸಂತ್ರಸ್ತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

    ನಿರಾಶ್ರಿತ ದುರ್ಗದಹಳ್ಳಿಯ ಸುಧಾಕರ್ ಮಾತನಾಡಿ, ಸರ್ಕಾರ ನೆರೆ ನಿರಾಶ್ರಿತರಿಗೆ ಸುಣ್ಣದಗೂಡಿನಲ್ಲಿ ಪರ್ಯಾಯ ಜಾಗ ನೀಡಿದೆ. ಆದರೆ ಮಳೆ ನೀರು ಹರಿದುಹೋಗಲು ಕಾಲುವೆ, ಕುಡಿಯುವ ನೀರು, ರಸ್ತೆ ಮುಂತಾದ ಸೌಲಭ್ಯ ಕಲ್ಪಿಸುತ್ತಿಲ್ಲ. ಮಳೆ ಬಂದರೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ನೀರು ನುಗ್ಗುತ್ತಿದೆ. ಕೆಲವೆಡೆ ಮಳೆ ನೀರಿನ ಹರಿಯುವಿಕೆ ವಿರುದ್ಧ್ದಾಗಿ ಚರಂಡಿ ಇರುವುದರಿಂದ ಪ್ರಯೋಜನ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

    ಮನೆ ಕಟ್ಟಲು ಮೊದಲ ಹಂತದ ಹಣ ಬಂದಿದ್ದು ತಳಪಾಯ ಕಾರ್ಯ ಪೂರ್ಣಗೊಂಡು ತಿಂಗಳುಗಳೇ ಕಳೆದಿದೆ. ಮನೆ ಕಟ್ಟುವ ಕಾರ್ಯ ಮುಂದುವರಿಸೋಣವೆಂದರೆ ಎರಡನೇ ಹಂತದ ಹಣ ಬಂದಿಲ್ಲ. ಮನೆ ಕಟ್ಟಲು ನೀರಿನ ಸೌಕರ್ಯವೂ ಇಲ್ಲ. ದಿನವೊಂದಕ್ಕೆ 1,500 ರೂ. ನೀಡಿ ಬಾಡಿಗೆ ಟ್ಯಾಂಕರ್​ನಲ್ಲಿ ನೀರು ತಂದು ತಳಪಾಯ ನಿರ್ವಿುಸಿದ್ದೇವೆ. ಮಳೆಗೆ ಮನೆ ನಿರ್ಮಾಣ ಸಾಮಗ್ರಿಗಳು ಕೊಚ್ಚಿ ಹೋಗಿವೆ ಎನ್ನುತ್ತಾರೆ ಹಲಗಡಕ ಗ್ರಾಮದ ನಿರಾಶ್ರಿತ ಸಚ್ಚಿನ್.

    ಕೆಲ ತಿಂಗಳ ಹಿಂದೆ ಪುನರ್ವಸತಿ ಕಲ್ಪಿಸಲು ಜಾಗ ಗುರುತಿಸಿದ ನಂತರ ಜಿಪಂ ಇಂಜಿನಿಯರ್​ಗಳು ಲೇಔಟ್​ಗಳ ಯೋಜನೆ ಸಿದ್ಧಪಡಿಸಿದ್ದಾರೆ. ಮಳೆ ನೀರಿನಿಂದ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಗ್ರಾಮ ಲೆಕ್ಕಾಧಿಕಾರಿ ಸೋಮಶೇಖರ್ ‘ವಿಜಯವಾಣಿ’ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts