More

    ಕಾಲುವೆಗೆ ನೀರು ಹರಿಸುವ ಐಸಿಸಿ ನಿರ್ಣಯ ಅವೈಜ್ಞಾನಿಕ

    ರಾಯಚೂರು: ಕೃಷ್ಣಾ ಅಚ್ಚುಕಟ್ಟು ಪ್ರಾಧಿಕಾರದ ನೀರಾವರಿ ಸಲಹಾ ಸಮಿತಿಯಲ್ಲಿ ನಾರಾಯಣಪುರ ಬಲದಂಡೆ ಮತ್ತು ಎಡದಂಡೆ ಕಾಲುವೆಗೆ ನೀರು ಹರಿಸುವ ಕುರಿತಂತೆ ತೆಗೆದುಕೊಂಡಿರುವ ನಿರ್ಧಾರ ಅವೈಜ್ಞಾನಿಕವಾಗಿದ್ದು, ಕೂಡಲೇ ಅದನ್ನು ಮರು ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಾಲುವೆಗೆ ತಕ್ಷಣ ನೀರು ಬಂದ್ ಮಾಡಿ ಡಿ.12ರಿಂದ ನೀರು ಹರಿಸಲು ನಿರ್ಧರಿಸಿದ್ದರಿಂದ ಜಿಲ್ಲೆಯಲ್ಲಿ ರೈತರು ಬೆಳೆದ ಮೆಣಸಿನಕಾಯಿ ನೀರಿಲ್ಲದೆ ಹಾನಿಗೊಳಗಾಗಲಿದೆ ಎಂದರು.

    ಬೆಂಗಳೂರಿನಲ್ಲಿ ಜರುಗಿದ ಐಸಿಸಿ ಸಭೆಗೆ ರೈತರನ್ನು ಆಹ್ವಾನಿಸಿಲ್ಲ. ರೈತರು, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯಗಳನ್ನು ಸಂಗ್ರಹಿಸದೆ ಸಂಸದ, ಶಾಸಕರು ಮತ್ತು ಸಚಿವರು ತೀರ್ಮಾನ ಕೈಗೊಂಡಿದ್ದಾರೆ. ಏಕಾಏಕಿ ಬಲದಂಡೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

    ಜಿಲ್ಲೆಯ ಲಿಂಗಸುಗೂರು, ದೇವದುರ್ಗ ತಾಲೂಕಿನಲ್ಲಿ 25 ಸಾವಿರ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಹುಳುಗಳ ಕಾಟ ಹೆಚ್ಚಾಗಿದ್ದು, ಯಾವುದೇ ಕೀಟನಾಶಕ ಸಿಂಪಡಣೆ ಮಾಡಿದರೂ ನಿಯಂತ್ರಣವಾಗುತ್ತಿಲ್ಲ. ನೀರು ಹರಿಸಿದರೆ ಮಾತ್ರ ಹುಳುಗಳ ಕಾಟ ತಪ್ಪಲಿದೆ.

    ಬೆಳೆಗೆ 19 ದಿನಗಳ ಕಾಲ ನೀರು ಹರಿಸದಿದ್ದರೆ ಬೆಳೆ ಕೈಗೆ ಬಾರದೆ ರೈತರು ನಷ್ಟಕ್ಕೆ ಗುರಿಯಾಗುವಂತಾಗಲಿದೆ. ಡಿ.12ರ ನಂತರ ನೀರು ಹರಿಸಿದರೂ ಕೊನೆ ಭಾಗಕ್ಕೆ ನೀರು ತಲುಪಲು ಕನಿಷ್ಠ ಮೂರು ದಿನಗಳಾದರೂ ಬೇಕಾಗಲಿದೆ. ಕೆಲವರು ನೀರು ಬಂದ್ ಮಾಡುವುದು ಗೊತ್ತಿಲ್ಲದೆ ವಾರದಿಂದ ಬೆಳೆಗೆ ನೀರು ಹರಿಸಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿದೆ. ಮಳೆಯಿಂದ ರೈತರು ಕಾಲುವೆ ನೀರನ್ನು ಹೆಚ್ಚಾಗಿ ಬಳಕೆ ಮಾಡಿಲ್ಲ. ಆದರೂ ನೀರಿನ ಕೊರತೆ ಉಂಟಾಗಲು ಕಾರಣವೇನು? ಇದರ ಹಿಂದೆ ಹುನ್ನಾರವಿದ್ದು, ನೀರು ಎಲ್ಲಿಗೆ ಹೋಗಿದೆ ಎನ್ನುವ ಲೆಕ್ಕಾಚಾರ ತಪ್ಪಿದೆ.

    ಭತ್ತ ವ್ಯಾಪಾರಕ್ಕೆ ಭದ್ರತೆಯಿಲ್ಲದಂತಾಗಿದೆ. ದಲ್ಲಾಳಿಗಳು ರೈತರಿಂದ ಮಾರಾಟ ಮಾಡಲು ಕಮಿಷನ್ ಪಡೆದು ಮಾರಾಟ ಮಾಡಿಸುತ್ತಾರೆ. ಆದರೆ ಮಿಲ್‌ಗಳಿಗೆ ಯಾವ ದರಕ್ಕೆ ಮಾರಾಟ ಮಾಡಲಾಗಿದೆ ಎಂದು ಹೇಳುವುದಿಲ್ಲ. ಜಿಲ್ಲಾಡಳಿತದಿಂದ ದಲ್ಲಾಳಿಗಳಿಗೆ ಗುರುತಿನ ಚೀಟಿ ನೀಡುವ ವ್ಯವಸ್ಥೆಯಾಗಬೇಕು ಎಂದು ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಪದಾಧಿಕಾರಿಗಳಾದ ರಮೇಶ ಅಬಕಾರಿ, ಮಲ್ಲಯ್ಯ ಪೂಜಾರಿ, ಸಂಜೀವಗೌಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts