More

    ನ್ಯಾಯಪರ ಹೋರಾಟಕ್ಕೆ ಸಿಗಲಿದೆ ಜಯ- ಏಮ್ಸ್ ಹೋರಾಟದಲ್ಲಿ ಮಂತ್ರಾಲಯ ಶ್ರೀ ಭಾಗಿ

    ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ 308 ದಿನಗಳಿಂದ ಸ್ಥಳೀಯ ಮಹಾತ್ಮಗಾಂಧಿ ಪುತ್ಥಳಿ ಬಳಿ ಏಮ್ಸ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಹೋರಾಟದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಗುರುವಾರ ಸಂಜೆ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು.

    ರಾಯಚೂರು ಜಿಲ್ಲೆ ಐತಿಹಾಸಿಕ, ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದರೂ ಸೌಲಭ್ಯಗಳಿಂದ ವಂಚಿತವಾಗಿರುವುದು ದುರದೃಷ್ಟಕರ. ಹಿಂದೆ ಜಿಲ್ಲೆಗೆ ಐಐಟಿ ಮಂಜೂರಾತಿಯಿಂದ ವಂಚಿತವಾಗಿದೆ. ಜಿಲ್ಲೆಯ ಜನರ ಏಮ್ಸ್‌ನ ಒಕ್ಕೋರಲಿನ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಾಗಿದೆ. ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಈಗಾಗಲೇ ಪ್ರಧಾನಿ, ಕೇಂದ್ರ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿಗೆ ತಿಳಿಸಲಾಗಿದೆ. ಆದರೆ ಈ ಬಗ್ಗೆ ಅಗತ್ಯ ಕ್ರಮಗಳು ಜರುಗುತ್ತಿಲ್ಲ. ಜಿಲ್ಲೆಯ ಜನರ ಸಹನೆಯ ಪರೀಕ್ಷೆ ಮಾಡುವುದು ಬೇಡ. ಹೋರಾಟ ಸಾಧನೆ ಆಗುವವರೆಗೆ ಮುಂದುವರಿಯಲಿದೆ. ಹೋರಾಟಗಾರರು ನಿರಾಸೆಯಾಗುವುದು ಬೇಡ. ಭಗವಂತನ ಅನುಗ್ರಹ ಮತ್ತು ನ್ಯಾಯಪರ ಹೋರಾಟಕ್ಕೆ ಜಯ ಸಿಗಲಿದೆ. ಏಮ್ಸ್ ಮಾದರಿ ಆಸ್ಪತ್ರೆ ಬೇಡ. ಏಮ್ಸ್ ಅನ್ನೇ ಮಂಜೂರು ಮಾಡಬೇಕು ಎಂದು ಡಾ.ಸುಬುಧೇಂದ್ರ ತೀರ್ಥರು ಹೇಳಿದರು.

    ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿ, ಜಿಲ್ಲೆಗೆ ಹಿಂದುಳಿದ ಹಣೆಪಟ್ಟಿ ಹಚ್ಚಲಾಗಿದೆ. ನಿರಂತರವಾಗಿ 308 ದಿನಗಳ ಹೋರಾಟ, 58 ದಿನಗಳ ಉಪವಾಸ ಧರಣಿ, 10,500 ಸಾವಿರ ಜನರಿಂದ ರಕ್ತದಲ್ಲಿ ಪತ್ರ ಬರೆದರೂ ಸರ್ಕಾರದಿಂದ ಸ್ಪಂದನೆ ದೊರೆಯುತ್ತಿಲ್ಲ. ಐಐಟಿ ಕೇಳಿದರೆ ಐಐಐಟಿ ನೀಡಲಾಗಿದೆ. ಈಗ ಏಮ್ಸ್ ಕೇಳಿದರೆ ಏಮ್ಸ್ ಮಾದರಿ ಆಸ್ಪತ್ರೆ ಮಂಜೂರು ಮಾಡುವ ಮೂಲಕ ಹೋರಾಟದ ದಾರಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಶ್ರೀಗಳ ಆಗಮನದಿಂದ ಹೋರಾಟಕ್ಕೆ ಬಲ ಬಂದಿದ್ದು, ಸರ್ಕಾರ ವಾರದೊಳಗೆ ಸ್ಪಂದನೆ ನೀಡದಿದ್ದರೆ ಆಮರಣಾಂತ ನಿರಶನ ಆರಂಭಿಸಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಕಲ್ಲೂರಿನ ಶ್ರೀ ಶಿವರಾಮನಂದ ಭಾರತಿ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ವಿವಿಧ ಸಮಾಜಗಳ ಮುಖಂಡರಾದ ಪಾರಸಮಲ್ ಸುಖಾಣಿ, ನರಸಿಂಗರಾವ್ ದೇಶಪಾಂಡೆ, ಸಾವಿತ್ರಿ ಪುರುಷೋತ್ತಮ, ಬೆಲ್ಲಂ ನರಸರೆಡ್ಡಿ, ಮಾರಂ ತಿಪ್ಪಣ್ಣ, ರವೀಂದ್ರ ಜಲ್ದಾರ್, ಕಡಗೋಲ ಆಂಜಿನೇಯ, ಶಶಿರಾಜ ಮಸ್ಕಿ, ಗಿರೀಶ ಕನಕವಿಡು, ಅಶೋಕಕುಮಾರ ಜೈನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts