More

    ಕೆಕೆಆರ್‌ಡಿಬಿ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆಕ್ಷೇಪ

    ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದು ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಹೇಳಿದ್ದಾರೆ.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರದೇಶಾಭಿವೃದ್ಧಿಗಾಗಿ ಮಂಡಳಿಯೂ ಒಂದು ಸರ್ಕಾರವಾಗಿ ಕೆಲಸ ಮಾಡಲು ಅವಕಾಶವಿದೆ. ಆದರೆ, ಮಂಡಳಿಯ ಅಧಿಕಾರವನ್ನು ಸರ್ಕಾರ ನಿಷ್ಕ್ರಿಯಗೊಳಿಸುತ್ತಾ ಬಂದಿದೆ. ಈಗ ಅಧಿಕಾರದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದೆ. ಮಂಡಳಿಯ ಕಾನೂನಿನಲ್ಲಿ ರಾಜ್ಯಪಾಲು ಹಾಗೂ ಆಡಳಿತ ಮಂಡಳಿ ಅಧ್ಯಕ್ಷಗೆ ಮಾತ್ರ ಪ್ರಗತಿ ಪರಿಶೀಲನೆಯ ಅಧಿಕಾರವಿದೆ. ಸಚಿವರಿಗೆ ಅಧಿಕಾರವಿಲ್ಲದಿದ್ದರೂ ಯೋಜನಾ ಇಲಾಖೆ ಸಚಿವ ನಾರಾಯಣಗೌಡ ಜು.13ರಂದು ಪ್ರಗತಿ ಪರಿಶೀಲನಾ ಸಭೆ ನಡೆಸಲು ಮುಂದಾಗಿದ್ದು ನಿಯಮ ಬಾಹಿರವಾಗಿದೆ ಎಂದರು.

    ಎರಡು ವರ್ಷದಿಂದ ಮಂಡಳಿಯ ಆಡಳಿತ ರಚನೆ ಮಾಡದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಯೋಜನಾ ಇಲಾಖೆ ಸಚಿವರು ಬಂದು ಸಭೆ ನಡೆಸುವ ದಯನೀಯ ಸ್ಥಿತಿ ಕೆಕೆಆರ್‌ಡಿಬಿಗೆ ಬಂದಿದೆ. ಪ್ರತಿ ಕಾಮಗಾರಿ ಹಾಗೂ ಕಾಮಗಾರಿ ಬದಲಿಗೆ ಅನುಮೋದನೆ ಪಡೆಯಲು ಸರ್ಕಾರಕ್ಕೆ ತಿಳಿಸಬೇಕು. ಈ ಹಿಂದೆ ಈ ಅಧಿಕಾರ ಆಡಳಿತ ಮಂಡಳಿಗೆ ಇತ್ತು. ಇದೀಗ ಅಧಿಕಾರವನ್ನು ಮಂಡಳಿ ಕಳೆದುಕೊಂಡಿದೆ. ಹಿಂದೆ ಮಂಡಳಿ ಅಧ್ಯಕ್ಷತೆಯನ್ನು ಈ ಭಾಗದ ಸಚಿವರಿಗೆ ನೀಡಲಾಗುತ್ತಿತ್ತು. ಆದರೆ, ಸರ್ಕಾರ ಶಾಸಕರೊಬ್ಬರನ್ನು ಅಧ್ಯಕ್ಷರನ್ನಾಗಿಸಿದೆ ಎಂದು ಆರೋಪಿಸಿದರು.

    ಮಂಡಳಿಗೆ 1,500 ಕೋಟಿ ರೂ. ಅನುದಾನ ನೀಡುತ್ತಿದ್ದು, ಎಲ್ಲಿ ಖರ್ಚಾಯಿತು, ಎಷ್ಟು ಉಳಿಯಿತು ಎಂದು ಸಮರ್ಪಕ ಮಾಹಿತಿಯಿಲ್ಲ. ಹಣಕಾಸು ಇಲಾಖೆಯಲ್ಲೊಂದು ಲೆಕ್ಕ, ಇಲ್ಲಿಯದೇ ಒಂದು ಲೆಕ್ಕ. ಪ್ರಶ್ನೆ ಮಾಡಬೇಕಾದ ಶಾಸಕರೇ ಸುಮ್ಮನಿದ್ದರಿಂದ ಸರ್ಕಾರ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದರು.

    ಸರ್ಕಾರವು ಕೆಕೆಆರ್‌ಡಿಬಿಯ 100 ಕೋಟಿ ರೂ. ಅನುದಾನವನ್ನು ಬಸವರಾಜ ಪಾಟೀಲ್ ಸೇಡಂ ಅವರ ಮಾನವ ಸಂಪನ್ಮೂಲ ಮತ್ತು ಕೃಷಿ ಅಭಿವೃದ್ಧಿ ಸಂಘಕ್ಕೆ ನೀಡಿದೆ. ಈ ಬಗ್ಗೆ ಶಾಸಕರು ಮಾತ್ರ ಮೌನವಹಿಸಿದ್ದಾರೆ. ಈ ಭಾಗದ ಶಾಸಕರು, ಸಂಸದರು ಸಭೆ ಬಹಿಷ್ಕಾರ ಮಾಡಬೇಕು, ಇಲ್ಲವಾದಲ್ಲಿ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಡಾ.ರಜಾಕ್ ಉಸ್ತಾದ್ ಎಚ್ಚರಿಕೆ ನೀಡಿದರು. ಸಮಿತಿ ಪದಾಧಿಕಾರಿಗಳಾದ ಶಿವಕುಮಾರ ಯಾದವ, ವೀರೇಶ ಹೀರಾ, ಮಹ್ಮದ್ ರಫಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts