More

    ಆರ್‌ಟಿಪಿಎಸ್‌ನ 6 ಘಟಕಗಳಿಗೆ ರೆಸ್ಟ್; ರಾಜ್ಯದ ವಿದ್ಯುತ್ ಬೇಡಿಕೆ ಇಳಿಕೆ

    ಬಿಟಿಪಿಎಸ್‌ನ ಒಂದು ಘಟಕ ಬಂದ್

    ರಾಯಚೂರು: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದರಿಂದ ಶಾಖೋತ್ಪನ್ನ ಕೇಂದ್ರದ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.

    ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರದ ಒಟ್ಟು 8 ಘಟಕಗಳ ಪೈಕಿ ವಿದ್ಯುತ್ ಬೇಡಿಕೆ ಕೊರತೆ ಹಿನ್ನೆಲೆಯಲ್ಲಿ 6 ಘಟಕಗಳಲ್ಲಿ ಹಾಗೂ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.

    ಈ ಮುಂಚೆ ರಾಜ್ಯದ ವಿದ್ಯುತ್ ಬೇಡಿಕೆ ಗರಿಷ್ಠ 10 ಸಾವಿರ ಮೆಗಾವಾಟ್ ಆಸುಪಾಸಿನಲ್ಲಿತ್ತು. ಪ್ರಸ್ತುತ ಬೇಡಿಕೆ ಗರಿಷ್ಠ 7,500 ಮೆಗಾವಾಟ್ ಹಾಗೂ ಕನಿಷ್ಠ 4,400 ಮೆಗಾವಾಟ್‌ಗೆ ಬಂದು ತಲುಪಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಶಾಖೋತ್ಪನ್ನ ಕೇಂದ್ರದ ಹಲವು ಘಟಕಗಳಿಗೆ ರೆಸ್ಟ್ ನೀಡಲಾಗಿದೆ.

    ಬೇಡಿಕೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಆರ್‌ಟಿಪಿಎಸ್‌ನ ಒಟ್ಟು 8 ಘಟಕಗಳ ಪೈಕಿ 2 ಮತ್ತು 5ನೇ ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಎರಡು ಘಟಕಗಳಿಂದ 278 ಮೆಗಾವಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ. ಬಿಟಿಪಿಎಸ್‌ನ 3 ಘಟಕಗಳಲ್ಲಿ 2ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.

    ಸೌರ ಮತ್ತು ಪವನ ಮೂಲದಿಂದ 3 ಸಾವಿರ ಮೆಗಾವಾಟ್‌ವರೆಗೆ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಮಳೆಯಿಂದಾಗಿ ಜಲಮೂಲದ ಉತ್ಪಾದನೆಯಲ್ಲೂ ಹೆಚ್ಚಳವಾಗಿ 400 ಮೆಗಾವಾಟ್‌ವರೆಗೆ ವಿದ್ಯುತ್ ಲಭ್ಯವಾಗುತ್ತಿದೆ. ಆರ್‌ಟಿಪಿಎಸ್, ಬಿಟಿಪಿಎಸ್ ಮತ್ತು ವೈಟಿಪಿಎಸ್‌ನಿಂದ 1,500 ಮೆಗಾವಾಟ್‌ವರೆಗೆ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ಬಾಕ್ಸ್….
    ಕಲ್ಲಿದ್ದಲು ಪೂರೈಕೆಗೆ ಅಡ್ಡಿ
    ಮಳೆಯಿಂದಾಗಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಗಣಿಗಳಿಂದ ಕಲ್ಲಿದ್ದಲು ಪೂರೈಕೆಗೆ ಅಡಚಣೆಯಾಗಿದೆ. ಆದರೆ ಬೇಡಿಕೆ ಕೊರತೆಯಿಂದಾಗಿ ಘಟಕಗಳನ್ನು ಸ್ಥಗಿತಗೊಳಿಸಿದ್ದರಿಂದ ಶಾಖೋತ್ಪನ್ನ ಕೇಂದ್ರಗಳಿಗೆ ಸಮಸ್ಯೆಯುಂಟಾಗಿಲ್ಲ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಒಂದೆರಡು ದಿನಗಳಲ್ಲಿ ಕಲ್ಲಿದ್ದಲು ಪೂರೈಕೆ ಯಥಾರೀತಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಆರ್‌ಟಿಪಿಎಸ್‌ನ 1.04 ಲಕ್ಷ ಮೆಟ್ರಿಕ್ ಕಲ್ಲಿದ್ದಲು ದಾಸ್ತಾನಿದ್ದು, ಬಿಟಿಪಿಎಸ್‌ನಲ್ಲಿ ಕೇವಲ 12,000 ಮೆಟ್ರಿಕ್ ಟನ್ ಹಾಗೂ ವೈಟಿಪಿಎಸ್‌ನಲ್ಲಿ 61,900 ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts