More

    ಸಾರಿಗೆ ಇಲಾಖೆಯ ಎಲ್ಲ ಸೇವೆಗಳು ಆನ್‌ಲೈನ್‌ನತ್ತ!

    ಶಿವಮೂರ್ತಿ ಹಿರೇಮಠ ರಾಯಚೂರು

    ಮೋಟಾರು ವಾಹನ ರಾಜಸ್ವ ಸಂಗ್ರಹಣೆ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣ ಕಾರ್ಯಗಳನ್ನು ನಡೆಸುತ್ತಿರುವ ಸಾರಿಗೆ ಇಲಾಖೆಯ ಬಹುತೇಕ ಎಲ್ಲ ಸೇವೆಗಳು ಆನ್‌ಲೈನ್‌ಗೊಳಿಸಲಾಗುತ್ತಿದ್ದು, ಜನರು ಕಚೇರಿಗೆ ಹೋಗದೆ ಆನ್‌ಲೈನ್‌ನಲ್ಲಿಯೇ ಎಲ್ಲ ಸೇವೆಗಳನ್ನು ಪಡೆಯುವಂತಹ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.

    ಇಲಾಖೆ ಒಟ್ಟು 58 ಸೇವೆಗಳಲ್ಲಿ ಈಗಾಗಲೇ 30 ಸೇವೆಗಳನ್ನು ಆನ್‌ಲೈನ್‌ಗೆ ಒಳಪಡಿಸಲಾಗಿದ್ದು, ಪ್ರಮುಖ ಒಂದೆರಡು ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಆನ್‌ಲೈನ್‌ಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮಕೈಗೊಳ್ಳಲು ಮುಂದಾಗಿದೆ.

    ಈ ಹಿಂದೆ ವಾಹನ ನೋಂದಣಿ ಮತ್ತು ವಾಹನ ಚಲಾವಣೆ ಪ್ರಮಾಣಪತ್ರಕ್ಕಾಗಿ ಆರ್‌ಟಿಒ ಕಚೇರಿ ಮುಂದೆ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸುವ ಸಂದರ್ಭ ಈಗಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ನಿಗದಿತ ದಿನಾಂಕವನ್ನು ಆಯ್ಕೆ ಮಾಡಿಕೊಂಡು ಹಾಜರಾದರೆ ಸಾಕು ಸೇವೆ ದೊರೆಯುವಂತಹ ವ್ಯವಸ್ಥೆಯಿದೆ.

    ಇಲಾಖೆಯ ಸಾರಥಿ-4 ಮತ್ತು ವಾಹನ-4 ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ಕಲಿಕಾ ಚಾಲನಾ ಅನುಜ್ಞಾ ಪತ್ರ, ನಿರ್ವಾಹಕರ ಪರವಾನಗಿ, ವಾಹನಗಳ ನೋಂದಣಿ ಪ್ರಮಾಣಪತ್ರ, ಮಾಲೀಕತ್ವ ವರ್ಗಾವಣೆ ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ.

    ಜನರು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಸಿ ದಾಖಲೆಗಳನ್ನು ಕಚೇರಿಗೆ ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕಚೇರಿಗೆ ದಾಖಲೆಗಳನ್ನು ನೀಡಬೇಕಾದ ಅಗತ್ಯವಿಲ್ಲ ಎನ್ನುವಂತಹ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

    ಈ ಹಿಂದೆ ಜನರು ಕೆಲಸಕ್ಕಾಗಿ ಕಚೇರಿಗೆ ಅಲೆದಾಡಬೇಕಾದ ಸ್ಥಿತಿಯಿತ್ತು. ಆನ್‌ಲೈನ್ ವ್ಯವಸ್ಥೆ ಜಾರಿಗೊಂಡ ನಂತರದಲ್ಲಿ ಜನರು ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ ಎನ್ನುವಂತಾಗಿದೆ. ಜತೆಗೆ ವಾಹನ ನೋಂದಣಿ ಕಾರ್ಯವೂ ವಾಹನಗಳ ಶೋರೂಮ್‌ಗಳಿಗೆ ವಹಿಸಲಾಗಿರುವುದರಿಂದ ವಾಹನ ಮಾಲೀಕರಿಗೆ ಕಚೇರಿಗೆ ಹೋಗಬೇಕಾದ ಅವಶ್ಯಕತೆ ಇಲ್ಲದಂತಾಗಿದೆ.

    ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಚಾಲನಾ ಪರವಾನಗಿ ನೀಡುವಾಗ ಪರಿಶೀಲನೆ ಮತ್ತು ಭಾರಿ ವಾಹನಗಳ ಪರಿಶೀಲನೆಗೆ ಮಾತ್ರ ಸೀಮಿತವಾಗುತ್ತದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಸರ್ವರ್‌ಗಳ ನಿರ್ವಹಣೆ ದೆಹಲಿಯಿಂದ ನಿರ್ವಹಣೆ ಮಾಡಲಾಗುತ್ತಿರುವುದರಿಂದ ಸ್ಥಳೀಯವಾಗಿ ಸಿಬ್ಬಂದಿಗಳು ಏನೂ ಮಾಡದಂತಹ ಸ್ಥಿತಿಯಲ್ಲಿದ್ದಾರೆ.

    ಇಲಾಖೆಗೆ ಸೇವೆಗಳನ್ನು ಆನ್‌ಲೈನ್‌ಗೊಳಿಸಿದ ನಂತರದಲ್ಲಿ ಜನರಿಗೆ ಅನುಕೂಲವಾಗಿದೆ. ಆದರೆ ಮುಂದೆ ಸರ್ಕಾರ ಏಜೆನ್ಸಿಗಳಿಗೆ ಹೊಣೆಗಾರಿಕೆ ವಹಿಸಿದ ನಂತರದಲ್ಲಿ ಜನರಿಗೆ ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆಗಳಿದ್ದು, ಇಲಾಖೆಯಲ್ಲಿನ ಸಿಬ್ಬಂದಿಗಳ ಕೆಲಸ ಏನು, ಅವರ ಕೆಲಸ ಭದ್ರತೆ ವಿಷಯದ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಮೂಡಿಬರಬೇಕಾಗಿದೆ.

    ಮಧ್ಯವರ್ತಿಗಳ ಕಾಟ
    ಸಾರಿಗೆ ಇಲಾಖೆಯಲ್ಲಿ ಯಾವುದೇ ಕೆಲಸ ಆಗಬೇಕಾದರೂ ಮಧ್ಯವರ್ತಿಗಳ ಮೂಲಕವೇ ಹೋಗಬೇಕು ಎನ್ನುವಂತಹ ಸ್ಥಿತಿಯಿತ್ತು. ಸೇವೆಗಳು ಆನ್‌ಲೈನ್‌ಗೊಳಿಸಲಾದ ನಂತರವೂ ತಾಂತ್ರಿಕ ಜ್ಞಾನ ಇಲ್ಲದವರನ್ನು ಮತ್ತೊಬ್ಬರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ವಾಹನ ನೋಂದಣಿ ಕಾರ್ಯ ಶೋರೂಮ್‌ಗಳಿಗೆ ವಹಿಸಿದ ನಂತರ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಸಾರಿಗೆ ಇಲಾಖೆ ಅನುಮತಿಯಿಲ್ಲದೆ ನೋಂದಣಿ ಸಂಖ್ಯೆ ನೀಡುವ ವ್ಯವಸ್ಥೆ ಆರಂಭವಾದಲ್ಲಿ ಶೋರೂಮ್‌ಗಳು ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆಯುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿವೆ.

    ಈಗಾಗಲೇ ಇಲಾಖೆಯ ಅರ್ಧಕ್ಕೂ ಹೆಚ್ಚು ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿದೆ. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಕೂಡಾ ಆನ್‌ಲೈನ್‌ಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ಸೇವೆಗಳು ಜನರಿಗೆ ತ್ವರಿತವಾಗಿ ದೊರೆಯಲಿವೆ.
    | ಕೆ.ವಿನಯಾ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಾರಿಗೆ ಇಲಾಖೆ, ರಾಯಚೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts