More

    ತಮಿಳುನಾಡಿನಲ್ಲಿ ಮುಂದುವರಿದ ವರುಣನ ಅಬ್ಬರ: ಇನ್ನೂ 3 ದಿನದಲ್ಲಿ ಅಪ್ಪಳಿಸಲಿದೆ ಸೈಕ್ಲೋನ್

    ಚೆನ್ನೈ: ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಇದರ ಪರಿಣಾಮ ಅನೇಕ ಪ್ರದೇಶಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತವಾಗಿದೆ. ಟ್ರಾಫಿಕ್​ ಜಾಮ್​ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ. ಆದರೂ ರಾಜ್ಯಕ್ಕೆ ಮಳೆಯಿಂದ ಬಿಡುವು ಸಿಕ್ಕಿಲ್ಲ. ಏಕೆಂದರೆ, ಭಾರತೀಯ ಹವಾಮಾನ ಇಲಾಖೆ ಪ್ರಕಾರ ಡಿ.1 ರಿಂದ 4ರವೆಗೆ ವಿಶೇಷವಾಗಿ ತಮಿಳುನಾಡು ಕರಾವಳಿ ಭಾಗದಲ್ಲಿ ಭಾರೀ ಮಳೆ ಬೀಳಲಿದೆ.

    ಹವಾಮಾನ ಇಲಾಖೆ ಪ್ರಕಾರ ಚೆನ್ನೈ ಮತ್ತು ಇತರೆ ಐದು ಜಿಲ್ಲೆಗಳಲ್ಲಿ ಶುಕ್ರವಾರ (ಡಿ.01) ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಚೆಂಗಲ್ಪಟ್ಟು, ಥಿರುವಳ್ಳೂರ್​, ನಾಗಪಟ್ಟಿನಂ, ರಾಮನಾಥಪುರಂ ಮತ್ತು ಕಾಂಚಿಪುರಂನಲ್ಲಿ ವರುಣ ಅಬ್ಬರಿಸಲಿದ್ದಾನೆ. ಈಗಾಗಲೇ ಮಳೆಯ ಅವಾಂತರಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಮಳೆಯಿಂದ ತಮಿಳುನಾಡಿನ ಹಲವೆಡೆ ರಸ್ತೆಗಳೆಲ್ಲ ಜಲಾವೃತಗೊಂಡು ಜನರು ಓಡಾಡಲು ಪರದಾಡುತ್ತಿದ್ದಾರೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಜನರು ರೈನ್​ಕೋಟ್​ ಮತ್ತು ಕೊಡೆಗಳ ಮೊರೆ ಹೋಗಿದ್ದು, ಮಳೆ ಮುಂದುವರಿಯುವ ಪರಿಣಾಮ ಜನರು ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಸನ್ನಿವೇಶ ಎದುರಾಗಿದೆ.

    ಚೆನ್ನೈ ಮತ್ತು ಇತರೆ ಜಿಲ್ಲೆಗಳಲ್ಲಿ ಶುಕ್ರವಾರ ಯಾವುದೇ ರಜಾ ದಿನವನ್ನು ಘೋಷಣೆ ಮಾಡಿಲ್ಲ. ಆದರೆ, ಗುರುವಾರ ರಜೆ ನೀಡಲಾಗಿತ್ತು. ಚೆಂಬರಂಬಕ್ಕಂ ಸರೋವರದಿಂದ ನೀರು ಬಿಡುಗಡೆಯಾದ ಕಾರಣ ಕಾಂಚೀಪುರಂ ಜಿಲ್ಲೆಯ ಅಡ್ಯಾರ್ ನದಿಯ ತಗ್ಗು ಪ್ರದೇಶಗಳು ಮತ್ತು ಆರು ಹಳ್ಳಿಗಳಿಗೆ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

    ಇದೇ ಸಂದರ್ಭದಲ್ಲಿ ತಮಿಳುನಾಡಿನ ರಾಜಧಾನಿಯಲ್ಲಿ ಕಳೆದ ಕೆಲವು ವಾರಗಳಿಂದ ನಿರಂತರ ಮಳೆಯಿಂದಾಗಿ ರೆಡ್ ಹಿಲ್ಸ್ ಜಲಾಶಯ ಎಂದು ಕರೆಯಲ್ಪಡುವ ಚೆನ್ನೈನ ಪುಝಲ್ ಜಲಾಶಯವು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿದೆ. ಗುರುವಾರ ಜಲಾಶಯದಿಂದ ಸುಮಾರು 389 ಕ್ಯೂಸೆಕ್ ನೀರು ಬಿಡಲಾಗಿದ್ದು, ಪ್ರವಾಹ ಸ್ಥಿತಿ ತಲೆದೂರಿದೆ.

    ಸೈಕ್ಲೋನ್​ ಎಚ್ಚರಿಕೆ
    ಇತ್ತೀಚಿನ ಮಾಹಿತಿ ಪ್ರಕಾರ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಪಕ್ಕದಲ್ಲಿರುವ ಕಡಿಮೆ ಒತ್ತಡದ ಪ್ರದೇಶವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಮೇಲಿದೆ. ಇದು ವಾಯುಭಾರಕುಸಿತವಾಗಿ ಬದಲಾಗಲಿದ್ದು, ಡಿಸೆಂಬರ್ 3ರ ಹೊತ್ತಿಗೆ ಸೈಕ್ಲೋನ್​ ಆಗಿ ಮತ್ತಷ್ಟು ತೀವ್ರಗೊಳ್ಳಲಿದೆ. ಬಳಿಕ ಸೈಕ್ಲೋನ್​ ಚಂಡಮಾರುತವು ವಾಯುವ್ಯಕ್ಕೆ ಚಲಿಸಿ, ಡಿಸೆಂಬರ್ 4ರ ಮುಂಜಾನೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಯನ್ನು ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕಂಟ್ರೋಲ್​ ರೂಮ್​ಗೆ ಸಿಎಂ ಭೇಟಿ
    ಇದರ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಗುರುವಾರ ರಿಪನ್ ಕಟ್ಟಡಗಳಿಗೆ ಭೇಟಿ ನೀಡಿ ಚೆನ್ನೈನ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಪ್ರದೇಶದಲ್ಲಿ ರಾಜ್ಯದ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಚೆನ್ನೈ ಕಾರ್ಪೊರೇಷನ್ ಪ್ರಾರಂಭಿಸಿದ 1913 ಸಹಾಯವಾಣಿಯಲ್ಲಿ ನಿವಾಸಿಗಳ ಕರೆಗಳಿಗೆ ಉತ್ತರಿಸಿದರು ಮತ್ತು ಕುಂದುಕೊರತೆಗಳನ್ನು ವಿಳಂಬವಿಲ್ಲದೆ ಪರಿಹರಿಸಲು ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಡಿಸೆಂಬರ್ 2 ರಿಂದ 4ರ ನಡುವೆ ಮತ್ತು ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ಡಿಸೆಂಬರ್ 3 ರಿಂದ 4 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಂಧ್ರಪ್ರದೇಶದ ರಾಯಲಸೀಮಾಕ್ಕೂ ಡಿ. 4ರಂದು ಇದೇ ರೀತಿಯ ಎಚ್ಚರಿಕೆ ನೀಡಲಾಗಿದೆ. ಇಂದು ಕೇರಳ, ಮಾಹೆ, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. (ಏಜೆನ್ಸೀಸ್​)

    ಅತಿಯಾದ ಮೆಂತ್ಯ ಸೇವನೆಯಿಂದ ಈ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಚ್ಚರ!

    ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ನಿಗೂಢವಾಗಿ ನಾಪತ್ತೆ! ಎಲ್ಲಿರಬಹುದು? ಪೊಲೀಸರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts