More

    ಜಲಾಶಯದಿಂದ 1.27 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ, ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ರಾಯಚೂರು: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡುತ್ತಿರುವುದರಿಂದ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಗೊಳಗಾಗಿದ್ದು, ಪಂಪ್‌ಸೆಟ್‌ಗಳು ಮುಳುಗಡೆಯಾಗಿವೆ.

    ಕಳೆದ ಒಂದು ವಾರದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಲಿಂಗಸುಗೂರು ತಾಲೂಕಿನ ನಡುಗಡ್ಡೆಗಳು ಸಂಪರ್ಕ ಕಳೆದುಕೊಂಡಿದ್ದು, ಶೀಲಹಳ್ಳಿ ಹಾಗೂ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜ್ ಕೂಡಾ ಮುಳುಗಡೆಯಾಗಿದೆ.

    ಪ್ರಸ್ತುತ ತುಂಗಭದ್ರಾ ಜಲಾಶಯದಿಂದ ಮಂಗಳವಾರ 1.27 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಜಲಾಶಯ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಳವಾದಲ್ಲಿ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಗಳಿವೆ.

    ಏಕಾಏಕಿ ಹೆಚ್ಚಿನ ನೀರು ಹರಿಬಿಟ್ಟಿರುವುದರಿಂದ ರಾಯಚೂರು ತಾಲೂಕಿನ ಬಿಚ್ಚಾಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ನಡೆಸಿದ್ದ ಜಪದ ಕಟ್ಟೆ ಹಾಗೂ ರಾಯರ ಏಕಶಿಲಾ ಬೃಂದಾವನ ಜಲಾವೃತಗೊಂಡಿವೆ. ನದಿ ತೀರದ ಪಂಪ್‌ಸೆಟ್‌ಗಳು ಮುಳುಗಡೆಯಾಗಿವೆ. ನದಿ ಅಕ್ಕಪಕ್ಕದ ಜಮೀನುಗಳಿಗೂ ನೀರು ನುಗ್ಗಿ ಬೆಳೆಗಳು ಹಾನಿಗೊಳಗಾಗಿವೆ.

    ತುಂಗಭದ್ರಾ ನದಿಗೆ 2 ಲಕ್ಷ ಕ್ಯೂಸೆಕ್ ಮೇಲ್ಪಟ್ಟು ನೀರು ಹರಿದು ಬಂದಲ್ಲಿ ಸಿಂಧನೂರು ಹಾಗೂ ಮಾನ್ವಿ ತಾಲೂಕಿನ ಹಲವು ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಲಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಮಳೆಯಿಲ್ಲದ ಕಾರಣ ಹೆಚ್ಚಿನ ಪ್ರಮಾಣದ ಅವಘಡ ಸಂಭವಿಸುವ ಸಾಧ್ಯತೆ ಕಡಿಮೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಿ ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡುತ್ತಿದ್ದು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳನ್ನು ಗ್ರಾಮಗಳಿಗೆ ನಿಯೋಜನೆ ಮಾಡಿದೆ.

    ಧುಮ್ಮಿಕ್ಕಿ ಹರಿಯುತ್ತಿರುವ ಆರ್‌ಡಿಎಸ್ : ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾನ್ವಿ ತಾಲೂಕಿನ ರಾಜೋಳ್ಳಿಬಂಡಾ ಜಲಾಶಯದಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ನೋಡುಗರನ್ನು ಸೆಳೆಯುತ್ತಿದೆ. ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ಸಂಪೂರ್ಣವಾಗಿ ಮುಳುಗಡೆಯಾಗಿವೆ. ಇದರ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡಿವೆ. ಜಲಾಶಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಭೀತಿ ಮರೆತು ನದಿ ಪಾತ್ರದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದರೂ ಯುವಕರು ನದಿಪಾತ್ರಕ್ಕೆ ತೆರಳುತ್ತಿರುವುದು ಕಂಡು ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts