More

    ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಏರಿಕೆ; ಆರ್‌ಟಿಪಿಎಸ್‌ನಲ್ಲಿ ಉತ್ಪಾದನೆ ಪುನರಾರಂಭ

    ಸೌರ, ಪವನ ಉತ್ಪಾದನೆಯಲ್ಲಿ ಇಳಿಕೆ

    ರಾಯಚೂರು: ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಏರಿಕೆ ಆಗುತ್ತಿರುವುದರಿಂದ ಕೆಲವು ದಿನಗಳಿಂದ ವಿಶ್ರಾಂತಿ ನೀಡಲಾಗಿದ್ದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಘಟಕಗಳಲ್ಲಿ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಲಾಗುತ್ತಿದೆ. ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರದ 2 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭಿಸಲಾಗಿದೆ.

    ಕೋವಿಡ್ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದಿರುವುದರಿಂದ ಆರ್‌ಟಿಪಿಎಸ್ ಮತ್ತು ಬಿಟಿಪಿಎಸ್‌ನ ಎಲ್ಲ ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರದಲ್ಲಿ ಕೈಗಾರಿಕೆಗಳು ಆರಂಭವಾದ ನಂತರದಲ್ಲಿ ಚಳಿಯ ವಾತಾವರಣದಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ಹೇಳಿಕೊಳ್ಳುವಂತಹ ಏರಿಕೆ ಕಂಡು ಬಂದಿರಲಿಲ್ಲ.

    ಕಳೆದ 15 ದಿನಗಳಿಂದ ವಿದ್ಯುತ್ ಬೇಡಿಕೆಯಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದ್ದು, ಕೆಲವು ದಿನಗಳ ಹಿಂದೆ ಗರಿಷ್ಠ 9 ಸಾವಿರ ಮೆಗಾವಾಟ್ ದಾಟದ ರಾಜ್ಯದ ವಿದ್ಯುತ್ ಬೇಡಿಕೆ ಒಂದೆರಡು ದಿನಗಳಿಂದ ಗರಿಷ್ಠ 11 ಸಾವಿರ ಮೆಗಾವಾಟ್ ಗಡಿ ದಾಟಿ ಸಾಗುತ್ತಿದೆ. ಇದರಿಂದ ಮುಂಬರುವ ಬೇಸಿಗೆಯಲ್ಲಿ ಬೇಡಿಕೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

    ಆರ್‌ಟಿಪಿಎಸ್‌ನ ಒಟ್ಟು 8 ಘಟಕಗಳಲ್ಲಿ ಪ್ರಸ್ತುತ 2 ಮತ್ತು 4ನೇ ಘಟಕಗಳನ್ನು ಪುನರಾರಂಭಿಸಲಾಗಿದ್ದು, 299 ಮೆಗಾವಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ. ಬಿಟಿಪಿಎಸ್‌ನ 3 ಘಟಕಗಳಲ್ಲಿ 2 ಮತ್ತು 3ನೇ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದ್ದು, 647 ಮೆಗಾವಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ.

    ವೈಟಿಪಿಎಸ್‌ನ ಒಂದನೇ ಘಟಕದಿಂದ 456 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಜಲಮೂಲ ಘಟಕಗಳಿಂದ ಕೇವಲ 726 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಬೇಡಿಕೆಯನ್ನು ಸರಿದೂಗಿಸಲು ಸ್ಥಗಿತಗೊಳಿಸಲಾಗಿದ್ದ ಶಾಖೋತ್ಪನ್ನ ಕೇಂದ್ರದ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭಿಸಲಾಗುತ್ತಿದೆ.

    ಪೂರೈಕೆಯಾಗಿ ಅಡಚಣೆಯಿಲ್ಲ : ಈ ಹಿಂದೆ ಸೌರ ಮತ್ತು ಪವನ ಮೂಲದಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದಿಂದ ಸೌರ ಮೂಲದ ಉತ್ಪಾದನೆಯಲ್ಲಿ ಇಳಿಕೆಯುಂಟಾಗಿದೆ. ಈ ಹಿಂದೆ ಸೌರ, ಪವನ ಮೂಲದಿಂದ 4,500 ಮೆಗಾವಾಟ್ ವರೆಗೆ ವಿದ್ಯುತ್ ಲಭ್ಯವಾಗುತ್ತಿತ್ತು. ಆದರೆ ಕೆಲವು ದಿನಗಳಿಂದ 3,500 ರಿಂದ 4 ಸಾವಿರ ಮೆಗಾವಾಟ್‌ವರೆಗೆ ಮಾತ್ರ ಸೌರ, ಪವನ ಮೂಲದಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಜತೆಗೆ ಕೇಂದ್ರ ಜಾಲದಿಂದ ರಾಜ್ಯಕ್ಕೆ 3 ಸಾವಿರ ಮೆಗಾವಾಟ್‌ವರೆಗೆ ವಿದ್ಯುತ್ ಲಭ್ಯವಾಗುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆಯುಂಟಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts