More

    ರಾಯಚೂರಿನಲ್ಲಿ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿ ಪ್ರತಿಷ್ಠಾಪನೆ

    ರಾಯಚೂರು: ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯ ಕಾರಣದಿಂದಾಗಿ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದ್ದ ಗಣೇಶೋತ್ಸವವನ್ನು ಈ ಬಾರಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಲ್ಲದೇ ಈ ಬಾರಿ ಬೃದಲ್ಲಿ 1,237 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವ ಸಮಿತಿಗಳಿಗೆ ಪರವಾನಗಿ ನೀಡಲು ಜಿಲ್ಲಾಡಳಿತದಿಂದ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ.

    ನಗರದ ವೀರ ಸಾವರ್ಕರ್ ವೃತ್ತ, ತೀನ್ ಕಂದಿಲ್ ವೃತ್ತ, ಮಹಾಲಕ್ಷ್ಮಮ್ಮ ದೇವಸ್ಥಾನ, ಬಲರಾಮ ಶಾಲೆ ಗಜಾನನ ಮಂಡಳಿ, ಗೀತಾ ಮಂದಿರ ಗಜಾನನ ಸಮಿತಿ ಸೇರಿದಂತೆ ಹಲವು ಪ್ರತಿಷ್ಠಿತ ಸಮಿತಿಗಳಿಂದ ವಿಶಿಷ್ಟ ರೀತಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕೆಲವು ಸಮಿತಿಗಳು ಪ್ರತಿಷ್ಠಾಪನೆ ಮಾಡಲಾದ ಬುಧವಾರ ರಾತ್ರಿಯೇ ಮೂರ್ತಿಗಳನ್ನು ವಿಸರ್ಜನೆ ಮಾಡಿವೆ.

    ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾದ ವೇದಿಕೆ ಮತ್ತು ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಲಾಗಿದೆ. ಪೊಲೀಸ್ ಕಾಯ್ದೆ 37 (ಬಿ) 1963ರನ್ವಯ ಧ್ವನಿವರ್ಧಕ ಬಳಕೆಗೆ ಪರವಾನಗಿ ನೀಡಲಾಗಿದೆ ಹೊರತು ಡಿಜೆ ಬಳಕೆ ಮಾಡದಂತೆ ಪೊಲೀಸರಿಂದ ಎಚ್ಚರಿಕೆ ನೀಡಲಾಗಿದೆ. ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಖಾಸಬಾವಿಯನ್ನು ಸ್ವಚ್ಛಗೊಳಿಸಲಾಗಿದೆ. ಜತೆಗೆ ಪ್ರಮುಖ ರಸ್ತೆ ಸೇರಿದಂತೆ ಹಲವೆಡೆ ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಕಲಾಗಿದೆ.

    ವಿನಾಯಕನ ಗಾತ್ರಕ್ಕೆ ಹೆಚ್ಚಿನ ಆದ್ಯತೆ
    ಗಣೇಶೋತ್ಸವ ಸಮಿತಿಗಳು ಗಣೇಶ ಮೂರ್ತಿಗಳ ಗಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡು ಬರುತ್ತಿದೆ. ಒಂದೆರಡು ಗಣೇಶೋತ್ಸವ ಸಮಿತಿಗಳನ್ನು ಹೊರತುಪಡಿಸಿದರೆ ಅಲಂಕಾರ, ವಿಶಿಷ್ಟ ರೀತಿಯ ಆಚರಣೆಗಿಂತ ಬಹುತೇಕ ಸಮಿತಿಗಳು ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿವೆ. ಗೀತಾ ಮಂದಿರ, ಕೋದಂಡರಾಮದ ದೇವಸ್ಥಾನದಲ್ಲಿ ವಿಶೇಷ ರೀತಿಯ ಅಲಂಕಾರ ಮಾಡಲಾಗಿದೆ. ಗೀತಾ ಮಂದಿರದಲ್ಲಿ ಪುಷ್ಪಗಳಿಂದ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದ್ದರೆ, ಕೋದಂಡರಾಮ ದೇವಸ್ಥಾನದಲ್ಲಿ ಮುಂಭಾಗ ಆಕರ್ಷಕ ರೀತಿಯಲ್ಲಿ ನವಿಲಿನ ಪ್ರತಿಕೃತಿಯನ್ನು ನಿರ್ಮಾಣ ಮಾಡಿರುವುದು ಗಮನ ಸೆಳೆಯುತ್ತಿದೆ.

    ಗಣೇಶೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಇದೊಂದು ಪ್ರತಿಭೆಗಳನ್ನು ಹೊರ ತರುವ ವೇದಿಕೆಯಾಗಿದೆ. ಈ ಬಾರಿಯ ಗಣೇಶ ಹಬ್ಬದ ಉತ್ಸಾಹ ಹೆಚ್ಚಾಗಿ ಕಂಡು ಬರುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಬೇಕಾಗಿದೆ.
    | ಡಿ.ಕೋಮಲಾ, ಶಿಕ್ಷಕಿ, ಪೊಲೀಸ್ ಕಾಲೋನಿ ಸರ್ಕಾರಿ ಪ್ರೌಢಶಾಲೆ, ರಾಯಚೂರು

    ಈ ಬಾರಿ ರಾಯಚೂರು ನಗರದಲ್ಲಿ ಒಟ್ಟು 1,237 ಗಣೇಶ ಮೂರ್ತಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 3,028 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಜತೆಗೆ ಮೂರ್ತಿಗಳ ವಿಸರ್ಜನೆಗಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
    | ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts