More

    ಮಳೆ ಮಧ್ಯೆಯೂ ಮತದಾನ

    ಎಂ.ಕೆ.ಹುಬ್ಬಳ್ಳಿ: ಎರಡು ತಂಡಗಳ ಮಧ್ಯೆ ಏರ್ಪಟ್ಟಿದ್ದ ಪೈಪೋಟಿಯಿಂದ ರಂಗೇರಿದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಗೆ ಬುಧವಾರ ಮತದಾನ ನಡೆಯಿತು. ಮಳೆ ಮಧ್ಯೆಯೂ ಮತದಾರರು ಆಗಮಿಸಿದ್ದರು.

    15ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 37ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಅದರಲ್ಲಿ ಉದ್ಯಮಿ ನಾಸೀರ್ ಬಾಗವಾನ ನೇತೃತ್ವದ ಮಲಪ್ರಭಾ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣಾ ತಂಡದ 15ಅಭ್ಯರ್ಥಿಗಳು ಹಾಗೂ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಪುತ್ರ ಪ್ರಕಾಶಗೌಡ ಪಾಟೀಲ ನೇತೃತ್ವದ ರೈತ ಅಭಿವೃದ್ಧಿ ಸಹಕಾರಿ ತಂಡದ 15 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಉಳಿದ ಏಳು ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧೆಗಿಳಿದಿದ್ದರು.

    ಭರ್ಜರಿ ಮತದಾನ: ಬುಧವಾರ ಬೆಳಗ್ಗೆ 9ಗಂಟೆಗೆ ಆರಂಭವಾಗಿದ್ದ ಮತದಾನ ಕಾರ್ಯಕ್ಕೆ ಧಾರಾಕಾರವಾಗಿ ಸುರಿದ ಮಳೆ ಒಂದಿಷ್ಟು ಅಡಚಣೆ ಮಾಡಿತ್ತು. ಇದರಿಂದ ಮತದಾನವು ನಿಧಾನಗತಿಯಲ್ಲಿತ್ತು. ಮಳೆ ವಿರಾಮ ಪಡೆಯುತ್ತಿದ್ದಂತೆ ಏರಿಕೆ ಕಂಡ ಮತದಾನ ಪ್ರಕ್ರಿಯೆ ಹುರುಪಿನೊಂದಿಗೆ ಸಾಗಿತು. ಸಂಜೆ 4ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾರರನ್ನು ಕರೆತರಲು ಅಭ್ಯರ್ಥಿಗಳು ವಾಹನದ ವ್ಯವಸ್ಥೆ ಕಲ್ಪಿಸಿದ್ದು ಕಂಡುಬಂತು. ಒಟ್ಟು 2451 ಮತಗಳ ಪೈಕಿ 2049(ಶೇ.83) ಮತದಾರ ರೈತರು ತಮ್ಮ ಹಕ್ಕು ಚಲಾಯಿಸಿದರು.

    ನ್ಯಾಯಾಲಯದಿಂದ ಮತದಾನ ಹಕ್ಕು:ಕಾರ್ಖಾನೆಯಲ್ಲಿ 16ಸಾವಿರಕ್ಕೂ ಅಧಿಕ ಷೇರುದಾರರಿದ್ದರೂ, ಸಹಕಾರಿ ಸಂಘದ ನಿಯಮಗಳಿಗೆ ತಿದ್ದುಪಡಿ ತಂದಿದ್ದರಿಂದ ಮೂರು ವರ್ಷ ಕಬ್ಬು ಪೂರೈಸುವ ಜತೆಗೆ ಮೂರು ವರ್ಷ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತಪ್ಪದೆ ಹಾಜರಿರಬೇಕೆಂಬ ನಿಯಮದ ಹಿನ್ನೆಲೆ, 1603 ಸದಸ್ಯರಿಗೆ ಮಾತ್ರ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ, ಮತದಾನ ಹಕ್ಕಿನಿಂದ ವಂಚಿತರಾಗಿದ್ದ ಸದಸ್ಯರ ಪೈಕಿ ಎರಡು ತಂಡಗಳ ಒಟ್ಟು 848ಕ್ಕೂ ಅಧಿಕ ರೈತ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮಗೂ ಮತದಾನ ಹಕ್ಕು ನೀಡಬೇಕೆಂದು ವಿನಂತಿಸಿದ್ದರು. ರೈತ ಸದಸ್ಯರ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ರೈತರ ಪೈಕಿ 848 ರೈತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿ ಮಂಗಳವಾರ ಆದೇಶಿಸಿತ್ತು. ಹೀಗಾಗಿ ಮೊದಲಿದ್ದ 1603 ಮತದಾರರ ಜತೆ ಹೊಸದಾಗಿ 848 ಮತದಾರರಿಗೂ ಮತದಾನದ ಅವಕಾಶ ನೀಡಲಾಗಿತ್ತು. ಆದರೆ, ಈ ಪೈಕಿ 101ಜನ ರೈತ ಸದಸ್ಯರು ಗೈರಾದರು.

    ಅಗತ್ಯ ವ್ಯವಸ್ಥೆ: ಕೋವಿಡ್-19 ತಡೆಗಟ್ಟುವ ಉದ್ದೇಶದಿಂದ ಮತದಾನ ಕೇಂದ್ರದ ಬಳಿ ಆರೋಗ್ಯ ಇಲಾಖೆಯಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತಗಟ್ಟೆಗೆ ಬರುವ ಪ್ರತಿಯೊಬ್ಬರನ್ನು ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಪೊಲೀಸ್ ಹಾಗೂ ಇತರೆ ಇಲಾಖೆಗಳಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ನಡೆದ ಮತ ಎಣಿಕೆಯಲ್ಲಿ ನಾಸೀರ್ ಬಾಗವಾನ ನೇತೃತ್ವದ ಪೆನಲ್ ಮುನ್ನಡೆ ಸಾಧಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts