More

    ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಲಿ

    ರಾಯಚೂರು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮತ್ತು ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ವರದಿಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಮೀಸಲಾತಿ ಹೆಚ್ಚಳವನ್ನು 9ನೇ ಷೆಡ್ಯೂಲ್‌ಗೆ ಸೇರಿಸಬೇಕು ಮತ್ತು ಸಂವಿಧಾನದ ಪರಿಚ್ಛೇದ 341(3)ಗೆ ತಿದ್ದುಪಡಿ ತರಬೇಕು. ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ಜಾರಿಗೊಳಿಸುವುದಾಗಿ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಭರವಸೆಯಂತೆ ಪಕ್ಷದ ನಾಯಕರ ಮೇಲೆ ಒತ್ತಡ ತಂದು ಸಂಸತ್ ಅಧಿವೇಶನದಲ್ಲಿ ವರದಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    ರಾಜ್ಯದಲ್ಲಿ ಬಿಜೆಪಿ ತನ್ನ ಸ್ವಯಂಕೃತ ತಪ್ಪುಗಳಿಂದ ಚುನಾವಣೆಯಲ್ಲಿ ಸೋತಿದೆ ಹೊರತು ಮೀಸಲಾತಿ ಹೆಚ್ಚಳ ಮತ್ತು ಒಳ ಮೀಸಲಾತಿ ಜಾರಿಯಿಂದಲ್ಲ. ಒಳ ಮೀಸಲಾತಿ ವಿಷಯ ಸಂಬಂಧಪಟ್ಟ ಸಮುದಾಯಗಳಿಗೆ ತಲುಪಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಶಿಫಾರಸ್ಸಿನಂತೆ ಒಳ ಮೀಸಲಾತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ಆ ಪಕ್ಷದ ನಾಯಕರು ಭರವಸೆ ನೀಡಿದ್ದರು. ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸ್ಸಿನಲ್ಲಿರುವ ನೂನ್ಯತೆಗಳನ್ನು ಸರಿಪಡಿಸಿ ಪರಿಷ್ಕೃತ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಂದು ಒತ್ತಾಯಿಸಿದರು.

    ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಪರಿಷ್ಕೃತ ಒಳಮೀಸಲಾತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒಪ್ಪಿಗೆ ಪಡೆಯಬೇಕು. ಎಸ್‌ಸಿಪಿ ಕಾಯ್ದೆಯ ಕಲಂ 7 (ಡಿ)ಯನ್ನು ರದ್ದುಪಡಿಸಬೇಕು. 43 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಎಸ್.ಮಾರೆಪ್ಪ ಒತ್ತಾಯಿಸಿದರು. ಪದಾಧಿಕಾರಿಗಳಾದ ರವೀಂದ್ರನಾಥ ಪಟ್ಟಿ, ಜೆ.ಬಿ.ರಾಜು, ಹೇಮರಾಜ ಅಸ್ಕಿಹಾಳ, ರಾಘವೇಂದ್ರ ಬೋರೆಡ್ಡಿ, ಎಂ.ಈರಣ್ಣ, ಜಂಬಯ್ಯ, ನರಸಪ್ಪ, ನರಸಿಂಹಲು, ಆಂಜನೇಯ ಉಟ್ಕೂರು ಉಪಸ್ಥಿತರಿದ್ದರು.
    ಫೋಟೊ: ಎಸ್.ಮಾರೆಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts