More

    ನೇಮಕಾತಿ ಪಟ್ಟಿ ತಯಾರಿ ವಿಧಾನದಲ್ಲಿ ಗೊಂದಲ

    ರಾಯಚೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ 371 ಜೆ ಅಡಿಯಲ್ಲಿ ರಚಿಸಲಾದ ಕಾನೂನು ಅನುಷ್ಠಾನಕ್ಕಾಗಿ ಹಲವು ಸುತ್ತೋಲೆ ಹೊರಡಿಸಲಾಗಿದ್ದು, ಪ್ರತಿ ನೇಮಕಾತಿಯಲ್ಲಿ ವಿಭಿನ್ನ ರೀತಿಯ ನೇಮಕಾತಿ ಪಟ್ಟಿ ತಯಾರಿಸುವ ವಿಧಾನದಿಂದ ಗೊಂದಲವಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಡಾ.ರಜಾಕ್ ಉಸ್ತಾದ್ ಹೇಳಿದರು.

    ಗೊಂದಲ ಸರಿಪಡಿಸುವಂತೆ ಒತ್ತಾಯಿಸಿ ಜೂ.30ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    2015ರ ಮೇ 22ರಂದು ಮೊದಲ ಬಾರು ಆಯ್ಕೆಯ ವಿಧಾನವನ್ನು ಸೂಚಿಸಿ ಅಭ್ಯರ್ಥಿಗಳನ್ನು ಯಾವ ವೃಂದಕ್ಕೆ ಸೇರುತ್ತೀರಿ ಎಂದು ಕೇಳಲಾಯಿತು. 2016ರ ನ.16ರಂದು ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದ ಹುದ್ದೆಗೆ ಆಯ್ಕೆ ಮಾಡಲು ಸೂಚಿಸಲಾಯಿತು. 2019ರ ಮೇ 23ರಂದು ಮಿಕ್ಕುಳಿದ ವೃಂದ, ಸ್ಥಳೀಯ ವೃಂದಕ್ಕೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಯಿತು. 2020ರ ಜೂ.6ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಯಾವ ವೃಂದ ಸೇರುತ್ತೀರಿ ಎಂದು ಕೇಳಲಾಯಿತು.

    ಗೊಂದಲದಿಂದಾಗಿ ಹಲವಾರು ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಸರ್ಕಾರ ಜೂ.15ರಂದು 371ನೇ ಮೀಸಲಾತಿಯನ್ನು ಸಮರ್ಪಕ ಅನುಷ್ಠಾನಗೊಳಿಸುವ ಉದ್ದೇಶದಿಂದ ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆಯಂತೆ ನೇಮಕಾತಿ ನಡೆದಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ.

    ಸುತ್ತೋಲೆಯಲ್ಲಿ ಮುಂದಿನ ನೇಮಕಾತಿಗಳು ಸ್ಥಳೀಯ ವೃಂದ ಹಾಗೂ ಮಿಕ್ಕುಳಿದ ವೃಂದಕ್ಕೆ ಪ್ರತ್ಯೇಕ ಅಧಿಸೂಚನೆ, ಪ್ರತ್ಯೇಕ ಪರೀಕ್ಷೆ, ಪ್ರತ್ಯೇಕ ಆಯ್ಕೆ ಪಟ್ಟಿ ತಯಾರಿಸಲು ಸೂಚಿಸಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿ ಎರಡು ಬಾರಿ ಶುಲ್ಕ, ಎರಡು ಬಾರಿ ಪರೀಕ್ಷೆ ಬರೆಯಬೇಕಾಗಲಿದೆ.

    ಕಾರಣ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆದು 2016ರ ಸುತ್ತೋಲೆ ಆಧಾರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಮೊದಲಿಗೆ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸಬೇಕು ಎಂದು ಡಾ.ರಜಾಕ್ ಉಸ್ತಾದ್ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts