More

    ರೈಲು ಹಳಿ ಸಂಚಾರ ಸಾಹಸ

    ಅನ್ಸಾರ್ ಇನೋಳಿ ಉಳ್ಳಾಲ

    ಒಂದೆಡೆ ಹಳಿಗೆ ಗೇಟ್ ಅಳವಡಿಸುವ ಯತ್ನದಲ್ಲಿರುವ ರೈಲ್ವೆ ಇಲಾಖೆ. ಬದಲಿ ಸಂಚಾರಕ್ಕೆ ಮೀಸಲಾಗಿದ್ದ ಕೆಳಸೇತುವೆಯೂ ಬಂದ್. ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿರುವ ನಾಗರಿಕರು. ಇದು ತೊಕ್ಕೊಟ್ಟು ರೈಲು ಹಳಿಯಿಂದ ಉಂಟಾಗಿರುವ ಸಮಸ್ಯೆ.

    ತೊಕ್ಕೊಟ್ಟು ಜಂಕ್ಷನ್‌ನಿಂದ 100 ಮೀಟರ್ ಅಂತರದಲ್ಲಿರುವ ರೈಲು ಹಳಿ ಸಾರ್ವಜನಿಕರಿಗೆ ಅಪಾಯಕಾರಿಯಾಗಿದೆ. ಆದರೆ ಸಾರ್ವಜನಿಕರಿಗೆ ಇದನ್ನು ದಾಟುವುದು ಅನಿವಾರ್ಯ. ಈ ಭಾಗದಲ್ಲಿ ಶಾಲೆ, ಕಾಲೇಜು, ಮಾರುಕಟ್ಟೆ, ಅಂಬೇಡ್ಕರ್ ರಂಗ ಮಂದಿರ, ಬ್ಯಾಂಕ್, ವಸತಿ ಪ್ರದೇಶಗಳಿವೆ. ಒಂದು ಕಾಲದಲ್ಲಿ ತೊಕ್ಕೊಟ್ಟು ಪರಿಸರಕ್ಕೆ ಇದುವೇ ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಹಳಿ ದಾಟುವುದು ಅನಿವಾರ್ಯ. ಉಳ್ಳಾಲ ದರ್ಗಾ, ಸಂತ ಸೆಬಾಸ್ತಿಯನ್ ಚರ್ಚ್, ಭಗವತಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುವ ಭಕ್ತರಿಗೆ ಇದು ಹತ್ತಿರದ ದಾರಿ.

    ಪ್ರತಿದಿನ ಕೇರಳ, ತಮಿಳುನಾಡಿಗೆ ಪ್ಯಾಸೆಂಜರ್, ಎಕ್ಸ್‌ಪ್ರೆಸ್, ಸೂಪರ್ ಎಕ್ಸ್‌ಪ್ರೆಸ್ ಹೀಗೆ ಹಲವು ರೈಲುಗಳು ಇಲ್ಲಿಂದ ಚಲಿಸುತ್ತವೆ. ಒಂದು ಹಳಿ ಇದ್ದ ಸಂದರ್ಭ ಹಲವು ಮಂದಿ ಸಾವನ್ನಪ್ಪಿದ್ದರು. ಎರಡು ಹಳಿ ನಿರ್ಮಾಣ ಬಳಿಕ ಸಾವಿನ ಸಂಖ್ಯೆ ಹೆಚ್ಚಾಗಿದೆ. ಹಳಿಗೆ ಅಡ್ಡಲಾಗಿ ಗೇಟಿನ ವ್ಯವಸ್ಥೆ ಇಲ್ಲದಿರುವುದು, ರೈಲು ಯಾವ ಹಳಿಯಲ್ಲಿ ಬರುತ್ತಿವೆ ಎಂಬ ಗೊಂದಲದಿಂದ ಅಪಘಾತ ನಡೆಯುತ್ತಿವೆ.

    ಎಚ್ಚೆತ್ತ ರೈಲ್ವೆ ಇಲಾಖೆ!: ಜೆಪ್ಪುವಿನಲ್ಲಿ ಇತ್ತೀಚೆಗೆ ರೈಲು ಬಡಿದು ಮಹಿಳೆಯರಿಬ್ಬರು ಸಾವಿಗೀಡಾದ ಬಳಿಕ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ. ಕೆಲದಿನಗಳ ಹಿಂದೆ ಅಧಿಕಾರಿಗಳು ಕಾರ್ಮಿಕರೊಂದಿಗೆ ತೊಕ್ಕೊಟ್ಟಿಗೆ ದೌಡಾಯಿಸಿ ಕಬ್ಬಿಣದ ಗೇಟ್ ಅಳವಡಿಸುವ ಮೂಲಕ ಹಳಿ ದಾಟುವುದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಇದಕ್ಕೆ ಸಾರ್ವಜನಿಕರು, ಉಳ್ಳಾಲ ನಗರಸಭೆ ಪ್ರತಿನಿಧಿಗಳು ಆಕ್ಷೇಪವೆತ್ತಿದ್ದಾರೆ. ಆದರೂ ಇಲಾಖೆ ಆದೇಶ ಮೀರುವಂತಿಲ್ಲ. ಗೇಟ್ ಅಳವಡಿಸಲಾಗಿದ್ದರೂ, ಬದಿಯಲ್ಲೊಂದು ಸಣ್ಣ ರಸ್ತೆ ಇಡಲಾಗಿದ್ದು, ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ರೈಲ್ವೆ ಇಲಾಖೆ ನಗರಸಭೆಗೆ ಗಡುವು ನೀಡಿದೆ.

    ಕೆಳ ಸೇತುವೆಯೂ ಬಂದ್!: ತೊಕ್ಕೊಟ್ಟು ಜಂಕ್ಷನ್‌ನಲ್ಲಿದ್ದ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿ ರೈಲು ಹಳಿ ದಾಟುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಳಸೇತುವೆ ನಿರ್ಮಿಸಲಾಗಿದೆ. ಆದರೆ ಸಾರ್ವಜನಿಕರು ಬಳಸದ ಕಾರಣ ಕ್ರಮೇಣ ಈ ರಸ್ತೆ ಮುಚ್ಚಲ್ಪಟ್ಟು ನೀರು ಹರಿಯುವ ಕಾಲುವೆಯಾಯಿತು. ಕೆಲ ವರ್ಷಗಳ ಹಿಂದೆ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿ ಮಸೀದಿ ನಿರ್ಮಾಣವಾಗಿದ್ದು, ಇಲ್ಲಿಗೆ ಬರುವ ಜನ ಹತ್ತಿರದ ರಸ್ತೆಯನ್ನಾಗಿ ಕೆಳಸೇತುವೆ ಬಳಸಲು ಆರಂಭಿಸಿದರು. ದಿನ ಕಳೆದಂತೆ ದ್ವಿಚಕ್ರ ವಾಹನ ಸಂಚಾರ ಆರಂಭಗೊಂಡಿತು. ಆದರೀಗ ಈ ರಸ್ತೆಯನ್ನೂ ಬಂದ್ ಮಾಡಲಾಗಿದೆ. ಈ ರಸ್ತೆಯನ್ನೇ ಸರಿಪಡಿಸಿದರೆ ತೊಕ್ಕೊಟ್ಟು ಒಳಪೇಟೆ ದಾಟುವವರು ಅಪಾಯಕಾರಿ ರೈಲು ಹಳಿ ದಾಟುವ ಬದಲು ಸುರಕ್ಷಿತವಾಗಿ ಕೆಳಸೇತುವೆ ಬಳಸಬಹುದಾಗಿದೆ.

    ಹಲವು ವರ್ಷಗಳಿಂದ ಸಾರ್ವಜನಿಕರು ರೈಲು ಹಳಿ ದಾಟಿ ಒಳಪೇಟೆಗೆ ಬರುತ್ತಿದ್ದಾರೆ. ಜನರ ಸುರಕ್ಷೆ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಗೇಟ್ ಅಳವಡಿಸಲು ಮುಂದಾಗಿದ್ದು, ನಮ್ಮ ಮನವಿ ಮೇರೆಗೆ ಪರ್ಯಾಯ ವ್ಯವಸ್ಥೆಗಾಗಿ ತಿಂಗಳ ಕಾಲಾವಕಾಶ ನೀಡಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
    ಯು.ಪಿ.ಅಯೂಬ್ ಮಂಚಿಲ, ಉಪಾಧ್ಯಕ್ಷ, ಉಳ್ಳಾಲ ನಗರಸಭೆ

    ಸಂತ ಸೆಬಾಸ್ತಿಯನ್ ಚರ್ಚ್, ಶಾಲೆ, ಕಾಲೇಜಿಗೆ ತೊಕ್ಕೊಟ್ಟು ಒಳಪೇಟೆಯಾಗಿಯೇ ಹೋಗಬೇಕು. ವಾಹನ ಇದ್ದವರಿಗೆ ಯಾವುದೇ ಸಮಸ್ಯೆಯಿಲ್ಲದಿದ್ದರೂ ನಡೆದು ಹೋಗುವವರು ರೈಲು ಹಳಿ ದಾಟಿದರೆ ಬೇಗನೇ ತಲುಪಲು ಆಗುತ್ತದೆ. ಇಲಾಖೆ ಗೇಟ್ ಹಾಕಿದರೆ ಸುತ್ತು ಬಳಸಿ ಹೋಗಬೇಕಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಅಗತ್ಯ.
    ಆಲ್ವಿನ್ ಡಿಸೋಜ ಅಧ್ಯಕ್ಷ, ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts