More

    ಸಮವಸ್ತ್ರ ವಿತರಣೆ ತನಿಖೆ ನಡೆಸಲು ಗುತ್ತಿಗೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಸ್.ಮಾರೆಪ್ಪ ಒತ್ತಾಯ

    ರಾಯಚೂರು: ನಗರಸಭೆಯಿಂದ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆಗೆ 20 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಸ್.ಮಾರೆಪ್ಪ ಒತ್ತಾಯಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅನಧಿಕೃತ ಪೌರ ಕಾರ್ಮಿಕರ ಸಂಘದ ಹೆಸರಿನಲ್ಲಿ ಸುಳ್ಳು ಆರೋಪ ಮಾಡಲಾಗುತ್ತಿದ್ದು, ಇದನ್ನು ಖಂಡಿಸಿ ನ.14ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

    ನಗರಸಭೆ ಅಧ್ಯಕ್ಷೆ ವೈಯಕ್ತಿಕವಾಗಿ ಮಹಿಳಾ ಪೌರಕಾರ್ಮಿಕರಿಗೆ ನೀಡಿರುವ ಸೀರೆಗಳ ಭಾವಚಿತ್ರಗಳನ್ನು ಆಯೋಗಕ್ಕೆ ನೀಡಿ ಸಮವಸ್ತ್ರ ನೀಡಲಾಗಿದೆ ಎಂದು ದಾಖಲೆ ಸೃಷ್ಟಿಸಿ ಹಣವನ್ನು ಪೌರಾಯುಕ್ತ ಮತ್ತು ಪರಿಸರ ಇಂಜಿನಿಯರ್ ಹಣ ದುರುಪಯೋಗ ಮಾಡಿಕೊಂಡಿದ್ದಾರೆ.

    ಸರ್ಕಾರ ರಾಜ್ಯದಲ್ಲಿನ 11,133 ನೇರ ವೇತನ ಪೌರ ಕಾರ್ಮಿಕರ ಪೈಕಿ 5,533 ಕಾರ್ಮಿಕರನ್ನು ಕಾಯಂಗೊಳಿಸಲು ಅಧಿಸೂಚನೆ ಹೊರಡಿಸಿದೆ. ರಾಯಚೂರು ನಗರಸಭೆಯಲ್ಲಿ 364 ಮಂಜೂರಾದ ಹುದ್ದೆಗಳಲ್ಲಿ 162 ಕಾಯಂ ಪೌರ ಕಾರ್ಮಿಕರಿದ್ದು, 202 ಖಾಲಿ ಹುದ್ದೆಗಳಿವೆ. ಆದರೆ ಪೌರಾಯುಕ್ತರು 225 ಮಂಜೂರಾದ ಹುದ್ದೆಗಳಿದ್ದು, 162 ಕಾಯಂ ಕಾರ್ಮಿಕರಿದ್ದಾರೆ. 63 ಖಾಲಿ ಹುದ್ದೆಗಳ ಮಾತ್ರ ನೇರ ವೇತನ ಪೌರ ಕಾರ್ಮಿಕರು ಅರ್ಹರಾಗಿರುತ್ತಾರೆ ಎಂದು ಹೇಳುತ್ತಿದ್ದು ಇದರಿಂದ ನೂರಾರು ನೇರ ವೇತನ ಪೌರ ಕಾರ್ಮಿಕರಿಗೆ ವಂಚನೆಯಾಗಲಿದೆ ಎಂದರು.

    ಸಂಘದ ಪದಾಧಿಕಾರಿಗಳಾದ ಶರಣಪ್ಪ ದಿನ್ನಿ, ಶ್ರೀನಿವಾಸ ಕಲವಲದೊಡ್ಡಿ, ಶ್ರೀನಿವಾಸ ಕೊಪ್ಪರ, ಆಂಜನೇಯ ಕುರುಬದೊಡ್ಡಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts